Advertisement

ಉದ್ಘಾಟನೆಯಾದರೂ ಬಳಕೆಗೆ ಬಾರದ ಶುದ್ಧ ನೀರಿನ ಘಟಕ‌ 

12:42 PM Mar 08, 2018 | Team Udayavani |

ತಿ.ನರಸೀಪುರ: ಶುದ್ಧ ನೀರು ಘಟಕ ಸ್ಥಾಪನೆಯಾಗಿ ವರ್ಷ ಕಳೆದರೂ, ಇದುವರೆವಿಗೂ ಜನ ಸಾಮಾನ್ಯರಿಗೆ ಒಂದು ಹನಿ ಶುದ್ಧ ನೀರು ದೊರಕಿಸಿಕೊಡಲಾಗದ ಜನಪ್ರತಿನಿಧಿಗಳು, ಅಧಿಕಾರಿಗಳ ಆಡಳಿತ ವೈಖರಿ ವಿರುದ್ಧ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಮೂಗೂರು ಗ್ರಾಮ ಪಂಚಾಯ್ತಿ ಆವರಣದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಹಾಜರಿದ್ದ ಮುಖಂಡ ಮಹದೇವಸ್ವಾಮಿ ಮಾತನಾಡಿ, ಕೋಟ್ಯಂತರ ರೂ. ವ್ಯಯಿಸಿ ಕಳೆದ 1 ವರ್ಷದ ಹಿಂದೆ ಮೂಗೂರು ಮೋಳೆ, ಮೂಗೂರು ಗ್ರಾಮದಲ್ಲಿ ನಿರ್ಮಿಸಿರುವ ಶುದ್ಧ ನೀರು ಘಟಕಗಳನ್ನು ನಿರ್ಮಿಸಿರುವುದು ಸರಿಯಷ್ಟೇ.

ಆದರೆ, ಇದುವರೆವಿಗೂ ಒಂದು ಹನಿ ನೀರು ಜನಸಾಮಾನ್ಯರಿಗೆ ದೊರೆತಿಲ್ಲ. ಈ ನಿಟ್ಟಿನಲ್ಲಿ ಈಗಾಗಲೇ ಬೇಸಿಗೆ ಆರಂಭವಾಗಿದ್ದು, ಶುದ್ಧ ನೀರು ಸಿಗದೇ ಗ್ರಾಮಸ್ಥರು ಪರಿತಪಿಸುವಂತಾಗಿದೆ. ಹಾಗಾಗಿ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಶುದ್ಧ ನೀರಿನ ಘಟಕವನ್ನು ಸರಿಪಡಿಸಿ ಗ್ರಾಮಸ್ಥರಿಗೆ ನೀರು ದೊರಕಿಸಿಕೊಡಬೇಕೆಂದು ಆಗ್ರಹಿಸಿದರು.

ಸೂಕ್ತ ಮಾಹಿತಿ ನೀಡಿ: ಮಾಜಿ ಗ್ರಾಮ ಪಂಚಾಯ್ತಿ ಸದಸ್ಯ ಕೆ.ಶೇಷಣ್ಣ ಮಾತನಾಡಿ, ಗ್ರಾಮ ಪಂಚಾಯಿತಿ ಅಧಿಕಾರಿ, ಸಿಬ್ಬಂದಿಗಳಿಗೆ ಈ ಸ್ವತ್ತಿನ ಬಗ್ಗೆ ಸಮರ್ಪಕ ಮಾಹಿತಿ ಇಲ್ಲದ ಕಾರಣ ಸಿಬ್ಬಂದಿಗಳು ಆಧಾರಗಳು ಇರುವ ದಾಖಲೆಗಳನ್ನು ಸಹ ನಿಯಮಾನುಸಾರ ಈ ಈ ಸ್ವತ್ತಿಗೆ ಅಳವಡಿಸಲಾಗದೇ ಸಾರ್ವಜನಿಕರಿಗೆ ಇನ್ನಿಲ್ಲದ ಕಿರಿಕಿರಿಯನ್ನು ತಂದೊಡ್ಡಿದ್ದು, ಈ ಕುರಿತು ಉನ್ನತ ಅಧಿಕಾರಿಗಳು ಗ್ರಾಮ ಪಂಚಾಯ್ತಿ ಅಧಿಕಾರಿ, ಸಿಬ್ಬಂದಿಗಳಿಗೆ ಸೂಕ್ತ ಮಾಹಿತಿ ನೀಡುವ ಮೂಲಕ ಸಮಸ್ಯೆ ಬಗೆಹರಿಸಬೇಕೆಂದರು.

