Advertisement
ಅದು ಹಳ್ಳಿ ದೇವಸ್ಥಾನ. ದೇವರಿಗಂದು ಹಲಸಿನ ಹಬ್ಬ! ಹಲಸಿನ ಹಣ್ಣಿನಿಂದ ಸಿದ್ಧಪಡಿಸಿದ ಅಪ್ಪದ ನೈವೇದ್ಯ. ಪೂಜೆಯ ಬಳಿಕ ಅಪ್ಪ ಪ್ರಸಾದ ವಿತರಣೆ. ಕಾಸರಗೋಡು (ಕೇರಳ) ಜಿಲ್ಲೆಯ ಪಡ್ರೆ ಗ್ರಾಮದ ಏತಡ್ಕದ ಶ್ರೀ ಸದಾಶಿವ ದೇವಸ್ಥಾನದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಅಪ್ಪದ ಸೇವೆಗೆ (ಹಲಸಿನ ಹಬ್ಬ) ಆರ್ಧ ಶತಮಾನಕ್ಕೂ ಮೀರಿದ ಇತಿಹಾಸ. ಜೂನ್ ಹದಿನೈದರಿಂದ ಜುಲೈ ಹದಿನೈದರೊಳಗೆ ಅನುಕೂಲಕರ ದಿವಸದಂದು ಆಚರಣೆ.
Related Articles
Advertisement
ದಶಕದೀಚೆಗೆ ಹಲಸು ಆಂದೋಳನವಾಗಿ ಜನಮನದೊಳಗೆ ಇಳಿಯುತ್ತಿದೆ. ವೈಜ್ಞಾನಿಕ ನೆಲೆಗಟ್ಟು ಸಿಕ್ಕಿದೆ. ಗಿಡ ನೆಡುವಲ್ಲಿಂದ ಮೌಲ್ಯವರ್ಧಿತ ಉತ್ಪನ್ನ ತಯಾರಿ ತನಕ ಬೇರು ಇಳಿಸಿದೆ. ನಿರ್ಲಕ್ಷಿತ ಹಣ್ಣೆಂಬ ಶಾಪದಿಂದ ಕಳಚಿಕೊಳ್ಳುತ್ತಿದೆ. ಅಪವಾದವೂ ಇಲ್ಲದಿಲ್ಲ. ಮೇಳಗಳಿಂದಾಗಿ ಸಾರ್ವಜನಿಕರಲ್ಲಿ ಒಲವು ಹಬ್ಬುತ್ತಿದೆ. ಈ ಎಲ್ಲಾ ಪ್ರಚಾರಗಳ ಹೊರತಾಗಿಯೂ ಏತಡ್ಕದ ಅಪ್ಪ ಸೇವೆಯು ವಿಶೇಷ ಮನ್ನಣೆಗೆ ಪಾತ್ರವಾಗಿದೆ. ದೇವಸ್ಥಾನಕ್ಕೆ ಬರುವಾಗ ಎಲ್ಲರೂ ಒಂದೊಂದು ಹಣ್ಣು ತರಬೇಕು ಎನ್ನುವ ನಂಬುಗೆಯಿದೆ. ಒಂದೆಡೆ ಮಳೆಗಾಲ, ಮತ್ತೂಂದೆಡೆ ಮರ ಏರಿ ಕೊಯ್ಯುವ ಜಾಣ್ಮೆಯ ಕುಶಲಿಗರ ಅಭಾವ. ಒಂದು ವೇಳೆ ಹಣ್ಣು ಲಭ್ಯವಾದರೂ ಸಾಗಾಟ ಸಮಸ್ಯೆ. ಇಷ್ಟೆಲ್ಲಾ ಇದ್ದರೂ ಹಣ್ಣಿಗೆ ಕೊರತೆಯಿಲ್ಲ ಬಿಡಿ.
