ಯಳಂದೂರು: ಒಂದೇ ಭಾಷೆ ಒಂದೇ ದೇಶ ಎಂಬುದು ವೈವಿಧ್ಯ ಸಂಸ್ಕೃತಿಯುಳ್ಳ, ವಿವಿಧತೆಯಲ್ಲಿ ಏಕತೆಯ ವಿನಾಶದ ಷಡ್ಯಂತ್ರವಾಗಿದ್ದು ಇದಕ್ಕೆ ನನ್ನ ಸಂಪೂರ್ಣ ವಿರೋಧವಿದ್ದು ಕರುನಾಡಿನಲ್ಲಿ ಕನ್ನಡ ಹಾಗೂ ಕನ್ನಡಿಗರಿಗೇ ಮಾನ್ಯತೆ ಹೆಚ್ಚಾಗಿರಬೇಕು ಎಂದು ಶಾಸಕ ಎನ್.ಮಹೇಶ್ ಹೇಳಿದರು. ಪಟ್ಟಣದ ದಿವಾನ್ ಪೂರ್ಣಯ್ಯವಸ್ತು ಸಂಗ್ರಹಾಲಯದ ಮುಂಭಾಗ ತಾಲೂಕು ಆಡಳಿತದಿಂದ ಶುಕ್ರವಾರ ಹಮ್ಮಿಕೊಂಡಿದ್ದ 64ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಧಾರ್ಮಿಕತೆಯ ಪ್ರತಿಬಿಂಬ: ದೇಶದಲ್ಲಿ ಸಾವಿರಾರು ಭಾಷೆಗಳಿವೆ. ನೂರಾರು ಸಂಸ್ಕೃತಿಗಳಿವೆ. ಏಕತೆ ರಾಷ್ಟ್ರ ಆತ್ಮವಾಗಿದೆ. 543 ಪ್ರಾಂತ್ಯಗಳಾಗಿದ್ದ ದೇಶದವನ್ನು, 5 ಪ್ರಾಂತ್ಯಗಳಾಗಿದ್ದ ಕರ್ನಾಟಕವನ್ನು ಏಕೀಕರಣಗೊಳಿಸಲಾಗಿದೆ. ಇವೆಲ್ಲಾ ವಿವಿಧ ಸಂಸ್ಕೃತಿ, ಭಾಷೆಗಳ ಸಂಗಮವಾಗಿದೆ. ಇದಕ್ಕೆ ಬಲವಂತದ ಭಾಷಾ ಹೇರಿಕೆ ಸಿಂಧುವಲ್ಲ. ಭಾಷೆ ಅಭಿವ್ಯಕ್ತಿಯ ಮಾಧ್ಯಮವಲ್ಲ. ಸಂಸ್ಕೃತಿ, ನಾಗರಿಕತೆ, ಧಾರ್ಮಿಕತೆಯ ಪ್ರತಿಬಿಂಬ ಎಂದರು.
