Advertisement

ಇಂಟರ್ನೆಟ್‌ ಆಗಬಹುದು 2030ರ ಶಿಕ್ಷಕ

04:26 PM Aug 16, 2020 | Karthik A |

ಅಮೆರಿಕದಲ್ಲಿ ಓರ್ವ ಯುವಕ ತನ್ನ ಪದವಿ ಪಡೆಯುವ ದಿನದಂದು ಭಾಷಣದಲ್ಲಿ ತನಗೆ ಶಿಕ್ಷಣವನ್ನು ನೀಡಿದ ಗೂಗಲ್‌ ಮತ್ತು ವಿಕಿಪೀಡಿಯಾಗೆ ಧನ್ಯವಾದಗಳು ಎಂದಾಗ ಸಭೆಯಲ್ಲಿದ್ದ ಎಲ್ಲ ವಿದ್ಯಾರ್ಥಿಗಳು ಕೇಕೆ ಹಾಕಿ ಶಿಳ್ಳೆ ಹೊಡೆದು ಚಪ್ಪಾಳೆ ತಟ್ಟುತ್ತಾರೆ.

Advertisement

ಇಂದು ಇದು ಬಹಳ ಸಹಜವಾದ ಸ್ಥಿತಿಯಾಗಿದೆ.

ಯಾಕೆಂದರೆ ಎಲ್ಲರೂ ಅಂತರ್ಜಾಲವನ್ನು ತಮ್ಮ ಪಾಠ ಹೇಳಿಕೊಡುವ ಶಿಕ್ಷಕರಾಗಿ ಸ್ವೀಕರಿಸಿದವರೇ. ಇಂತಹ ಭಾಷಣಗಳು ಭಾರತದಲ್ಲಿ ನಡೆದರೂ ಅಚ್ಚರಿ ಏನಿಲ್ಲ.

ಇಂದಿನ ವಾಸ್ತವ ಹೇಗಿದೆ ಎಂದರೆ ವಿದ್ಯಾರ್ಥಿಗಳಿಗೆ ಅಧ್ಯಾಪಕರು ಮಾಡುವ ಪಾಠಗಳ ಬಗೆಗೆ ಗಮನ ಕೊಡದಿದ್ದರೂ, ಅಂತರ್ಜಾಲವನ್ನು ನೋಡಿ ಅಧ್ಯಯನ ಮಾಡುತ್ತೇವೆ ಅನ್ನುವ ಭರವಸೆ ಮೂಡಿದೆ.

ಬೇಕು ಬೇಕಾದುದೆಲ್ಲ ಅಲ್ಲಿ ಸುಲಭವಾಗಿ ಮತ್ತು ಸರಳವಾಗಿ ಸಿಗುವಾಗ ಆಯ್ಕೆಯನ್ನು ಮಾಡುವುದು ಸಹಜವೇ.

