Advertisement

ದೇವರ ಕೇಳಿ ದೋಚುತ್ತಿದ್ದ ಕುಖ್ಯಾತರ ಸೆರೆ

12:02 PM Feb 13, 2018 | Team Udayavani |

ಬೆಂಗಳೂರು: ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಹಣ, ಚಿನ್ನಾಭರಣ ಕಳವು ಮಾಡುತ್ತಿದ್ದ ತಮಿಳುನಾಡಿನ ಕುಖ್ಯಾತ “ರಾಮ್‌ಜೀ’ ತಂಡದ ಐವರನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ವಿಶೇಷವೆಂದರೆ ರಾಮ್‌ಜೀನಗರ ಎಂಬ ಒಂದಿಡೀ ಗ್ರಾಮವೇ ಕಳ್ಳರ ಅಡ್ಡೆ! ಇಲ್ಲಿನ ಕಳ್ಳ ಪ್ರಜೆಗಳು ದೇವರ ಅಪ್ಪಣೆ ಕೇಳಿ ಕಳವು ಮಾಡುತ್ತಾರೆ. ಜತೆಗೆ ಕದ್ದ ಮಾಲಿನಲ್ಲಿ ಒಂದು ಪಾಲನ್ನು ದೇವರಿಗೆ ದಕ್ಷಿಣೆ ನೀಡುತ್ತಾರೆ.

