ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಜನವರಿಯೊಳಗೆ ರಾಜ್ಯದ ಜನರಿಗೆ ದೊರೆಯುವಂತೆ ಮಾಡಲು ಸರ್ಕಾರ ಮುಂದಾಗಿದ್ದು, ಶೀಘ್ರ ಕ್ಯಾಂಟೀನ್ ಗಳ ಕಾಮಗಾರಿ ಪೂರ್ಣಗೊಳಿಸಲು ಸಿದ್ಧತೆ ನಡೆಸಿದೆ. ಬೆಂಗಳೂರಿನಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಸರ್ಕಾರ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ತೀರ್ಮಾನಿಸಿತ್ತು.
ಅದರಂತೆ ಜಿಲ್ಲೆ, ತಾಲೂಕು ಕೇಂದ್ರಗಳು ಸೇರಿ ಒಟ್ಟು 171 ಭಾಗಗಳಲ್ಲಿ 247 ಕ್ಯಾಂಟೀನ್‌ಗಳನ್ನು ನಿರ್ಮಿಸಲು ನಿರ್ಧರಿಸಿದೆ. ಈಗಾಗಲೇ ಬಹುತೇಕ ಕ್ಯಾಂಟೀನ್‌ಗಳ ನಿರ್ಮಾಣ ಕಾಮಗಾರಿ ಅಂತಿಮ ಹಂತ ತಲುಪಿದೆ. ಸಿಎಂ ಸಿದ್ದರಾಮಯ್ಯ ಕಳೆದ ಶುಕ್ರವಾರ ರಾಜ್ಯದ ಮೊದಲ ಇಂದಿರಾ ಕ್ಯಾಂಟೀನ್‌ಗೆ ತುಮಕೂರಿನ ಶಿರಾದಲ್ಲಿ ಚಾಲನೆ ನೀಡಿದರು.
ಉದ್ಘಾಟನೆಗೆ ಸಿದ್ಧ: ಬೆಂಗಳೂರಿನಲ್ಲಿ ನಿರ್ಮಿಸಿರುವ ಕ್ಯಾಂಟೀನ್ ಮಾದರಿಯಲ್ಲಿ 90 ಕಡೆ ಪ್ರೀಕ್ಯಾಸ್ಟ್ ಎಲಿಮೆಂಟ್ ಬಳಸಿ ಕ್ಯಾಂಟೀನ್ ನಿರ್ಮಿಸಲಾಗುತ್ತಿದ್ದು, ಈಗಾಗಲೇ 60 ಕಡೆಗಳಲ್ಲಿ ಕ್ಯಾಂಟೀನ್‌ಗಳು ಉದ್ಘಾಟ ನೆಗೆ ಸಿದ್ಧವಾಗಿವೆ. ಪ್ರೀಕ್ಯಾಸ್ಟ್ ಹೊರತುಪಡಿಸಿ ಉಳಿದ ಕಡೆಗಳಲ್ಲೂ ಕ್ಯಾಂಟೀನ್‌ಗಳ ನಿರ್ಮಾಣಕ್ಕೆ ಟೆಂಡರ್ ಕರೆದು ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆ. ಕಾಮಗಾರಿ ಕೂಡ ಆರಂಭವಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಆಹಾರ ಪೂರೈಕೆ, ಉಪಕರಣ ಖರೀದಿಗೆ ಟೆಂಡರ್: ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳು ಕಳೆದ ತಿಂಗಳು ಇಂದಿರಾ ಕ್ಯಾಂಟೀನ್‌ಗಳ ನಿರ್ಮಾಣ, ಆಹಾರ ಪೂರೈಕೆ ಹಾಗೂ ಕ್ಯಾಂಟೀನ್ ಉಪಕರಣಗಳ ಖರೀದಿಗೆ ಕೂಡಲೇ ಟೆಂಡರ್ ಕರೆಯುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಅದರಂತೆ ಎಲ್ಲ ಕಡೆಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕೆಲವು ಕಡೆಗಳಲ್ಲಿ ಆಹಾರ ಸರಬರಾಜು ಮಾಡಲು ಕಾರ್ಯಾದೇಶ ನೀಡಲಾಗಿದೆ ಎನ್ನಲಾಗಿದೆ.
