ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಜನಪ್ರಿಯ ಕಾರ್ಯಕ್ರಮಗಳು, ಭರವಸೆಗಳ ಮೂಲಕ ಮತದಾರರನ್ನು ಸೆಳೆದು ಕೊಳ್ಳುವ ಪ್ರಯತ್ನ ಎಗ್ಗಿಲ್ಲದೇ ಸಾಗಿದೆ. ಈ ಬಾರಿಯೂ ರಿಪಬ್ಲಿಕನ್ ಪಕ್ಷದ ಪ್ರಮುಖ ಚಹರೆಯಾಗಿರುವ ಡೊನಾಲ್ಡ್ ಟ್ರಂಪ್, ಮತ್ತೆ 4 ವರ್ಷ ಆಡಳಿತಾವಕಾಶ ಪಡೆಯಲು ಕೋವಿಡ್ ಸೋಂಕಿನ ನಡುವೆಯೂ ತಮ್ಮ ಪ್ರಯತ್ನಗಳಿಗೆ ವೇಗ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಅವರೀಗ ಎಚ್-1ಬಿ ವೀಸಾಗೆ ಮತ್ತಷ್ಟು ನಿರ್ಬಂಧಗಳನ್ನು ವಿಧಿಸುವ ಘೋಷಣೆ ಮಾಡಿದ್ದಾರೆ. ಎಚ್-1ಬಿ ವೀಸಾ ವಿಚಾರದಲ್ಲಿ 4 ತಿಂಗಳುಗಳ ಹಿಂದೆಯೇ ಟ್ರಂಪ್ ಹಲವು ನಿರ್ಬಂಧಗಳನ್ನು ಜಾರಿ ಮಾಡಿದ್ದರು. ಈಗ ಅದನ್ನು ಮತ್ತಷ್ಟು ಬಿಗಿಗೊಳಿಸುತ್ತಿರುವುದು ಔದ್ಯಮಿಕ ವಲಯದಿಂದ ತೀವ್ರ ಟೀಕೆ ಎದುರಿಸುತ್ತಿದೆ.
ಅಮೆರಿಕದಲ್ಲಿ ನವೆಂಬರ್ 3ರಂದು ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಚುನಾವಣ ದಿನಾಂಕ ಸಮೀಪಿಸುತ್ತಿರುವಂತೆಯೇ ಟ್ರಂಪ್ ಮತ್ತಷ್ಟು ಜನಪ್ರಿಯ ಧೋರಣೆಗಳತ್ತ ವಾಲುವುದು ನಿಶ್ಚಿತ. ಅಮೆರಿಕದ ಆರ್ಥಿಕತೆ ಕೋವಿಡ್‌ನ ಹೊಡೆತದಿಂದ ಚೇತರಿಸಿಕೊಳ್ಳುವ ಹಾದಿಯಲ್ಲಿದೆಯಾದರೂ ಆರ್ಥಿಕತೆಗೆ ಆರಂಭಿಕ ಸಮಯದಲ್ಲಿ ಬಿದ್ದ ಪೆಟ್ಟು ಲಕ್ಷಾಂತರ ಜನರ ಉದ್ಯೋಗ ನಷ್ಟಕ್ಕೆ ಕಾರಣವಾಯಿತು. ಈ ನಿರುದ್ಯೋಗದ ಸಮಸ್ಯೆಯನ್ನು ತಮ್ಮ ಚುನಾವಣ ಪ್ರಚಾರದ ಪ್ರಮುಖ ಅಸ್ತ್ರವಾಗಿಸಿಕೊಂಡಿದೆ ಜೋ ಬೈಡನ್ ನೇತೃತ್ವದ ಡೆಮಾಕ್ರಟಿಕ್ ಪಕ್ಷ. ಅಮೆರಿಕನ್ ಕೆಲಸಗಳು ಅಮೆರಿಕನ್ನರಿಗೇ ಸಿಗುವಂತೆ ಮಾಡುತ್ತೇನೆ ಎಂಬ ಭರವಸೆ ನೀಡಿ ಅಧಿಕಾರಕ್ಕೆ ಬಂದ ಟ್ರಂಪ್ ಅವರಿಗೆ ತಮ್ಮ ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗದ ಸಮಸ್ಯೆ ಸವಾಲಾಗಿದ್ದು, ಕೊನೆಯ ಅಸ್ತ್ರವಾಗಿ ಅವರು ಎಚ್-1ಬಿ ವೀಸಾವನ್ನು ಬಳಸುತ್ತಿದ್ದಾರೆ. ನವ ನಿರ್ಬಂಧಗಳು ಅಮೆರಿಕನ್ನರ ನೌಕರಿಗಳನ್ನು ಉಳಿಸಲು ಮತ್ತು ಅರ್ಥವ್ಯವಸ್ಥೆಯನ್ನು ಹಳಿಯೇರಿಸಲು ಸಹಕರಿಸಲಿವೆ ಎನ್ನುವುದು ಶ್ವೇತಭವನದ ವಾದ.
