Advertisement

ಜನ ಸಂದಣಿ ಪ್ರದೇಶದಲ್ಲಿ ಸಿಸಿಕ್ಯಾಮರಾ ಅಳವಡಿಕೆ ಕಡ್ಡಾಯ

11:38 AM Oct 06, 2018 | |

ಬೀದರ: ಸಾರ್ವಜನಿಕ ಓಡಾಟ ಹೆಚ್ಚಿರುವ ಹಾಗೂ ಜನ ಸಂದಣಿ ಇರುವ ಕಡೆಗಳಲ್ಲಿ ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸುವುದು ಕಡ್ಡಾಯವಾಗಿದ್ದು, ಕಟ್ಟಡ ಮಾಲೀಕರು ಕಡ್ಡಾಯವಾಗಿ ಕ್ಯಾಮರಾಗಳನ್ನು ಅಳವಡಿಸಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ್‌ ಹೇಳಿದರು. ನಗರದ ರಂಗಮಂದಿರದಲ್ಲಿ ಶುಕ್ರವಾರ ಕರ್ನಾಟಕ ಸಾರ್ವಜನಿಕ ಸುರಕ್ಷೆಯ (ಕ್ರಮಗಳ) ಜಾರಿ ಅಧಿನಿಯಮ- 2017ರ ತಿಳಿವಳಿಕೆ ಕಾರ್ಯಗಾರದಲ್ಲಿ ಅವರು ಮಾತನಾಡಿದರು.

Advertisement

ಉತ್ತಮ ಗುಣಮಟ್ಟದ ಕ್ಯಾಮರಾಗಳನ್ನು ಅಳವಡಿಸುವುದರಿಂದ ನಗರದಲ್ಲಿ ಅಪರಾಧ ಪ್ರಕರಣಗಳ ಪತ್ತೆಗೆ ಸಹಕಾರಿ ಆಗುತ್ತದೆ. ಅಲ್ಲದೆ, ಕ್ಯಾಮರಾ ಇರುವ ಕಡೆಗಳಲ್ಲಿ ಅಪರಾಧ ಪ್ರಕರಣಗಳ ಕಡಿಮೆಯಾಗುತ್ತವೆ. ಯಾವುದೇ ಘಟನೆಗಳು ಘಟಿಸಿದ ಸಂದರ್ಭದಲ್ಲಿ ಅಂತಹ ವ್ಯಕ್ತಿಗಳನ್ನು ಗುರುತಿಸಿ ಪತ್ತೆಹಚಲು ಪ್ರತಿಯೊಬ್ಬರು ಸಹಕರಿಸಬೇಕು. ರಾಜ್ಯದಲ್ಲಿನ ಕಾರ್ಯ ಸಂಸ್ಥೆಗಳಲ್ಲಿ ಸಾರ್ವಜನಿಕ ಸುರಕ್ಷೆಯ ಕ್ರಮಗಳನ್ನು ಉಪಬಂಧಿ ಸುವುದಕ್ಕಾಗಿ ಈ ಅಧಿನಿಯಮ ಜಾರಿ ಮಾಡಲಾಗಿದೆ. ವಾಣಿಜ್ಯ ಕಾರ್ಯಸಂಸ್ಥೆಗಳು, ಕೈಗಾರಿಕಾ ಸಂಸ್ಥೆ, ಧಾರ್ಮಿಕ ಸಂಸ್ಥೆ, ಶೈಕ್ಷಣಿಕ ಸಂಸ್ಥೆ, ಆಸ್ಪತ್ರೆಗಳು, ಸಂಕೀರ್ಣಗಳು, ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣ, ಸಂಘಟಿತ ಧಾರ್ಮಿಕ ಕೂಟಗಳು ಸೇರಿದಂತೆ ಇತರೆ ಕಾರ್ಯ ಸಂಸ್ಥೆಗಳ ಮಾಲೀಕರು ತಮ್ಮ ಸ್ವಂತ ವೆಚ್ಚದಲ್ಲಿ ಸಿಸಿಟಿವಿಯಂತಹ ಸಾರ್ವಜನಿಕ ನಿಗಾವ್ಯವಸ್ಥೆ ಅಳವಡಿಸಿಕೊಳ್ಳಬೇಕು ಎಂದು ಸೂಚಿಸಿದರು.