17 ಅಡುಗೆ ಮನೆ ಸಿದ್ಧ: ತಾಲೂಕು ಕೇಂದ್ರಗಳು ಹಾಗೂ ನಗರ, ಪಟ್ಟಣ ಪಂಚಾಯಿತಿ ಭಾಗಗಳ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಸಲು ಸರ್ಕಾರದಿಂದ 17 ಕಡೆಗಳಲ್ಲಿ ಅಡುಗೆ ಮನೆಗಳನ್ನು ನಿರ್ಮಿಸಲಾಗಿದೆ. ಜತೆಗೆ, ಆಹಾರ ತಯಾರಿಕೆಗೆ ಬೇಕಾದ ಉಪಕರಣಗಳ ಖರೀದಿಗೆ ಟೆಂಡರ್ ಕರೆದು, ಗುತ್ತಿಗೆದಾರರಿಗೆ ಕಾರ್ಯಾದೇಶವನ್ನೂ ನೀಡಲಾಗಿದೆ. 10 ದಿನಗಳಲ್ಲಿ ಉಪಕರಣಗಳು ಪೂರೈಕೆಯಾಗಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಾಸಾಂತ್ಯಕ್ಕೆ ಉದ್ಘಾಟನೆ: ಈಗಾಗಲೇ ಮೈಸೂರು, ಗದಗ, ಚಾಮರಾಜನಗರ, ಕೋಲಾರ, ರಾಮನಗರ, ಹಾಸನ, ಮಂಗಳೂರು ಸೇರಿ ಹಲವಾರು ಭಾಗಗಳಲ್ಲಿ ಕ್ಯಾಂಟೀನ್ ಕಾಮಗಾರಿ ಪೂರ್ಣಗೊಂಡಿದ್ದು, ಸಣ್ಣಪುಟ್ಟ ಕೆಲಸಗಳು ಮಾತ್ರ ಬಾಕಿಯಿವೆ. ಹೀಗಾಗಿ, ಜನವರಿ ಕೊನೆಯಲ್ಲಿ ಮೈಸೂರು ಸೇರಿ ಹಲವು ಕಡೆಗಳಲ್ಲಿ ಕ್ಯಾಂಟೀನ್‌ಗಳನ್ನು ಉದ್ಘಾಟಿಸುವ ಕುರಿತು ಚರ್ಚೆ ನಡೆಸಲಾಗಿದೆ.
ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಶೀಘ್ರ ಜಾರಿಗೊಳಿಸಲು ಅಗತ್ಯ ಸಿದ್ಧತೆ ನಡೆಸಿಕೊಳ್ಳಲಾಗಿದ್ದು, ಈಗಾಗಲೇ ಮುಖ್ಯಮಂತ್ರಿಗಳು ಶಿರಾದಲ್ಲಿ ಕ್ಯಾಂಟೀನ್ ಉದ್ಘಾಟಿಸುವ ಮೂಲಕ ಚಾಲನೆ ನೀಡಿದ್ದಾರೆ. ಅದರಂತೆ ಈಗಾಗಲೇ ಆಹಾರ ಸರಬರಾಜು ಹಾಗೂ ಉಪಕರಣಗಳ ಪೂರೈಕೆಗೆ ಟೆಂಡರ್ ಕರೆಯಲಾಗಿದ್ದು, ಈ ಮಾಸಾಂತ್ಯ ಅಥವಾ ಫೆಬ್ರವರಿ ಮೊದಲ ವಾರದೊಳಗೆ ಕ್ಯಾಂಟೀನ್‌ಗಳು ಜನರಿಗೆ ಲಭ್ಯವಾಗಲಿವೆ.
-ಅಂಜುಮ್ ಫರ್ವೇಜ್, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