ಎಚ್.ಡಿ.ಕೋಟೆ: ಕೇರಳದ ವೈನಾಡು ಪ್ರದೇಶ ಹಾಗೂ ತಾಲೂಕಿನ ವ್ಯಾಪ್ತಿಯಲ್ಲಿ ಮತ್ತೆ ಮಳೆ ಮಾಯವಾಗಿದ್ದು, ರಾಜ್ಯದ ಜೀವನಾಡಿಗಳಲ್ಲೊಂದಾದ ತಾಲೂಕಿನ ಕಬಿನಿ ಜಲಾಶಯಕ್ಕೆ ಒಳ ಹರಿವು ದಿನೇ ದಿನೆ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯದ ಎಡ ಮತ್ತು ಬಲದಂಡೆ ನಾಲೆಗಳ ಮೂಲಕ ಈ ಬಾರಿಯೂ ರೈತರ ಜಮೀನುಗಳಿಗೆ ನೀರು ಹರಿಸುವುದು ಅನುಮಾನವಾಗಿದೆ.
ಮುಂಗಾರು ವೈಫಲ್ಯ ಮತ್ತು ಬಿದ್ದ ಅಲ್ಪ ಸ್ವಲ್ಪ ಮಳೆಯಿಂದಾಗಿ ಕಬಿನಿ ಜಲಾಶಯದಲ್ಲಿ ಸಂಗ್ರಹವಾಗಿದ್ದ ನೀರನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಮಿಳುನಾಡಿಗೆ ಹೊರ ಬಿಟ್ಟ ಹಿನ್ನೆಲೆಯಲ್ಲಿ ಈ ಅಚ್ಚುಕಟ್ಟು ವ್ಯಾಪ್ತಿಯ ಸಾವಿರಾರು ರೈತರ ಜಮೀನುಗಳ ಬೆಳೆಗೆ ನಾಲೆಗಳ ಮೂಲಕ ನೀರು ಕೊಡಲು ಅಧಿಕಾರಿಗಳಿಂದ ಸಾಧ್ಯವಾಗದಿರುವುದು ಬಹುತೇಕ ಖಚಿತವಾಗಿದೆ.
ಎಡ ಮತ್ತು ಬಲದಂಡೆ ನಾಲೆಗಳಿಗೆ ಜಲಾಶಯದಿಂದ ನೀರು ಬಿಡಬೇಕಾದರೆ ಸುಮಾರು 71 ಅಡಿಗಳಿಗೂ ಹೆಚ್ಚು ನೀರು ಶೇಖರಣೆಯಾಗುತ್ತಿರಬೇಕು, ಆದರೆ ಈಗಿನ ಪರಿಸ್ಥಿತಿಯಲ್ಲಿ ಜಲಾಶಯ ನೀರಿನ ಮಟ್ಟ ದಿನದಿಂದ ದಿನಕ್ಕೆ ನೀರಿನ ಕುಸಿಯುತ್ತಿರುವುದರಿಂದ ರೈತರ ಜಮೀನುಗಳಿಗೆ ನೀರು ಬಿಡಲು ಕಷ್ಟಕರವಾಗಲಿದೆ. ಈಗಾಗಲೇ ಜಲಾಶಯದ ನೀರಿನ ಮಟ್ಟವು 71.5 ಅಡಿಗಳಿದ್ದು, ಒಳಹರಿವಿನ ಪ್ರಮಾಣವು 3 ಸಾವಿರಕ್ಕಿಂತಲೂ ಕಡಿಮೆಯಾಗಿದ್ದು, ಹೊರಹರಿವಿನ ಪ್ರಮಾಣ 6 ಸಾವಿರಕ್ಕೂ ಹೆಚ್ಚಾಗಿರುವುದರಿಂದ ಜಲಾಶಯದ ನೀರಿನ ಮಟ್ಟ ಕುಸಿತ ಕಾಣುತ್ತಿದೆ.
ನಾಲೆಗಳ ವ್ಯಾಪ್ತಿಯಲ್ಲಿರುವಂತಹ ಕೆರೆ ಕಟ್ಟೆಗಳಿಗೆ ನೀರು ತುಂಬಿಸಿಕೊಳ್ಳುವ ಕೆಲಸಗಳಿಗೆ ಮಾತ್ರ ಮುಂದಾಗಬಹುದಾಗಿದೆ. ಕಳೆದ ಎರಡು ವರ್ಷಗಳಿಂದ ಈ ಭಾಗದ ಬೆಳೆಗೆ ಸಮರ್ಪಕವಾಗಿ ನೀರಿಲ್ಲದೆ ಕಂಗಲಾಗಿದ್ದ ರೈತರಿಗೆ ಈ ಬಾರಿಯೂ ಸಂಕಷ್ಟ ಎದುರಾಗಲಿದೆ. ರೈತರನ್ನು ಈ ಸಂಕಷ್ಟದಿಂದ ಪಾರು ಮಾಡಬೇಕಾದರೆ ವರುಣ ಕೃಪೆಯಿಂದ ಈಗಲೂ ಕೇರಳದ ವೈನಾಡು ಸೇರಿದಂತೆ ಜಲಾಶಯದ ಹಿನ್ನೀರು ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬಂದರೆ ಮಾತ್ರ ನಮ್ಮ ರೈತರು ಸೇರಿದಂತೆ ಜಾನುವಾರುಗಳು ಹಾಗೂ ವನ್ಯಜೀವಿಗಳನ್ನು ಕಾಪಾಡುವುದರ ಜೊತೆಗೆ ಬಂದೊದಗಿರುವ ಸಂಕಷ್ಟ ದೂರಾಗಲಿದೆ.
ಜಲಾಶಯದ ನೀರಿನ ಸ್ಥಿತಿಗತಿಗಳನ್ನು ಅರಿತು ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಯುಕ್ತರಾದ ಜಯಂತಿ ಅವರಿಗೆ ಆದೇಶಿದ್ದಾರೆ. ಈ ಹಿನ್ನೆಲೆಯಲ್ಲಿ ನೀರಾವರಿ ನಿಗಮದ ಅಧಿಕಾರಿಗಳಿಂದ ಜಯಂತಿ ಅವರು ವರದಿ ಪಡೆದುಕೊಂಡಿದ್ದಾರೆ. ಇವರು ಜಲಾಶಯದಲ್ಲಿ ಈಗ ಸಂಗ್ರಹ ಇರುವ ನೀರನ್ನು ರೈತರ ಬೆಳೆಗಳಿಗೆ ಬಿಡುತ್ತಾರೋ ಅಥವಾ ಕೆರೆ ಕಟ್ಟೆಗೆ ತುಂಬಿಸಲು ನಿರ್ಧಾರ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ?
* ಬಿ.ನಿಂಗಣ್ಣಕೋಟೆ