ಅನ್ಯ ದೇಶದವರು ಅಮೆರಿಕನ್ನರ ಕೆಲಸಗಳನ್ನು ಕಿತ್ತುಕೊಳ್ಳುತ್ತಿದ್ದಾರೆ ಎನ್ನುವ ಅಸಮಾಧಾನ ಅಲ್ಲಿನ ಜನರಿಗೆ ದಶಕಗಳಿಂದ ಇದ್ದು, ಈಗಿನ ಸಂಕಷ್ಟವು ಅವರಲ್ಲಿ ಅಸಮಾಧಾನ ಹೆಚ್ಚುವಂತೆ ಮಾಡಿದೆ. ಇದು ಎಷ್ಟು ಸೂಕ್ಷ್ಮ ವಿಚಾರವಾಗಿ ಬದಲಾಗಿದೆಯೆಂದರೆ, ವಿಪಕ್ಷ ಡೆಮಾಕ್ರಟಿಕ್ ಪಾರ್ಟಿ ಸಹ ಕಳೆದ ಬಾರಿ ಮಾಡಿದಂತೆ ಈ ಬಾರಿ ಎಚ್-1ಬಿ ವೀಸಾ ಮೇಲೆ ವಿಧಿಸಲಾದ ನಿರ್ಬಂಧಗಳ ವಿಚಾರದಲ್ಲಿ ಜೋರಾಗಿ ಧ್ವನಿಯೆತ್ತುತ್ತಿಲ್ಲ.
ಈ ಹಿಂದೆಯೇ ಅಮೆರಿಕನ್ ಕಂಪೆನಿಗಳಲ್ಲಿನ ವಿದೇಶಿ ಕೆಲಸಗಾರರ ನೌಕರಿಯ ವಿಚಾರದಲ್ಲಿ ಹಾಗೂ ಭತ್ಯೆಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ತರಲಾಗಿದೆ. ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಐಟಿ ಕಂಪೆನಿಗಳಿಗೆ ಸ್ಥಳೀಯ ನೌಕರರನ್ನು ನೇಮಿಸಿಕೊಳ್ಳಲು ಹೆಚ್ಚು ಖರ್ಚು ಆಗುತ್ತಿದೆ. ಸಹಜವಾಗಿಯೇ, ಟ್ರಂಪ್ ಆಡಳಿತದ ಇಂಥ ನಿರ್ಧಾರಗಳಿಂದಾಗಿ ಅಮೆರಿಕನ್ನರಿಗೆ ಖುಷಿಯಾಗಲಿದೆಯಾದರೂ ಭಾರತೀಯ ಮೂಲದ ಮತದಾರರ ಭಾವನೆ ಹೇಗಿರಲಿದೆಯೋ ತಿಳಿಯದು. ಅಮೆರಿಕನ್ ಚುನಾವಣೆಯಲ್ಲಿ ಫ್ಲೊರಿಡಾ ಸೇರಿದಂತೆ 14 ರಾಜ್ಯಗಳು ಫಲಿತಾಂಶದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ರಾಜ್ಯಗಳಲ್ಲಿ ಭಾರತೀಯ ಮೂಲದ ಮತದಾರರ ಸಂಖ್ಯೆಯೂ ಅಧಿಕವಿದೆ. ಹೀಗಾಗಿ ಎಚ್-1ಬಿ ವೀಸಾ ವಿಚಾರದಲ್ಲಿನ ಟ್ರಂಪ್‌ರ ನಡೆಗಳು, ಈ ಮತವರ್ಗಗಳ ಮೇಲೆ ಯಾವ ರೀತಿಯ ಪ್ರಭಾವ ಬೀರಲಿವೆಯೋ ನೋಡಬೇಕು.