Advertisement

ಸಾಮಾಜಿಕ ಮಾಧ್ಯಮಗಳ ಭಯೋತ್ಪಾದನೆಯಿಂದ ದುಷ್ಪರಿಣಾಮ

07:16 AM Mar 19, 2019 | Team Udayavani |

ಮೈಸೂರು: ಸಾಮಾಜಿಕ ಮಾಧ್ಯಮಗಳ ಭಯೋತ್ಪಾದನೆ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಜಯದೇವ ಹೃದ್ರೋಗ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ಆತಂಕ ವ್ಯಕ್ತಪಡಿಸಿದರು.

Advertisement

ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಶಾಖೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಶಾರದಾ ವಿಲಾಸ ಕಾಲೇಜು ಶತಮಾನೋತ್ಸವ ಭವನದಲ್ಲಿ  ಏರ್ಪಡಿಸಿದ್ದ ಡಾ.ಎಸ್‌.ಪಿ.ಯೋಗಣ್ಣ ಅವರ ಬದುಕು ಮತ್ತು ಬರಹ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಸಾಮಾಜಿಕ ಮಾಧ್ಯಮ ಜೀರೋಗಳನ್ನು ಹೀರೋ ಅಂಥಲೂ ಅಥವಾ ಹೀರೋಗಳನ್ನು ಜೀರೋ ಆಗಿ ತೋರಿಸಿ ಸಮಾಜದ ದಿಕ್ಕು ತಪ್ಪಿಸುತ್ತಿದೆ. ಭಯೋತ್ಪಾದನೆಗಿಂತ ಇದು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದರು.

ಈಡಿಯಟ್‌ ಸಿಂಡ್ರೋಮ್‌: ಮಾನವ ಸೃಷ್ಟಿಸಿದ ಮೊಬೈಲ್‌ನಿಂದ ಒಳಿತಿನ ಜತೆಗೆ ದೈಹಿಕ, ಮಾನಸಿಕ, ಸಾಮಾಜಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಹೆಚ್ಚಾಗಿದೆ. ಆಧುನಿಕತೆ, ತಂತ್ರಜ್ಞಾನ ಅಭಿವೃದ್ಧಿ, ಸಾಮಾಜಿಕ ಮಾಧ್ಯಮದಿಂದಾಗಿ ವೈದ್ಯರ ಮೇಲೆ ನಿರಂತರ ಒತ್ತಡ ಹೆಚ್ಚಾಗಿ ವೈದ್ಯರೂ ರೋಗಿಗಳಾಗುತ್ತಿದ್ದಾರೆ.

ಇದಕ್ಕೆ ಇಂಗ್ಲಿಷ್‌ನಲ್ಲಿ ‘ಈಡಿಯಟ್‌ ಸಿಂಡ್ರೋಮ್‌’ ಅಂತಾರೆ. ವೈದ್ಯ ವೃತ್ತಿ ಯುದ್ಧ ಕ್ಷೇತ್ರದಂತಾಗಿದೆ. ವೈದ್ಯರ ವಿರುದ್ಧ ದೂರು ನೀಡುವ, ಹಲ್ಲೆ ನಡೆಸುವ ಪ್ರವೃತ್ತಿ ಹೆಚ್ಚುತ್ತಿದೆ. ಇದರಿಂದ ವೈದ್ಯರ ಜೀವಿತಾವಧಿಯಲ್ಲಿ 10 ವರ್ಷ ಕಡಿಮೆ ಆಗುತ್ತಿದೆ. ಈ ಮನೋಭಾವ ಹೋಗಬೇಕು ಎಂದು ಹೇಳಿದರು. 

Advertisement

ವೈದ್ಯ ಸಾಹಿತ್ಯ: ಬದಲಾದ ಜೀವನ ಶೈಲಿಯಿಂದ ಸಮಸ್ಯೆ ಉದ್ಭವಿಸಿದೆ. ಹಿಂದೆ ಮಕ್ಕಳು ಪೋಷಕರನ್ನು ಚಿಕಿತ್ಸೆಗೆ ಕರೆತರುತ್ತಿದ್ದರು. ಈಗ ಅದು ಉಲ್ಟಾ ಆಗಿದೆ. ದೇಶದಲ್ಲಿ ಹೃದಯಾಘಾತ, ರಕ್ತದ ಒತ್ತಡ, ಸಕ್ಕರೆ ಕಾಯಿಲೆ, ಪಾರ್ಶ್ವವಾಯು, ಕ್ಯಾನ್ಸರ್‌ನಿಂದ ಶೇ.50 ಮಂದಿ ಬಳಲುತ್ತಿದ್ದಾರೆ.