Advertisement

ಕೋಲಾರದ ಸತ್ಯನಾರಾಯಣ (41), ಪಶ್ಚಿಮ ಬಂಗಾಳದ ರವಿಕುಮಾರ್‌ (40), ಶಿವವೆಂಕಟೇಶ್‌ (45) ಹಾಗೂ ವೆಂಕಟೇಶ್‌ (48), ತಮಿಳುನಾಡಿನ ತಿರುಚಿಯ ರಾಮ್‌ಜೀನಗರದ ಮುರಳಿ (30) ಬಂಧಿತರು. ಇವರಿಂದ 5 ಲಕ್ಷ ರೂ. ಮೌಲ್ಯದ 24 ಗ್ರಾಂ ಚಿನ್ನಾಭರಣ, 3.60 ಲಕ್ಷ ರೂ. ನಗದು, ಒಂದು ಲ್ಯಾಪ್‌ಟಾಪ್‌ ವಶಪಡಿಸಿಕೊಂಡಿದ್ದು, 10 ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ತಮಿಳುನಾಡಿನ ತಿರುಚಿಯ ರಾಮ್‌ಜೀನಗರದಿಂದ ನಸುಕಿನಲ್ಲಿ ಬಸ್‌ನಲ್ಲಿ ಬರುತ್ತಿದ್ದ ಮುರಳಿ ಮತ್ತು ತಂಡ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ಬಾಡಿಗೆ ಮನೆಗಳಲ್ಲಿ ವಾಸವಿದ್ದ ತಮ್ಮ ಸಹಚರ ಜತೆ ನೆಲೆಸಿದ್ದರು. ಬಳಿಕ ನಗರಕ್ಕೆ ಬಂದು ಬ್ಯಾಂಕ್‌, ಮಾಲ್‌ಗ‌ಳ ಬಳಿ, ಪ್ರಮುಖವಾಗಿ ಬ್ಯಾಂಕ್‌ನಿಂದ ಹಣ ಡ್ರಾ ಮಾಡಿಕೊಂಡು ಬರುವವರು, ಕಾರು ಮತ್ತು ಬೈಕ್‌ಗಳಲ್ಲಿ ಒಂಟಿಯಾಗಿ ಸಂಚರಿಸವವರು ಹಾಗೂ ಜ್ಯುವೆಲ್ಲರಿ ಶಾಪ್‌ಗ್ಳಿಂದ ಹೊರಬರುತ್ತಿದ್ದವರ ಗಮನ ಬೇರೆಡೆ ಸೆಳೆದು ಕೃತ್ಯವೆಸಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಹೇಗೆಲ್ಲ ಗಮನ ಬೇರೆಡೆ ಸೆಳೆಯುತ್ತಾರೆ: ಆರೋಪಿಗಳು ದೊಡ್ಡ ಮಾಲ್‌ಗ‌ಳು, ಕಾಂಪ್ಲೆಕ್ಸ್‌, ಜನಸಂದಣಿ ಹೆಚ್ಚಾಗಿರುವ ಪ್ರದೇಶಗಳಲ್ಲಿ, ಕಾರ್‌ ಪಾರ್ಕಿಂಗ್‌, ಬ್ಯಾಂಕ್‌ಗಳ ಬಳಿ ನೋಟುಗಳನ್ನು ನೆಲದ ಮೇಲೆ ಬೀಳಿಸಿ, ಮೈಮೇಲೆ ಗಲೀಜು ಎಸೆದು, ಬಟ್ಟೆ ಮೇಲೆ ಗಲೀಜು ಬಿದ್ದಿದೆ, ವಾಹನದ ಆಯಿಲ್‌ ಸೋರುತ್ತಿದೆ, ಟೈರ್‌ ಪಂಚರ್‌ ಆಗಿದೆ, ಹಾಗೇ ತುರುಕೆ ಪುಡಿ ಹಾಕಿ ಗಮನ ಬೇರೆಡೆ ಸೆಳೆದು ಕಾರಿನಲ್ಲಿದ್ದ ನಗದು, ಚಿನ್ನಾಭರಣ, ಲ್ಯಾಪ್‌ಟಾಪ್‌ ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸಿಸಿಟಿವಿಯಲ್ಲಿ ಕೃತ್ಯ ಸೆರೆ: ಆರೋಪಿಗಳ ಕೃತ್ಯ ಘಟನಾ ಸ್ಥಳದ ಬಳಿಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದರ ಆಧಾರದ ಮೇಲೆ ಆರೋಪಿಗಳ ಕುರಿತು ಕಾರ್ಯಾಚರಣೆ ನಡೆಸಿದಾಗ ಸಿಕ್ಕಿ ಬಿದ್ದಿದ್ದಾರೆ. ಇದಕ್ಕಾಗಿ ಜಯನಗರ ಉಪವಿಭಾಗದ ಅಪರಾಧ ದಳದ ತಂಡ ತಾಂತ್ರಿಕವಾಗಿ ಮಾಹಿತಿಗಳನ್ನು ಕಲೆಹಾಕಿ ಕೋಲಾರ ಮೂಲದ ಮಾಸ್ಟರ್‌ ಮೈಂಡ್‌ ಸತ್ಯನಾರಾಯಣ ಹಾಗೂ ಪಶ್ಚಿಮ ಬಂಗಾಳದ ರವಿಕುಮಾರ್‌, ತಿರುಚಿಯ ಮುರಳಿ ಹಾಗೂ ಕೋಲಾರದ ಶಿವವೆಂಕಟೇಶ್‌ ಹಾಗೂ ವೆಂಕಟೇಶ್‌ನನ್ನು ಬಂಧಿಸಿದ್ದಾರೆ.

Advertisement

ಪೊಲೀಸರಿಗೆ ಮಹಿಳೆಯರ ಘೇರಾವ್‌: ತಮಿಳುನಾಡಿನ ತಿರುಚಿಯ ರಾಮ್‌ಜೀ ನಗರದಲ್ಲಿರುವ ಬಹುತೇಕ ಕುಟುಂಬಗಳು ಗಮನ ಬೇರೆಡೆ ಸೆಳೆದು ಕಳವು ಮಾಡುವುದನ್ನೇ ಕಸುಬು ಮಾಡಿಕೊಂಡಿವೆ. ಐದಾರು ಮಂದಿಯ ತಂಡಗಳಾಗಿ ಮುಂಬೈ, ದೆಹಲಿ, ಕೊಲ್ಕೋತ್ತಾ, ಕರ್ನಾಟಕದಲ್ಲಿ ತಮ್ಮ ಕೈ ಚಳಕ ತೋರುತ್ತಾರೆ. ಈ ತಂಡ ಯಾವುದೇ ಕಾರಣಕ್ಕೂ ಹಿಂಸೆ ಮಾಡುವುದಿಲ್ಲ.