ಸರ್ಕಾರದ ಮಾರ್ಗಸೂಚಿಗಳ ನಿಯಮವನ್ನು ತಪ್ಪದೆ ಪಾಲಿಸಬೇಕು. ನಿಯಮ ಪಾಲನೆ ಮಾಡದಿದ್ದಲ್ಲಿ ಅಂತಹ ಸಂಸ್ಥೆಯ ಮಾಲೀಕರು ಅಥವಾ ವ್ಯವಸ್ಥಾಪಕ ಅಥವಾ ವ್ಯಕ್ತಿಗಳಿಗೆ ಅನುಪಾಲನೆಗಾಗಿ ಹದಿನೈದು ದಿನಗಳ ಸಮಯ
ನೀಡಿ ಕಾರಣ ಕೇಳಿ ನೋಟಿಸ್‌ ನೀಡಲಾಗುವುದು. ಈ ನೋಟಿಸಿನ ನಿರ್ದೇಶನಗಳನ್ನು ಪಾಲಿಸಲು ತಪ್ಪಿದಲ್ಲಿ ಕರ್ತವ್ಯ ಲೋಪದ ಮೊದಲು ತಿಂಗಳು 5000 ರೂ., ಎರಡನೇ ತಿಂಗಳಿಗೆ 10,000 ರೂ. ದಂಡ ವಿಧಿಸಲಾಗುತ್ತದೆ. ಎರಡನೇ ಹಂತದಲ್ಲಿ ಪರವಾನಗಿ ರದ್ದು ಪಡಿಸಲು ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸುರಕ್ಷಿತ ಕ್ರಮಗಳನ್ನು ಕೈಗೊಂಡ ಬಗ್ಗೆ ನಿಗದಿತ ನಮೂನೆಯಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಸಂಬಂಧಿತ
ಠಾಣೆಗಳಿಗೆ ವರದಿಯೊಂದನ್ನು ಸಲ್ಲಿಸಬೇಕು. ವರದಿ ನೀಡುವುದನ್ನು ತಪ್ಪಿಸಿದಲ್ಲಿ ಇದಕ್ಕೂ ಕೂಡ ದಂಡ ವಿಧಿಸಲಾಗುವುದು ಎಂದು ತಿಳಿಸಿದರು. 30 ದಿನಗಳವರೆಗೆ ದೃಶ್ಯಗಳನ್ನು ಕಾಯ್ದು ಇಟ್ಟುಕೊಳ್ಳುವ ವ್ಯವಸ್ಥೆ ಮಾಡಬೇಕು.
ಪೊಲೀಸರು ಆಗಾಗ ಭೇಟಿ ನೀಡಿ ಅದನ್ನು ಪರಿಶೀಲಿಸುವ ಹಕ್ಕು ಹೊಂದಿರುತ್ತಾರೆ ಎಂದು ತಿಳಿಸಿದರು.

ದೃಶ್ಯಾವಳಿಗಳಲ್ಲಿ ಮುಖ್ಯರಸ್ತೆ, ಮುಖ್ಯ ಪ್ರವೇಶ ದ್ವಾರ, ನಿರ್ಗಮನ ದ್ವಾರ, ವಹಿವಾಟು ಸ್ಥಳ, ಪಾರ್ಕಿಂಗ್‌ ಎಲ್ಲವೂ ಕಾಣುವಂತಿರಬೇಕು ಎಂದು ತಿಳಿಸಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀಹರಿ ಬಾಬು, ಪೊಲೀಸ್‌ ಇಲಾಖೆ ಅಧಿಕಾರಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next