ವರದಿ: ಮಲ್ಲೇಶ ರಾ. ಆಳಗಿ
ಜಮಖಂಡಿ: ತಾಲೂಕಿನಲ್ಲಿ 2014ರಲ್ಲಿ ಆರಂಭಗೊಂಡಿದ್ದ ಅಂದಾಜು 3600 ಕೋಟಿ ವೆಚ್ಚದ ತುಬಚಿ-ಬಬಲೇಶ್ವರ ಏತ ನೀರಾವರಿ ಕಾಮಗಾರಿ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದ್ದು, ಅಥಣಿ, ಜಮಖಂಡಿ, ವಿಜಯಪುರದ ಕೆರೆಗಳಿಗೆ ನೀರು ತಲುಪಿದೆ.
ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಗೆ ಆರಂಭದಲ್ಲಿ ಹನಿ ನೀರಾವರಿ ಮೂಲಕ 3.6 ಟಿಎಂಸಿ ನೀರು ಹಂಚಿಕೆ ಕಾಮಗಾರಿ ಅನುಮತಿ ಪಡೆದುಕೊಂಡಿತ್ತು. ಮೂರು ಜಿಲ್ಲೆಗಳ ರೈತರು ಡ್ರಿಫ್ ಮೂಲಕ ನೀರು ಪೂರೈಸುವ ಈ ಕಾಮಗಾರಿಗೆ ವಿರೋಧಿಸಿದ ಹಿನ್ನೆಲೆಯಲ್ಲಿ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಕಾಲುವೆ ನೀರು ಹಂಚಿಕೆಯಾಗಿ ಪರಿವರ್ತನೆಗೊಂಡಿತು. 2014ರಲ್ಲಿ 950 ಕೋಟಿ ವೆಚ್ಚದಲ್ಲಿ 3.6 ಟಿಎಂಸಿ ನೀರು ಪೂರೈಕೆ ಯೋಜನೆ ಇದಾಗಿತ್ತು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಯೋಜನೆ ಮಾರ್ಪಾಡುಗೊಂಡಿತು. ಈ ಪರಿಣಾಮ ಮೊದಲಿದ್ದ 3.6 ಟಿಎಂಸಿ ಬದಲಾಗಿ 6.7 ಟಿಎಂಸಿ ನೀರು ಪೂರೈಕೆಗೆ ಅನುಮತಿ ದೊರಕಿತು. ಹಿಂದಿನ ಕಾಂಗ್ರೆಸ್ ಸರ್ಕಾರದ ಮಾಜಿ ಸಚಿವ ಹಾಲಿ ಶಾಸಕ ಎಂ.ಬಿ.ಪಾಟೀಲ, ದಿ| ಸಿದ್ದು ನ್ಯಾಮಗೌಡ ಹೆಚ್ಚಿನ ಶ್ರಮ ವಹಿಸಿದ್ದರು. ಸೆಪ್ಟೆಂಬರ್‌ನಲ್ಲಿ ತುಬಚಿ-ಬಬಲೇಶ್ವರ ಏತ ನೀರಾವರಿಗೆ ಪ್ರಾಯೋಗಿಕ ಚಾಲನೆ ನೀಡಲಾಗಿದೆ.
ಜಮಖಂಡಿ ತಾಲೂಕಿನ ತುಂಗಳ ಗ್ರಾಮದ ಒಂದು ಕೆರೆ, ಸಾವಳಗಿಯಲ್ಲಿ 1, ಕಾಜಿಬೀಳಗಿಯಲ್ಲಿ 2, ಕುರಗೋಡದಲ್ಲಿ 1, ಕನ್ನೋಳ್ಳಿಯಲ್ಲಿ 1, ಗೋಠೆಯಲ್ಲಿ 1, ಗದ್ಯಾಳದಲ್ಲಿ 2, ಕಲಬೀಳಗಿಯಲ್ಲಿ 1, ತೊದಲಬಾಗಿಯಲ್ಲಿ 1 ಸೇರಿದಂತೆ ಜಮಖಂಡಿ ಮತಕ್ಷೇತ್ರದ 12 ಕರೆಗಳು, ಅಥಣಿ ತಾಲೂಕಿನ ಹಾಲಳ್ಳಿ, ಅರಟಾಳ, ತೆಲಸಂಗ, ಬನ್ನೂರ ಸಹಿತ 4 ಗ್ರಾಮದ ಕೆರೆಗಳು ಮತ್ತು ವಿಜಯಪುರದ ನಾಗರಾಳ, ಹೊನವಾಡ, ಕೋಟ್ಯಾಳ, ದಾಶ್ಯಾಳ ಸಹಿತ 4 ಗ್ರಾಮದ ಕೆರೆಗಳಿಗೆ ನೀರು ತಲುಪಿದೆ.