Advertisement

ಹಲವು ಬಾರಿ ಇಲ್ಲಿ ಮತ್ತಷ್ಟು ವಿಚಾರಗಳು ಅಧ್ಯಯನಕ್ಕೆ ಸಿಗುವಾಗ ಇದರೆಡೆಗಿನ ಒಲವು ಹೆಚ್ಚುವುದು ಸ್ವಾಭಾವಿಕ. ಇಂತಹ ಸಂದರ್ಭಗಳು ಗುರು ಮುಖೇನ ಕಲಿಯುವುದು ಅನ್ನುವ ವಿಚಾರ ಅಳಿವಿನ ಅಂಚಿನಲ್ಲಿ ಬಂದು ನಿಲ್ಲುವಂತೆ ಮಾಡಿದೆ. ಜತೆಗೆ ಹಿಂದೆ ಗುರುಕುಲ ಪದ್ಧತಿಯ ಶಿಕ್ಷಣ ಇದ್ದಾಗ ಅಸ್ತಿತ್ವದಲ್ಲಿದ್ದ ಗುರು – ಶಿಷ್ಯ ಸಂಬಂಧದ ಪಾವಿತ್ರ್ಯವು ಇಂದು ಕ್ಷೀಣಿಸುತ್ತಿದೆ. ಹೀಗಿರುವಾಗ ಮುಂದೊಂದು ದಿನ ಗುರು ಕೇವಲ ಪಠ್ಯ ವಿಷಯಗಳನ್ನು ನೀಡಲು, ಅಸೈನ್ಮೆಂಟ್‌ಸಂಗ್ರಹಿಸಲು, ಮತ್ತು ಪರೀಕ್ಷೆಗೆ ಅಂಕ ಹಾಕಲು ಮಾತ್ರ ಸೀಮಿತವಾದರೂ ಅಚ್ಚರಿಯಿಲ್ಲ.
ಆದರೆ ಶಿಕ್ಷಣ ಮತ್ತು ಸಂಸ್ಕಾರ ಜೀವನ ವಿಕಾಸದ ಎರಡು ಪ್ರಮುಖ ಸಾಧನಗಳು. ಶಿಕ್ಷಣದ ಜತೆಗಿನ ಮಾನವೀಯ ಸಂಸ್ಕಾರಗಳು ಮಾತ್ರ ಮಾನವನ ಭವಿಷ್ಯವನ್ನು ಸಮಾಜದ ಹಿತದ ದೃಷ್ಟಿಯಲ್ಲಿ ರೂಪಿಸಬಹುದು.

ಶಿಕ್ಷಣ ಯಾವ ರೀತಿಯಾಗಿ ಇರಬೇಕು?
ಶಿಕ್ಷಣ ಮಾನವನಿಗೆ ವೈಚಾರಿಕವಾಗಿ ಆಲೋಚಿಸುವ ಮತ್ತು ಚರ್ಚಿಸುವ ಸಾಮರ್ಥ್ಯವನ್ನು ನೀಡಬೇಕು. ಹಳೆಯ ಪದ್ಧತಿಗಳು ಸರಿ ಮತ್ತು ಹೊಸದೆಲ್ಲವೂ ತಪ್ಪು ಎನ್ನುವ ಪರಿಕಲ್ಪನೆಯಿಂದ ಮನುಷ್ಯ ಹೊರಗೆ ಬರಬೇಕು. ಡಿ.ವಿ.ಜಿ ಹೇಳುವಂತೆ ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು ಎನ್ನುವಂತೆ ಹೊಸತು ಮತ್ತು ಪುರಾತನ ಎರಡರ ಸಮನ್ವಯವೇ ಶಿಕ್ಷಣ ಆಗಬೇಕು. ಶಿಕ್ಷಣ ಮನುಷ್ಯನ ಅಂತರಾಳದಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರಗೆಳೆದು ಬದುಕುವ ಕಲೆಯನ್ನು ಕಲಿಸುವ ಸಾಧನವಾಗಬೇಕೇ ಹೊರತು. ನಾಲ್ಕು ಗೋಡೆಯ ಮಧ್ಯೆ ಬಂಧಿಸಿ ಹೊರೆಯನ್ನು ಹೇರುವ ಮಾಧ್ಯಮವಾಗಬಾರದು. ಈಗ ಜಾರಿಯಾದ ಹೊಸ ಶಿಕ್ಷಣ ಯೋಜನೆ ವಿದ್ಯಾರ್ಥಿಗಳಲ್ಲಿ “ಓದಬೇಕು’ ಎನ್ನುವ ಒತ್ತಡವನ್ನು ಕಡಿಮೆ ಮಾಡಲಿದೆ. ಪ್ರಮಾಣಾತ್ಮಕ ಶಿಕ್ಷಣಕ್ಕೆ ಬದಲಾಗಿ ಗುಣಾತ್ಮಕ ಶಿಕ್ಷಣವನ್ನು ತರಲು ಪ್ರಯತ್ನ ನಡೆಯುತ್ತಿದೆ.