ಸರ್ವಾಧಿಕಾರಿ ಧೋರಣೆ: ಕೇವಲ 500 ವರ್ಷಗಳ ಐತಿಹ್ಯ ಇರುವ ಹಿಂದಿ ಹೇರಿಕೆ ಸಂವಿಧಾನದ 8ನೇ ಷೆಡ್ನೂಲ್‌ಗೆ ವಿರೋಧವಾಗಿದೆ. ಭಾಷೆಯೊಂದು ನಾಶವಾದರೆ ತತ್ವ ಸಿದ್ಧಾಂತಗಳ ಮಹತ್ವ ನಾಶವಾಗುತ್ತದೆ. ಇದೊಂದು ಸರ್ವಾಧಿಕಾರಿ ಧೋರಣೆಯಾಗುತ್ತದೆ. ಹಾಗಾಗಿ ಎಲ್ಲಾ ಭಾಷೆಗಳನ್ನು ಬೆಳೆಸುವುದು ಕೇಂದ್ರ ಸರ್ಕಾರದ ಕರ್ತವ್ಯವಾಗಿದೆ. ನಮ್ಮ ರಾಜ್ಯದಲ್ಲಿ ಕನ್ನಡಕ್ಕೆ ಮಾನ್ಯತೆ ಹೆಚ್ಚಾಗಬೇಕು. ಪ್ರತಿ ಕ್ಷೇತ್ರದಲ್ಲೂ ಕನ್ನಡಿಗರಿಗೆ ಕೆಲಸಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಜಾಗೃತಿ ಅವಶ್ಯಕ: ಉಪನ್ಯಾಸಕ ಕೃಷ್ಣಮೂರ್ತಿ ಮಾತನಾಡಿ, ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಬೇಕು. ಇದಕ್ಕೆ ಎಲ್ಲರೂ ಹೋರಾಡಬೇಕು. ಭಾಷಾವಾರು ವಿಂಗಡಣೆಯಲ್ಲಿ ನಾವು ಕಾಸರಗೋಡು, ಉದಕಮಂಡಲ, ತಾಳವಾಡಿ, ಜತ್ತಿ ಇತರ ಪ್ರದೇಶಗಳನ್ನು ಕಳೆದುಕೊಂಡಿದ್ದೇವೆ. ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕು. ಬೆಂಗಳೂರಿನಂಥ ಮಹಾ ನಗರಗಳಲ್ಲಿ ನಮ್ಮ ಭಾಷೆಯ ಜನರು ಕಡಿಮೆಯಾಗುತ್ತಿರುವುದು ಸೋಜಿಗವಾಗಿದ್ದು ಈ ಬಗ್ಗೆ ಜಾಗೃತಿ ಅವಶ್ಯ ಎಂದರು.
ಶಾಲಾ ಮಕ್ಕಳು ನಡೆಸಿಕೊಟ್ಟ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೊರೆಗೊಂಡವು. ಕನ್ನಡ ಭಾಷೆಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಇದಕ್ಕೂ ಮುಂಚೆ ಮಿನಿ ವಿಧಾನಸೌಧದ ಆವರಣದಲ್ಲಿ ರಾಷ್ಟ್ರ ಹಾಗೂ ಕನ್ನಡ ಧ್ವಜಾರೋಹಣವನ್ನು ತಹಶೀಲ್ದಾರ್ ವರ್ಷಾ ನೆರವೇರಿಸಿದರು. ಜಿಲ್ಲಾ, ತಾಲೂಕು, ಪಟ್ಟಣ ಪಂಚಾಯಿಗಳ ಸದಸ್ಯರ ಅನುಪಸ್ಥಿತಿ ಸಭೆಯಲ್ಲಿ ಎದ್ದು ಕಾಣುತ್ತಿತ್ತು.
ಕಸಾಪ ತಾಲೂಕು ಅಧ್ಯಕ್ಷ ಮದ್ದೂರು ವಿರೂಪಾಕ್ಷ, ಉಪ ತಹಶೀಲ್ದಾರ್ ವೈ.ಎಂ.ನಂಜಯ್ಯ, ಇಒ ಬಿ.ಎಸ್.ರಾಜು, ಬಿಇಒ ವಿ.ತಿರುಮಲಾಚಾರ್, ಸಮಾಜ ಕಲ್ಯಾಣ ಇಲಾಖೆಯ ಮೇಘಾ, ಸಿಪಿಐ ಎ.ಕೆ.ರಾಜೇಶ್, ಪಿಎಸ್‌ಐ ರವಿಕುಮಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೈ.ಎಂ. ಮಂಜುನಾಥ್, ವೈ.ಜಿ.ನಿರಂಜನ್, ಮಾಜಿ ಧರ್ಮದರ್ಶಿ ದೊರೆಸ್ವಾಮಿ ಇತರರು ಇದ್ದರು.