Advertisement

ಪೋಕ್ಸೊ ಕೇಸುಗಳ ತನಿಖೆ ಬೇಗ ಮುಗಿಸಿ

11:56 AM Aug 06, 2018 | Team Udayavani |

ಬೆಂಗಳೂರು: ಪೋಕ್ಸೊ ಪ್ರಕರಣಗಳ ತನಿಖೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ನ್ಯಾಯಾಲಯದಲ್ಲಿ ಇತ್ಯರ್ಥಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಪೊಲೀಸ್‌ ಅಧಿಕಾರಿಗಳಿಗೆ ರಾಜ್ಯಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ರಾಜು ಸೂಚಿಸಿದ್ದಾರೆ.

Advertisement

ರಾಜ್ಯ ಪೊಲೀಸ್‌ ಮಹಾನಿರ್ದೇಶಕರ ಕಚೇರಿಯಲ್ಲಿ ನಡೆದ ಪೋಕ್ಸೊ ಕಾಯಿದೆ ಸಮರ್ಪಕ ಅನುಷ್ಠಾನ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಅಪ್ರಾಪ್ತರು ಲೈಂಗಿಕ ದೌರ್ಜನ್ಯದಂತಹ ಹೀನ ದುಷ್ಕೃತ್ಯಗಳಿಗೆ ಒಳಗಾಗುತ್ತಿರುವುದು ಬೇಸರದ ಸಂಗತಿಯಾಗಿದೆ.

ಈ ದುರ್ಘ‌ಟನೆಗಳು ಅಪ್ರಾಪ್ತರ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಹೀಗಾಗಿ, ಪೊಲೀಸ್‌ ಅಧಿಕಾರಿಗಳು ಅತ್ಯಂತ ಎಚ್ಚರಿಕೆಯಿಂದ ತನಿಖೆ ನಡೆಸಬೇಕು. ಆದ್ಯತೆ ಮೇರೆಗೆ ಈ ಪ್ರಕರಣಗಳ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯದಲ್ಲಿ ಇತ್ಯರ್ಥವಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು. 

ಪೋಕ್ಸೊ ಪ್ರಕರಣಗಳು ಇತ್ಯರ್ಥವಾಗುವುದು ವಿಳಂಬವಾದರೆ ಸಂತ್ರಸ್ತರ ಮೇಲೆ ಗಂಭೀರ ಪರಿಣಾಮ ಬೀರಲಿದೆ. ದಿನ ಕಳೆದಂತೆ ಮಾನಸಿಕ ಖನ್ನತೆ ಅನುಭವಿಸುತ್ತಾರೆ. ಹೀಗಾಗಿ, ಸಂತ್ರಸ್ತರ ಭವಿಷ್ಯದ ಜೀವನದ ದೃಷ್ಟಿಯಿಂದ ಈ ಪ್ರಕರಣಗಳು ಆದಷ್ಟು ಬೇಗ ಇತ್ಯರ್ಥಗೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.

ಪೋಷಕರು ಅಪ್ರಾಪ್ತರ ಮೇಲೆ ಹೆಚ್ಚಿನ ನಿಗಾವಹಿಸಿ ನೋಡಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳ ಬಳಕೆಗೆ ದಾಸರಾಗದಂತೆಯೂ ಎಚ್ಚರ ವಹಿಸಬೇಕು. ಅಪ್ರಾಪ್ತರ ದಿನ ನಿತ್ಯದ ಚಟುವಟಿಕೆಗಳಲ್ಲಿ ವ್ಯತ್ಯಾಸ ಕಂಡು ಬಂದರೆ ಅವರೊಂದಿಗೆ ಮುಕ್ತವಾಗಿ ಮಾತಾನಾಡಬೇಕು.

Advertisement

ಎನ್‌ಜಿಓಗಳು, ಮನ:ಶ್ಯಾಸ್ತ್ರಜ್ಞರ ಜತೆ ಸಮಾಲೋಚನೆ, ಪೊಲೀಸರ ಸಹಾಯ ಪಡೆದುಕೊಂಡು ಪ್ರಕರಣ ದಾಖಲಿಸಬೇಕು ಎಂದು ತಿಳಿಸಿದರು. ಯುನಿಸೆಫ್ ಕನ್ಸಲ್ಟೆಂಟ್‌  ಸುಚಿತ್ರಾ ರಾವ್‌, ಎಡಿಜಿಪಿ ಡಾ. ಎಂ.ಎ ಸಲೀಂ, ಐಜಿಪಿ ಅಶ್ವಿ‌ನಿ,  ವಿಧಿವಿಜ್ಞಾನ ಪ್ರಯೋಗಾಲಯ ಕೇಂದ್ರದ ನಿರ್ದೇಶಕಿ ಇಶಾ ಪಂತ್‌ ಉಪಸ್ಥಿತರಿದ್ದರು. 

2000ಕ್ಕೂ ಅಧಿಕ ಪ್ರಕರಣಗಳು ಬಾಕಿ!: ರಾಜ್ಯದಲ್ಲಿ ಕಾಯಿದೆ ಅನುಷ್ಠಾನಕ್ಕೆ ಬಂದಾಗಿನಿಂದ ದಾಖಲಾದ ಪ್ರಕರಣಗಳ ಪೈಕಿ 2000ಕ್ಕೂ ಅಧಿಕ ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥಗೊಳ್ಳದೆ ಬಾಕಿ ಉಳಿದುಕೊಂಡಿವೆ. ದಾಖಲಾದ  ಪ್ರಕರಣಗಳ ಪೈಕಿ ಅರ್ಧದಷ್ಟೂ ಇತ್ಯರ್ಥಗೊಂಡಿಲ್ಲ ಎಂದು ಎಡಿಜಿಪಿ ಡಾ. ಮಾಲಿನಿ ಕೃಷ್ಣಮೂರ್ತಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next