ದೇವಾಲಯದ ನಂಬುಗೆ ಹೀಗಾದರೆ, ಕುಟುಂಬಗಳಲ್ಲೂ ಹಲಸು ಆರಾಧನೆಯ ಸ್ವರೂಪ ಪಡೆದಿದೆ. ಕಾಸರಗೋಡು ಜಿಲ್ಲೆಯ ನೀರ್ಚಾಲಿನ ಅಳಕ್ಕೆ ಕುಟುಂಬದಲ್ಲಿ ನಾಲ್ಕುನೂರಕ್ಕೂ ಮಿಕ್ಕಿ ಮನೆಗಳು. ಕುಟುಂಬದಲ್ಲಿ ದೇವರಿಗೆ ಒಪ್ಪಿಸುವುದು ಎಂಬ ಆರಾಧನೆಯಲ್ಲಿ ಹಲಸಿಗೆ ಮಣೆ. ದೇವರ ಸಮರ್ಪಣೆಗೆ ಹಲಸಿನ ಕಾಯಿಯ ದೋಸೆ. ಅಂದು ಮನೆಮಂದಿ ಮಾತ್ರ ಹಾಜರಿ. ಮನೆ ಮಗಳ ಉಪಸ್ಥಿತಿ. ಆದರೆ ಅಳಿಯನಿಗೂ ಪ್ರವೇಶವಿಲ್ಲ! ಪೂಜೆಯ ಬಳಿಕವಷ್ಟೇ ಪ್ರವೇಶ. ಅಕಸ್ಮಾತ್ ನೆಂಟರು ಬಂದರೆ ಮನೆಯ ಹೊರತಾದ ಕಟ್ಟಡದಲ್ಲಿ ವ್ಯವಸ್ಥೆ! “ದೊಡ್ಡ ಕುಟುಂಬವಾದ್ದರಿಂದ ಮರಣ ಮತ್ತು ವೃದ್ಧಿಯ ಸೂತಕಗಳ ಸುದ್ದಿ ಆ ದಿವಸ ಗೊತ್ತಾಗಬಾರದು ಎನ್ನುವ ಕಾರಣದಿಂದ ಹಿರಿಯರು ಶಿಸ್ತಿನಿಂದ ಈ ನಿಯಮ ರೂಢಿಸಿಕೊಂಡಿರಬಹುದು’ ಎನ್ನುತ್ತಾರೆ ಚಂದ್ರಶೇಖರ್. ಆರಾಧನೆಯ ಬಳಿಕವಷ್ಟೇ ಆ ಮನೆ ಯಲ್ಲಿ ಹಲಸಿನ ಖಾದ್ಯಗಳ ತಯಾರಿ, ಸೇವನೆ.
ಏತಡ್ಕದ ಹಬ್ಬದ ಸುದ್ದಿ ಕೇಳಿ ತುಮಕೂರು ಜಿಲ್ಲೆಯ ತೋವಿನ ಕೆರೆಯ ಕೃಷಿಕ ಪತ್ರಕರ್ತ ತಮ್ಮೂರಿನ ಹಲಸಿನ ನಂಟನ್ನು ಹಂಚಿ ಕೊಂಡರು – ಜಿಲ್ಲೆಯಲ್ಲಿ ಹಲಸಿನ ಎಳೆಯ ಕಾಯಿಯಿಂದ ಮಾಡುವ ಅಡುಗೆ ಕೆತ್ತುಕಾಯಿ ಸಾರು (ಸಾಂಬಾರು) ಮನೆಮಾತು. ಇದನ್ನು ರಾಗಿ ಮುದ್ದೆಯ ಜತೆಯಲ್ಲಿ ಸೇವಿಸಿದರೆ ಮುದ್ದೆ ಹೊಟ್ಟೆಗಿಳಿವ ಲೆಕ್ಕ ಸಿಗುವುದೇ ಇಲ್ಲ! ಪ್ರತಿ ವರುಷ ಹೊಲಗಳಲ್ಲಿ ಮಾಡುವ ಪೂಜೆ, ದೇವಾಲಯದ ಜಾತ್ರೆಗಳಲ್ಲಿ ಕೆತ್ತು ಕಾಯಿಯ ಸಾರು ವಿಶೇಷ. ಆಹ್ವಾನವನ್ನು ನೀಡುವಾಗಲೇ ಕೆತ್ತು ಕಾಯಿ ಸಾರಿನ ಊಟ ಇದೆ, ಬನ್ನಿ ಎಂದು ಕರೆಯುವುದು ರೂಢಿ. ಸಾಮಾನ್ಯವಾಗಿ ಜುಲೈ ತಿಂಗಳಲ್ಲಿ ಆಚರಿಸುವ ಏಕಾದಶಿ ಹಬ್ಬಕ್ಕೆ ಹಲಸಿನ ಹಣ್ಣಿನ ರಸಾಯನ ಬೇಕೇ ಬೇಕು.