ವಿದ್ಯಾರ್ಥಿ-ಶಿಕ್ಷಕರ ಸಂಬಂಧ
ಪ್ರಾಥಮಿಕ ಮತ್ತು ಮಧ್ಯಮ ಹಂತದ ಶಿಕ್ಷಣದ ವ್ಯವಸ್ಥೆಯಲ್ಲಿ ಸಂಪೂರ್ಣ ಜವಾಬ್ದಾರಿ ಶಿಕ್ಷಕರದ್ದೇ ಇದೆ. ಏಕೆಂದರೆ ಇದು ಮಕ್ಕಳ ಭವಿಷ್ಯದ ಅಡಿಪಾಯ ನಿರ್ಮಾಣದಲ್ಲಿ ಬಹು ಮುಖ್ಯವಾದ ಪಾಲು ಪಡೆದಿದೆ. 3ನೇ ಹಂತ ಮತ್ತು ಕಾಲೇಜಿನ ಹಂತದಲ್ಲಿ ಮಕ್ಕಳ ಐಚ್ಛಿಕ ವಿಷಯಕ್ಕೆ ಅನುಗುಣವಾಗಿ ಕಲಿಯುವ ಅವಕಾಶ ಸೃಷ್ಟಿಯಾಗಿದೆ. ಒಂದೇ ತರಗತಿಯಲ್ಲಿ ವಿಭಿನ್ನ ಅಭಿರುಚಿಯ ಮತ್ತು ಸಾಮರ್ಥ್ಯದ ಮಕ್ಕಳು ಇರುತ್ತಾರೆ. ಎಲ್ಲರೂ ಸಮಾನ ವಿಷಯವನ್ನು ಸಮಾನ ರೀತಿಯಲ್ಲಿ ಕಲಿಯಬೇಕೆಂದರೆ ಅದು ಅವರ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತದೆ.

ಆದರೆ ಈಗಿನ ಹೊಸ ಶಿಕ್ಷಣ ನಿಯಮ ಜಾರಿಯಾದರೆ ಈ ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರೆಯುತ್ತದೆ. ಪ್ರತಿ ವಿದ್ಯಾರ್ಥಿಯೂ ಅವನ ಅಭಿರುಚಿಗೆ ಅನುಗುಣವಾಗಿ ಬೆಳೆಯುತ್ತಾ ಸಾಗುತ್ತಾನೆ. ದೇಶದ ಪ್ರಗತಿ ಪಥಕ್ಕೆ ದೊಡ್ಡ ಕೊಡುಗೆ ನೀಡಬಲ್ಲ ಸಾಮರ್ಥ್ಯವನ್ನು ಸೃಷ್ಟಿಸುತ್ತದೆ. ಫ‌ಲಿತಾಂಶದ ಮೇಲೆ ನಿಂತಿರುವ ಈ ಸಮಾಜದ ಚಿತ್ರಣವೂ ಬದಲಾಗುತ್ತದೆ. ಮಕ್ಕಳ ಇಚ್ಛೆ, ಸಾಮರ್ಥ್ಯ ಮತ್ತು ಅಭಿರುಚಿಗೆ ಅನುಗುಣವಾಗಿ ಕಲಿಯುವ ಅವಕಾಶ ದೊರೆಯಬೇಕು. ಕಲಿಕೆಗೆ ಮೂಲ ವಿದ್ಯಾರ್ಥಿ ಹಾಗೂ ಶಿಕ್ಷಕರ ಸಂಬಂಧ. ಆ ಸಂಬಂಧವೇ ಜ್ಞಾನಕ್ಕೆ ಸೇತುವೆ. ಆ ಸೇತುವೆ ಮುರಿಯದ ಬದಲಾವಣೆಯಾಗಲಿ. ಒಂದೊಳ್ಳೆ ಶಿಕ್ಷಣ ಪದ್ಧತಿ 2030ರ ಸುಮಾರಿಗೆ ಪೂರ್ಣವಾಗಿ ಜಾರಿಯಾಗಲಿ.

ಆಂಟೋ ಕ್ರಿಸ್ಟನ್‌, ಸಂತ ಫಿಲೋಮಿನಾ ಕಾಲೇಜು ಮೈಸೂರು

 

Advertisement

Udayavani is now on Telegram. Click here to join our channel and stay updated with the latest news.

Next