ಅವರಿಗೆ ಆರೋಗ್ಯ ಸಮಸ್ಯೆ, ಚಿಕಿತ್ಸೆ ವಿಧಾನದ ಬಗ್ಗೆ ತಿಳಿಸುವ ವೈದ್ಯ ಸಾಹಿತ್ಯ ಬೇಕು. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಯೋಗಣ್ಣ ಅವರು ಒಳ್ಳೆ ಹೆಜ್ಜೆ ಇಡುತ್ತಿದ್ದಾರೆ. ಕನ್ನಡದಲ್ಲಿ ಜನತೆಗೆ ಆರೋಗ್ಯ ಕುರಿತು ಮಾಹಿತಿ ನೀಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ನಿವೃತ್ತ ಪ್ರಾಧ್ಯಾಪಕ ಡಾ.ಸಿ.ಚಿಕ್ಕಮೊಗ ಡಾ.ಎಸ್‌.ಪಿ.ಯೋಗಣ್ಣ ಕುರಿತ ಕಿರುಹೊತ್ತಿಗೆ ಬಿಡುಗಡೆ ಮಾಡಿದರು. ಐಎಂಎ ರಾಜ್ಯಶಾಖೆ ನಿಯೋಜಿತ ಅಧ್ಯಕ್ಷ ಡಾ.ಮಧುಸೂದನ್‌ ಕಾರಿಗನೂರು, ಉಪಾಧ್ಯಕ್ಷ ಸುರೇಶ್‌ ರುದ್ರಪ್ಪ, ಜಿಲ್ಲಾ ಕಸಾಪ ಅಧ್ಯಕ್ಷ ವೈ.ಡಿ.ರಾಜಣ್ಣ, ಸುಯೋಗ್‌ ಆಸ್ಪತ್ರೆ ಸಂಸ್ಥಾಪಕ ಎಸ್‌.ಪಿ.ಯೋಗಣ್ಣ ಉಪಸ್ಥಿತರಿದ್ದರು.

ರೋಗಿಗಳ ಬಗ್ಗೆ ಸಹಾನುಭೂತಿ ಇರಲಿ: ವೈದ್ಯ ಕ್ಷೇತ್ರದಲ್ಲಿ ಅಲೋಪತಿ, ಹೋಮಿಯೋಪತಿ ಎಂಬುದೆಲ್ಲಾ ಇರಬಹುದು. ಆದರೆ, ರೋಗಿಗಳ ಬಗ್ಗೆ ಸಿಂಪತಿ (ಸಹಾನುಭೂತಿ) ಇರಬೇಕು. ರೋಗಿಗಳನ್ನು ವಸ್ತುಗಳಂತೆ ನಡೆಸಿಕೊಳ್ಳಬಾರದು. ಅವರ ಭಾವನೆ ಅರ್ಥ ಮಾಡಿಕೊಂಡು ಮಾನವೀಯ ನೆಲೆಗಟ್ಟಿನಲ್ಲಿ ಚಿಕಿತ್ಸೆ ನೀಡಬೇಕು ಎಂದು ಡಾ.ಸಿ.ಎನ್‌.ಮಂಜುನಾಥ್‌ ತಿಳಿಸಿದರು.

ಸಾಮಾನ್ಯ ಜ್ಞಾನದ ಕೊರತೆಯಿಂದ ಸಮಾಜದಲ್ಲಿ ಹಲವು ವಿಪರ್ಯಾಸ ನೋಡುತ್ತಿದ್ದೇವೆ. ದೊಡ್ಡಮನೆಯಲ್ಲಿ ಕಡಿಮೆ ಜನ, ಹೆಚ್ಚು ಪದವಿಗಳಿಸಿದ್ದರೂ ಕಡಿಮೆ ಜ್ಞಾನ, ಜ್ಞಾನ-ಸಂಶೋಧನೆ ಮುಂದುವರಿದರೂ ಹೆಚ್ಚುತ್ತಿರುವ ಕಾಯಿಲೆ, ಆರ್ಥಿಕ ಅಭಿವೃದ್ಧಿಯಲ್ಲೂ ನೈತಿಕತೆ ಕೊರತೆ, ಬಹಿರಂಗದ ಗೆಲುವಿನಿಂದ ಅಂತರಂಗದ ಸೋಲಿನಂಥ ವಿಪರ್ಯಾಸ ಕಾಣುತ್ತಿದ್ದೇವೆ ಎಂದು ವಿಷಾದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next