ಮಧುಗಿರಿ ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಅಪ್ಪನಹಳ್ಳಿಯ ನಂಜುಡೇಶ್ವರ ಸ್ವಾಮಿ ದೇವಲಾಯ ಪ್ರಸಿದ್ಧ. ಭಕ್ತರಿಗೆ ಶಿವರಾತ್ರಿ ಯಂದು ಉಪವಾಸ. ಪೂಜೆಯ ಬಳಿಕ ಹಲಸಿನ ಕೆತ್ತಕಾಯಿ ಸಾರು, ರಾಗಿ ಮುದ್ದೆ ಮತ್ತು ಅನ್ನವನ್ನು ಸೇವಿಸಿದ ಬಳಿಕವೇ ಉಪವಾಸ ಮುಕ್ತಾಯ. ರಾತ್ರಿಯಿಡೀ ಸಾರು ಮಾಡುವ ಪ್ರಕ್ರಿಯೆ ನಡೆಯು ತ್ತದೆ. ಬೆಳಿಗ್ಗೆ ರಾಗಿ ಮುದ್ದೆ ಅನ್ನ ಮಾಡಿ ಭಕ್ತರಿಗೆ ಉಣ ಪಡಿಸುತ್ತಾರೆ. ಕೆಲವರು ಸಾಂಬಾರನ್ನು ಕ್ಯಾರಿಯರ್‌ಗಳಲ್ಲಿ ಮನೆಗೆ ಒಯ್ಯುತ್ತಾರೆ. ಹರಕೆ ಮಾಡಿಕೊಂಡ ಸ್ಥಳಿಯರು ಐದಾರು ಟ್ರಾಕ್ಟರ್ ತುಂಬಾ ಎಳೆ ಹಲಸಿನ ಕಾಯಿಯನ್ನು ದೇವಳಕ್ಕೆ ತಲಪಿಸುತ್ತಾರೆ.
ಇನ್ನು ವಿದೇಶದತ್ತ ನೋಟ ಹರಿಸಿ. ಅಲ್ಲೂ ಧಾರ್ಮಿಕತೆ ನಂಟು. ಶ್ರೀಲಂಕಾದಲ್ಲಿ ಹಲಸು ದೇವವೃಕ್ಷ. ಸಿಂಹಳ ಭಾಷೆಯಲ್ಲಿ ಹಲಸಿನ ಮರಕ್ಕೆ ಬಾತ್ ಗಾಸಾ ಅಂದರೆ ಅನ್ನದ ಮರ ಎಂದು ಹೆಸರು. ವಿವಾಹ ಸಮಾರಂಭಗಳಲ್ಲಿ ಖಾದ್ಯಗಳಿಗೆ ಮೊದಲಾದ್ಯತೆ. ಅಲ್ಲಿನ ಮುರುಗನ್ ದೇವಾಲಯಗಳ ವಾರ್ಷಿಕ ಉತ್ಸವಗಳಲ್ಲಿ ಹಲಸು ಮುಖ್ಯ ಫಲ. ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಕೈಯಲ್ಲಿ ಒಂದಾದರೂ ಹಲಸು ಬೇಕೇ ಬೇಕು! ಪ್ರಸಾದವೆಂದು ಸೊಳೆಗಳನ್ನು ತಿಂದು ಬಿಸಾಡಿದ ಬೀಜಗಳು ಮೊಳಕೆಯೊಡೆದು ಮರ ವಾಗಿ ಬನದ ರೂಪ ಪಡೆದಿದೆಯಂತೆ. ಏತಡ್ಕ ಸದಾಶಿವ ದೇವಾಲಯದ ಅಪ್ಪ ಸೇವೆಯ ಹಿಂದೆ ಹಲಸನ್ನು ಮರೆಯಬೇಡಿ ಎಂಬ ಸಂದೇಶವಿದೆ. ಹಳ್ಳಿಯಲ್ಲಿ ಹಲಸಿನ ಬಳಕೆ, ಸಂರಕ್ಷಣೆಯ ಮಾತುಕತೆ ನಡೆಯುತ್ತಿದೆ. ಕಳೆದ ಕಾಲದ ಕಥನದ ಮರುಓದು ಆರಂಭವಾಗಿದೆ. ಭಾರತ ಯಾಕೆ, ವಿದೇಶದಲ್ಲೂ ಹಲಸಿಗೆ ಮಾನ ಬಂದಿದೆ. ಬಳಕೆ ವ್ಯಾಪಕವಾಗುತ್ತಿದೆ. ಸಂರಕ್ಷಣೆಯ ಅರಿವು ಮೂಡುತ್ತಿದೆ. ಮೌಲ್ಯ ವರ್ಧನೆಯತ್ತ ಆಸಕ್ತಿ ಕುದುರುತ್ತಿದೆ. ಹೊಸ ಹೊಸ ಕಂಪೆನಿಗಳು ರೂಪುಗೊಳ್ಳುತ್ತಿವೆ. ನಮ್ಮಲ್ಲಿ ಬಹುತೇಕ ಸಮಾರಂಭಗಳಲ್ಲಿ ಹಲಸು ಒಂದು ಐಟಂ ಆಗಿ ಬಟ್ಟಲೇರಿದೆ. ಮಾತಿಗೆ ಸಿಕ್ಕಾಗ ಸ್ವ-ಪ್ರತಿಷ್ಠೆಯಿಂದ ಹಲಸನ್ನು ಹಗುರವಾಗಿ ಕಾಣುವ ಮನಸ್ಸುಗಳ ಊಟದ ಟೇಬಲ್ಲಿನಲ್ಲಿ ಮೇಣ ಅಂಟಿರುತ್ತದೆ. ಎಪ್ರಿಲ್‌ನಲ್ಲಿ ಪೊಳಲಿಯಲ್ಲಿ ಕಲ್ಲಂಗಡಿ ಹಣ್ಣಿಗೆ ಸ್ಥಾನ- ಮಾನ. ಅಲ್ಲಿನ ರಾಜರಾಜೇಶ್ವರಿ ದೇವಿಯ ಜಾತ್ರೋತ್ಸವ ಸಂದರ್ಭಕ್ಕೆ ಫಸಲು ಬರುವಂತೆ ಕೃಷಿಕರು ಬೆಳೆಯುತ್ತಾರೆ. ಈ ಕೃಷಿಯ ಹಿಂದೆ ಧಾರ್ಮಿಕ ಭಾವನೆ, ನಂಬುಗೆ ಜೀವಂತವಾಗಿದೆ. ಫಲಗಳಿಗಿರುವ ಧಾರ್ಮಿಕ ನಂಟು ನಶಿಸದಂತೆ ಎಚ್ಚರವಹಿಸ ಬೇಕಾಗಿದೆ. ಮಿಕ್ಕುಳಿದ ಹಣ್ಣುಗಳಿಗೆ ಈ ಭಾಗ್ಯ ಬಂದುಬಿಟ್ಟರೆ ಬದುಕಿನಿಂದ ದೂರವಾಗುತ್ತಿರುವ ಹಣ್ಣುಗಳಿಗೆ ಉಳಿಗಾಲ. ಈ ನಂಬುಗೆಗಳು ಹಿರಿಯರ ಬಳುವಳಿ. ಅನುಭವಿಸಿ ಹೇಳಿದ ಬದುಕಿನ ಪಠ್ಯ.