ಜಮಖಂಡಿ, ಅಥಣಿ ಮತ್ತು ವಿಜಯಪುರದ 30ಕ್ಕೂ ಹೆಚ್ಚು ಕೆರೆಗಳಿಗೆ ನೀರು ಹಂಚಿಕೆ ಮಾಡುವ ಯೋಜನೆ ಪ್ರಾಯೋಗಿಕ ಪರೀಕ್ಷೆ ಕೂಡ ಯಶಸ್ವಿಯಾಗಿದೆ. ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಗೆ 15500 ಎಚ್‌ಪಿ ಸಾಮರ್ಥ್ಯದ ಎರಡು ವಿದ್ಯುತ್ ಮೋಟರ್ ಜೋಡಿಸಲಾಗಿದೆ. ತಾಲೂಕಿನ ಕವಟಗಿ ಗ್ರಾಮದ ಬಳಿ ಇರುವ ಕೃಷ್ಣಾ ನದಿಗೆ ಜೋಡಣೆ ಮಾಡಿರುವ 8 ಅಡಿ ಅಗಲದ ಪೈಪ್‌ಲೈನ್ ಮೂಲಕ ಜಮಖಂಡಿ ಮತಕ್ಷೇತ್ರದ 8 ಗ್ರಾಮದ 12 ಕೆರೆಗಳ ಮೂಲಕ 16 ಸಾವಿರ ಎಕರೆ ಜಮೀನಿಗೆ ನೀರಾವರಿ ಲಭಿಸಲಿದೆ.
ಅಥಣಿ ತಾಲೂಕು ಮತ್ತು ವಿಜಯಪುರದ 8 ಗ್ರಾಮಗಳ 22, 600 ಸಾವಿರ ಎಕರೆ ಜಮೀನುಗಳಿಗೆ ನೀರು ಲಭ್ಯವಾಗಲಿದೆ. 38670 ಎಕರೆ ಒಣಭೂಮಿಯಾಗಿದ್ದ 20 ಗ್ರಾಮಗಳ ಜಮೀನು ನೀರಾವರಿಯಾಗಿ ಪರಿವರ್ತನೆ ಆಗಲಿದೆ. ಉಪಕಾಲುವೆಗಳು ನಿರ್ಮಾಣಗೊಂಡಲ್ಲಿ ಸಂಪೂರ್ಣವಾಗಿ ಒಣಭೂಮಿ ಹಸಿರು ಭೂಮಿಯಾಗಿ ಪರಿವರ್ತನೆಯಾಗಲಿದೆ. ಜಮಖಂಡಿ ಮತಕ್ಷೇತ್ರದ 8 ಗ್ರಾಮಗಳ 12 ಕೆರೆಗಳಿಗೆ 8.50 ಕಿ.ಮೀ. ಉದ್ದದ ಪೂರ್ವ ಕಾಲುವೆ ಮೂಲಕ ನೀರು ಹರಿಯುತ್ತಿದೆ.
ಅಥಣಿ, ವಿಜಯಪುರ 8 ಗ್ರಾಮಗಳ ಜಮೀನುಗಳಿಗೆ 14 ಕಿ.ಮೀ. ಉದ್ದದ ಪಶ್ಚಿಮ ಕಾಲುವೆ ಮೂಲಕ ನೀರು ಹರಿಯುತ್ತಿದೆ. ಕೃಷ್ಣಾ ಪ್ರಾಧಿಕಾರ ನಿರ್ದೇಶನದಂತೆ ಅಕ್ಟೋಬರ್ 15ರೊಳಗಾಗಿ ಆಲಮಟ್ಟಿ ಹಿನ್ನೀರು ಕಾಲುವೆ ಮೂಲಕ ಕೆರೆ, ಬಾಂದಾರ ಹಾಗೂ ಹಳ್ಳಗಳಿಗೆ ನೀರು ಹರಿಸಲಾಗಿದೆ. ಮಳೆಯಾಶ್ರಿತ 20 ಗ್ರಾಮಗಳಲ್ಲಿ ಅಂತರಜಲಮಟ್ಟ ಹೆಚ್ಚಾಗುವ ಮೂಲಕ ಹಸಿರು ವಾತಾವರಣ ನಿರ್ಮಾಣದೊಂದಿಗೆ ರೈತರು ಆರ್ಥಿಕವಾಗಿ ಸಬಲರಾಗಲಿದ್ದಾರೆ. ಮೂರು ತಾಲೂಕಿನ ರೈತರು ಈ ಭಾಗದಲ್ಲಿ ದ್ರಾಕ್ಷಿ, ದಾಳಿಂಬೆ, ಲಿಂಬೆ, ತೊಗರಿ, ಜೋಳ ಬೆಳೆ ಹೆಚ್ಚಾಗಿ ಬೆಳೆಯುತ್ತಿದ್ದು, ಕಾಲುವೆ ನೀರು ಹರಿದು ಬಂದಿರುವ ಹಿನ್ನೆಲೆಯಲ್ಲಿ ರೈತರಲ್ಲಿ ಸಂತಸ ತಂದಿದೆ. ಉಪಕಾಲುವೆಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಅಂದಾಜು 350 ಕೋಟಿ ಅನುದಾನ ನೀಡಡಬೇಕಾಗಿದೆ.