ಯಾರ ಮೇಲೂ ಹಲ್ಲೆ ನಡೆಸುವುದಿಲ್ಲ. ಒಂದು ವೇಳೆ ಪೊಲೀಸರು ಬಂಧಿಸಲು ಮುಂದಾದರೆ ಕೂಡಲೇ ಶರಣಾಗುತ್ತಾರೆ. ಈ ನಗರಕ್ಕೆ ಪೊಲೀಸರು ಹೋದರೆ ಮಹಿಳೆಯರು ಅಧಿಕಾರಿಗಳಿಗೆ ಘೇರಾವ್‌ ಹಾಕಿ, ತಮ್ಮ ಪುತ್ರ, ಪತಿ, ಸಂಬಂಧಿಗಳು ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತಾರೆ.

ದೀಪ ಉರಿದರೆ ಕಳವು ಸಕ್ಸಸ್‌!: ಕಳವು ಮಾಡುವುದನ್ನೇ ಕಸುಬನ್ನಾಗಿಸಿಕೊಂಡಿರುವ ರಾಮ್‌ಜೀನಗರದ ಜನ, ಕುಕೃತ್ಯಕ್ಕೆ ತೆರಳುವ ಮುನ್ನ ಗ್ರಾಮ ದೇವತೆ ಮಾರಿಯಮ್ಮನಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಈ ವೇಳೆ ದೀಪ ಹಚ್ಚಿ, ಕೋರಿಕೆಯನ್ನು ಆಕೆಯ ಮುಂದೆ ಇಡುತ್ತಾರೆ.

ಅರ್ಧಗಂಟೆಗೂ ಅಧಿಕ ಕಾಲ ದೀಪ ಉರಿಯುತ್ತಿದ್ದರೆ ಕಾರ್ಯಕ್ಕೆ ಹೋಗಲು ಸೂಚನೆ. ಒಂದು ವೇಳೆ ದೀಪ ಆರಿದರೆ ಯಾರೂ ಗ್ರಾಮ ಬಿಟ್ಟು ಹೋಗುವಂತಿಲ್ಲ. ಒಂದು ವೇಳೆ ಕಳ್ಳತನಕ್ಕೆ ಹೋಗಿ ವಾಪಸ್‌ ಬಂದರೆ, ಕದ್ದ ಮಾಲಿನಲ್ಲಿ ಒಂದು ಭಾಗವನ್ನು ಗ್ರಾಮದೇವತೆಗೆ ದಕ್ಷಿಣೆ ರೂಪದಲ್ಲಿ ನೀಡಬೇಕು. ಇದು ಈ ಗ್ರಾಮದ ಪದ್ಧತಿ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಗಮನ ಬೇರೆಡೆ ಸೆಳೆದು ಕೃತ್ಯವೆಸಗುತ್ತಿದ್ದ ತಂಡವನ್ನು ದಕ್ಷಿಣ ವಿಭಾಗದ ಪೊಲೀಸರ ತಂಡ ಬಂಧಿಸಿದೆ. ತಲೆಮರೆಸಿಕೊಂಡಿರುವ ಇತರೆ ಆರೋಪಿಗಳಾಗಿ ಹುಡುಕಾಟ ನಡೆಯುತ್ತಿದೆ. ಹಾಗೆಯೇ ಬ್ಯಾಂಕ್‌, ಜ್ಯುವೆಲ್ಲರಿ ಶಾಪ್‌, ಮಾಲ್‌ಗ‌ಳಿಂದ ಹೊರಬರುವ ಸಾರ್ವಜನಿಕರು ಅಪರಿಚತ ವ್ಯಕ್ತಿಗಳು ನೋಟು ಬಿದ್ದಿದ್ದೆ, ಮೈಮೇಲೆ ಗಲೀಜು ಬಿದ್ದಿದ್ದೆ ಎಂದು ಹೇಳಿ ಗಮನ ಬೇರೆಡೆ ಸೆಳೆದರೆ ಎಚ್ಚರಿಕೆಯಿಂದ ವರ್ತಿಸಬೇಕು.
-ಡಾ.ಶರಣಪ್ಪ, ದಕ್ಷಿಣ ವಿಭಾಗದ ಡಿಸಿಪಿ

Advertisement

Udayavani is now on Telegram. Click here to join our channel and stay updated with the latest news.

Next