ಅಧಿಕಾರಿಗಳ ನಿರ್ಲಕ್ಷ್ಯತೆಯಿಂದಾಗಿ ಮೂಗೂರು ಗ್ರಾಮದ ಸುತ್ತಲು 24*7 ವಿದ್ಯುತ್‌ ಯೋಜನೆಯಡಿ ಅಳವಡಿಸಿರುವ ವಿದ್ಯುತ್‌ ಕಂಬಗಳಲ್ಲಿ ಹಗಲಿನಲ್ಲಿ ದೀಪ ಉರಿಯುತ್ತಿದ್ದು, ವಿದ್ಯುತ್‌ ನಷ್ಟವಾಗುತ್ತಿದ್ದು, ಸಂಬಂಧಪಟ್ಟವರು ಈ ಕುರಿತು ಗಮನಹರಿಸುವಂತೆ ಗ್ರಾಮಸ್ಥ ಶಿವಕುಮಾರ್‌ ಸಭೆಯಲ್ಲಿ ಮನವಿ ಮಾಡಿದರು.

Advertisement

ಮನೆ ಮಂಜೂರು: ಪಿಡಿಒ ನಾಗೇಂದ್ರ ಮಾತನಾಡಿ, 2017-18 ನೇ ಸಾಲಿನಲ್ಲಿ ಹೆಚ್ಚುವರಿ ವಸತಿ ಯೋಜನೆಯಡಿ ಒಟ್ಟು 50 ವಸತಿಗಳು  ಮಂಜೂರಾಗಿದ್ದು, ಮೂಗೂರು ಗ್ರಾಮಕ್ಕೆ 25, ಹೊಸಹಳ್ಳಿ ಗ್ರಾಮಕ್ಕೆ 8 ಹೊಸಹಳ್ಳಿ ಮೋಳೆಗೆ 12 ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಲ್ಪಸಂಖ್ಯಾತರಿಗೆ 5 ಮನೆ ಮಂಜೂರಾಗಿದೆ. ಈ ನಿಟ್ಟಿನಲ್ಲಿ ವಸತಿ ರಹಿತ ಫ‌ಲಾನುಭವಿಗಳನ್ನು ಆಯ್ಕೆ ಮಾಡಿಕೊಳ್ಳಲು ಹೆಸರನ್ನು ನೋಂದಾಯಿಸುವಂತೆ ತಿಳಿಸಿದರು.

ಅಧಾರ್‌ ಲಿಂಕ್‌ ಕಡ್ಡಾಯ: ತಾಪಂ ಇಒ ಬಿ.ಎಸ್‌.ರಾಜು ಮಾತನಾಡಿ, ಒಂದೇ ಹೆಸರಿನ ಇಬ್ಬರು ವ್ಯಕ್ತಿಗಳು ವಸತಿ ಯೋಜನೆಯಲ್ಲಿ ತಮ್ಮ ಹೆಸರನ್ನು ಸೇರ್ಪಡಿಸಿರುವ ಪರಿಣಾಮ ಕೆಲ ಸಂದರ್ಭ ಹಣ ನೀಡಲು ತೊಂದರೆಯಾಗಿದೆ. ಹಾಗಾಗಿ ಅಂತಹ ವ್ಯಕ್ತಿಗಳು ತಮ್ಮ ಆಧಾರ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಹೇಳಿದರು.

ಗ್ರಾಮ ಸಭೆಯಲ್ಲಿ ಕೇವಲ ಬೆರಳೆನಿಕೆಯಷ್ಟು ಮಂದಿ ಮಾತ್ರ ಹಾಜರಿದ್ದು, ಜನರಿಲ್ಲದ ಕಾರಣ ಕುರ್ಚಿಗಳು ಖಾಲಿ ಖಾಲಿಯಾಗಿದ್ದವು. ಸಭೆಯಲ್ಲಿ ತಾಪಂ ಸದಸ್ಯ ಮೂಗೂರು ಚಂದ್ರಶೇಖರ್‌, ಅಧ್ಯಕ್ಷೆ ಪಿ.ಶೋಭಾ, ಸದಸ್ಯ ಎಂ.ಆರ್‌.ಸುಂದರ್‌, ಎಂ.ಪಿ.ನಿಂಗಪ್ಪ, ಮೋಹನ್‌ಕುಮಾರ್‌, ಶಿವಮೂರ್ತಿ, ಡ್ರೆ„ವರ್‌ರೇವಣ್ಣ, ಮಾದೇಶ್‌, ಸತೀಶ್‌ಗೌಡ, ಮಾಜಿ ಉಪಾಧ್ಯಕ್ಷ ಮಹದೇವಸ್ವಾಮಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ಜವರೇಗೌಡ, ಪುಟ್ಟಮಾದಯ್ಯ, ಶಶಿಕುಮಾರ್‌, ಗುರುಸ್ವಾಮಿ, ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next