Advertisement

ಬ್ರಿಟಿಷ್‌ ಗೆಜೆಟಿಯರ್‌ ಆಧಾರವಲ್ಲ

06:00 AM Dec 25, 2017 | Team Udayavani |

ಗದಗ: ಪ್ರತ್ಯೇಕ ಧರ್ಮದ ಕೂಗಿಗೆ ಬ್ರಿಟಿಷರ ಗೆಜೆಟಿಯರ್‌ ಆಧಾರವೂ ಅಲ್ಲ, ಪರಿಹಾರವಂತೂ ಅಲ್ಲವೇ ಅಲ್ಲ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ| ಚನ್ನ ಸಿದ್ದರಾಮಯ್ಯ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಪ್ರತಿಪಾದಿಸಿದ್ದಾರೆ.

Advertisement

ನಗರದಲ್ಲಿ ರವಿವಾರ ನಡೆದ ವೀರಶೈವ ಲಿಂಗಾಯತ ಧರ್ಮ ಜನಜಾಗೃತಿ ಸಮಾ ವೇಶದಲ್ಲಿ ಆಶೀರ್ವಚನ ನೀಡಿದ ಅವರು, ವೀರಶೈವ ಲಿಂಗಾಯತ ಒಂದೇ ಧರ್ಮದ ಎರಡು ಹೆಸರುಗಳಷ್ಟೇ. ಪ್ರತ್ಯೇಕ ಧರ್ಮಗಳಲ್ಲ. ಕಳೆದ ಮೂರು ತಿಂಗಳಿಂದ ಸಮಾಜ ವನ್ನು ಒಡೆಯುವ ಕೆಲಸ ಕೆಲ ರಾಜಕಾರಣಿ ಗಳಿಂದ, ಕೆಲ ಮಠಾಧೀಶರಿಂದ ನಡೆಯುತ್ತಿರು ವುದು ದುರ್ದೈವ ಸಂಗತಿ ಎಂದರು.

ವೀರಶೈವ ಹಾಗೂ ಲಿಂಗಾಯತ ಎಂದು ಪ್ರತ್ಯೇಕ ಧರ್ಮ ಮಾಡಲು ಧಾರ್ಮಿಕ ಮತ್ತು ಸಾಮಾಜಿಕವಾಗಿ ನಿರ್ಣಯಿಸಲು ಬ್ರಿಟಿಷ್‌ ಗೆಜೆಟಿಯರ್‌ ಆಧಾರವಲ್ಲ, ಧರ್ಮ ಬೆಳೆದು ಬಂದ ಹಾದಿ ಸುದೀರ್ಘ‌ವಾಗಿದೆ. ವೀರಶೈವ ಲಿಂಗಾಯತ ಒಂದೇ ಎಂಬುದಕ್ಕೆ ಅನೇಕ ಗ್ರಂಥ, ಧಾರ್ಮಿಕ ಗ್ರಂಥಗಳು, ವಚನಗಳು ಸಾಕ್ಷಿಯಾಗುತ್ತವೆ ಎಂದು ಪ್ರತಿಪಾದಿಸಿದರು.

18-19ನೇ ಶತಮಾನದ ಬ್ರಿಟಿಷ್‌ ಗೆಜೆಟಿ ಯರ್‌ಗಿಂತ ಹಿಂದಿನ 11-12ನೇ ಶತಮಾನಗಳ ವಚನ, ಗ್ರಂಥಗಳನ್ನು ಪರಿಗಣಿಸಿ ನೋಡಿ. ಇವುಗಳ ಆಧಾರದಲ್ಲಿ ಪ್ರತ್ಯೇಕ ಧರ್ಮ ಪ್ರತಿ ಪಾದಿಸಿದರೆ ಒಂದರ್ಥ ಇರುತ್ತದೆ. ಈಗ ನಡೆ ಯುತ್ತಿರುವುದು ಸಮಾಜ ಒಡೆಯುವ ಕೆಲಸ. ಆ ಮೂಲಕ ರಾಜಕೀಯ ಸ್ವಾರ್ಥ ಸಾಧನೆಗೆ ಮುಂದಾಗಿರುವುದು ಖಂಡನೀಯ ಎಂದರು.

ಕೆಲವರು ತಮ್ಮ ಸಿದ್ಧಾಂತಗಳನ್ನು ಬಸವಣ್ಣನ ಹೆಸರಿನಲ್ಲಿ ಬಿತ್ತುತ್ತಿದ್ದಾರೆ. ತಮ್ಮ ಸಿದ್ಧಾಂತ ಎಂದರೆ ಜನಮನ್ನಣೆ ಸಿಗುವುದಿಲ್ಲ ಎಂಬುದು ಅವರಿಗೆ ಗೊತ್ತು. ಒಂಥರಾ ಮಾರ್ಕೆಟ್‌ನಲ್ಲಿ ಸಿಗುವ ಡೂಪ್ಲಿಕೇಟ್‌ ವಸ್ತುಗಳ ಹಾಗೆ. ವಸ್ತು ಡೂಪ್ಲಿಕೇಟ್‌. ಆದರೆ ಅವುಗಳ ಮೇಲೆ ಬಸವಣ್ಣ ಎಂಬ ಬ್ರ್ಯಾಂಡೆಡ್‌ ಹೆಸರು ಎಂದು ಲೇವಡಿ ಮಾಡಿದರು.

Advertisement

ಸಮಿತಿ ರದ್ದು ಮಾಡಿ: ಸರಕಾರ ಸಮಾಜವನ್ನು ಇಬ್ಭಾಗ ಮಾಡಿಯೇ ತೀರಬೇಕೆಂದು ಸಮಿತಿ ರಚಿಸಿರುವುದು ದುರದೃಷ್ಟಕರ ಸಂಗತಿ. ಇದರಲ್ಲಿ ರಾಜಕೀಯ ನಡೆ ಇದೆ ಎಂಬುದು ಗೊತ್ತಿರದ ವಿಷಯವೇನಲ್ಲ. ಸರಕಾರ ಕೂಡಲೇ ಸಮಿತಿ ರದ್ದುಗೊಳಿಸಿ ಸಮಾಜವನ್ನು ಒಂದುಗೂಡಿಸುವ ಕೆಲಸ ಮಾಡಲಿ ಎಂದು ಆಗ್ರಹಿಸಿದರು.

ಕಳಸಾ ಬಂಡೂರಿ ನಾಲಾ ಜೋಡಿಸಿ ಈ ಭಾಗದ ರೈತರಿಗೆ ನೀರು ಕೊಡುವ ನಿಟ್ಟಿನಲ್ಲಿ ಸರಕಾರ ಉತ್ಸಾಹ ತೋರಲಿ. ಈ ನಿಟ್ಟಿನಲ್ಲಿ ಕ್ರಿಯಾಶೀಲರಾಗಿರಬೇಕಾದ ನೀರಾವರಿ ಸಚಿವರು, ಪ್ರತ್ಯೇಕ ಧರ್ಮ ವಿಚಾರಕ್ಕೆ ಹೆಚ್ಚು ಸಮಯ ವ್ಯಯ ಮಾಡುತ್ತಿದ್ದಾರೆ. ಅದೇ ಸಮಯವನ್ನು ಕಳಸಾ ಬಂಡೂರಿ ವಿಷಯದಲ್ಲಿ ತೋರಿದ್ದರೆ ಅವರನ್ನು ಅಭಿನಂದಿಸಬಹುದಾಗಿತ್ತು ಎಂದರು.

ಸಮಾವೇಶದಲ್ಲಿ ಮುಂಡರಗಿ ಜಗದ್ಗುರುಗಳು, ಉಜ್ಜಯಿನಿ ಜಗದ್ಗುರುಗಳು, ಕಾಶೀ ಜಗದ್ಗುರುಗಳು, ರಂಭಾಪುರಿ ಜಗದ್ಗುರುಗಳು, ಹೊಸಪೇಟೆ ಜಗದ್ಗುರುಗಳು ಆಶೀರ್ವಚನ ನೀಡಿದರು. ಸಮಾವೇಶದಲ್ಲಿ ಸುಮಾರು 350ಕ್ಕೂ ವಿರಕ್ತಮಠದ ವಿವಿಧ ಮಠಾಧೀಶರು, ಅಸಂಖ್ಯಾತ ಜನಸ್ತೋಮ ಸೇರಿತ್ತು.

ವೀರಶೈವ ಲಿಂಗಾಯತ ಗುಡ್ಡದ ಹಾಗೆ
ವೀರಶೈವ ಲಿಂಗಾಯತ ಧರ್ಮ ಗುಡ್ಡ ಇದ್ದ ಹಾಗೆ. ಕೆಲವು ನೀಚರು, ಪರಮನೀಚರು ಗುಡ್ಡಕ್ಕೆ ಗುದ್ದಿ ಗಾಯ ಮಾಡಿಕೊಳ್ಳಲು ಹೊರಟಿದ್ದಾರೆ ಎಂದು ನಟ-ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಆಕ್ರೋಶ ವ್ಯಕ್ತಪಡಿಸಿದರು. ಸಮಾವೇಶದಲ್ಲಿ ಮಾತನಾಡಿದ ಅವರು, ಈವರೆಗಿನ ಇತಿಹಾಸ ತೆಗೆದು ನೋಡಿದರೆ ಸಮಾಜ ನಿಂತ ನೀರಾದಾಗ ಕ್ರಾಂತಿಗಳು ಹುಟ್ಟಿಕೊಂಡಿವೆ. ಈಗಲೂ ಕ್ರಾಂತಿ ಹುಟ್ಟು ಪಡೆದಿದೆ ಎಂದರು. ಸಮಾವೇಶಕ್ಕೆ ಅಡಚಣೆ ಉಂಟು ಮಾಡಲು ಇನ್ನೂ ಹತ್ತಾರು ಕಿ.ಮೀ. ದೂರ ಇರುವ ಭಕ್ತರು ಇಲ್ಲಿಗೆ ಬಾರದಿರಲು ಸಂಚಾರ ದಟ್ಟಣೆ ಹೆಸರಿನಲ್ಲಿ ಅವರನ್ನು ಬಿಡದೇ ಕುತಂತ್ರ ಹೆಣೆಯಲಾಗಿದೆ. ಇದು ಗುಡ್ಡಕ್ಕೆ ಗುದ್ದಿ ಗಾಯ ಮಾಡಿಕೊಂಡಂತೆ ಎಂದು ಅವರು ವಿಶ್ಲೇಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next