ಹೊಸಪೇಟೆ: ಕನ್ನಡ ವಿಶ್ವವಿದ್ಯಾಲಯದಲ್ಲಿ “ತರಕಾರಿ ವ್ಯಾಪಾರಸ್ಥರ ಮೇಲೆ ಜಾಗತೀಕರಣದ ಪ್ರಭಾವ’ ವಿಷಯ ಕುರಿತು ಪಿಎಚ್.ಡಿ. ಸಂಶೋಧನಾರ್ಥಿ ವೀರೇಂದ್ರ ಕುಮಾರ ಬುಧವಾರ ಪ್ರಬಂಧ ಮಂಡಿಸಿದರು.
ಸಾಂಪ್ರದಾಯಿಕ ಗ್ರಾಮೀಣ ಸಂತೆಮಾಳ ಮಾಯವಾಗಿ ಆಧುನಿಕ ಖರೀದಿ ಪ್ರಕ್ರಿಯೆಯಿಂದ ರೈತರು ಅನ್ಯಾಯ ಅನುಭವಿಸುವಂತಾಗಿದೆ. ಇದರಿಂದ ಸರಕು ವ್ಯಾಪಾರಿ ಹಾಗೂ ಚಿಲ್ಲರೆ ವ್ಯಾಪಾರಿಗಳ ನಡುವೆ ಬಹಳಷ್ಟು ವ್ಯಾತ್ಯಾಸ ಕಂಡು ಬಂದು ಆಧುನೀಕರಣದ ಪ್ರಕ್ರಿಯೆಯಲ್ಲಿ ತರಕಾರಿ ವ್ಯಾಪಾರಸ್ಥರು ತೊಂದರೆ ಅನುಭವಿಸಿದಂತಾಗಿದೆ ಎಂದರು.
ನಗದು ವಹಿವಾಟು ಕಣ್ಮರೆಯಾಗಿ ಡಿಜಿಟಲೀಕರಣದ ಅಂಶಗಳಾದ ಗೂಗಲ್ ಪೇ, ಫೋನ್ ಪೇ, ಪೇಟಿಯಂಗಳಿಂದ ತಂತ್ರಜ್ಞಾನ ರಾರಾಜಿಸುತ್ತಿದೆ. ಹಾಗೆಯೇ ಎತ್ತು ಬಂಡಿಗಳಿಂದ ರವಾನಿಸುತ್ತಿದ್ದ ಸರಕು ಇಂದು ಬೈಕ್, ಆಟೋ, ಟ್ಯಾಕ್ಸಿ ಮುಂತಾದ ಆಧುನಿಕ ವಾಹನಗಳಿಂದ ಮನೆ ಬಾಗಿಲಿಗೆ ತಂದು ನಿಲ್ಲಿಸಿ, ವಿಶ್ವವೇ ಒಂದು ಮನೆಯನ್ನಾಗಿಸಿದೆ. ಜಾಗತೀಕರಣದಿಂದ ವಿವಿಧ ರಾಜ್ಯ ರಾಷ್ಟ್ರಗಳನ್ನು ಒಗ್ಗೂಡಿಸಿ ವಿಮಾನ ರೈಲಿನ ಮೂಲಕ ತರಕಾರಿ ವಹಿವಾಟು ನಡೆಯುತ್ತಿದ್ದು, ಈ ಸೌಲಭ್ಯವು ಗ್ರಾಮೀಣ ಭಾಗದ ರೈತರಿಗೆ ಮರೀಚಿಕೆಯಾಗಿದೆ. ಅಲ್ಲದೇ ಇ ಟೆಂಡರ್‌ನ ಮೂಲಕ ಜಾಗತೀಕರಣವು ತನ್ನ ಪ್ರಭಾವವನ್ನು ಬೀರಿ ನೇರವಾಗಿ ರೈತರ ಹೊಲಗದ್ದೆಗಳಿಗೆ ಹೋಗಿ ಕೊಂಡುಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗುವಂತೆ ಮಾಡಿದೆ ಎಂದರು.
ಇದನ್ನೂ ಓದಿ: ಕಬಿನಿ ಹಿನ್ನೀರಿನಲ್ಲಿ ಈಜಿದ ಹುಲಿ
ಜಾನಪದ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ| ಸಿ.ಟಿ.ಗುರುಪ್ರಸಾದ್ ಮಾತನಾಡಿ, 1990ರ ಅವಧಿಯಲ್ಲಿ ಭಾರತವು ಜಾಗತೀಕರಣಕ್ಕೆ ತೆರೆದುಕೊಂಡಿದ್ದು ನಕಾರಾತ್ಮಕ ಹಾಗೂ ಸಕಾರಾತ್ಮಕ ಅಂಶಗಳ ಮೂಲಕ ಪ್ರಭಾವ ಬೀರಿದೆ. ತಂತ್ರಜ್ಞಾನದ ಲಭ್ಯತೆ ದಕ್ಷತೆ ಗುಣಗಳು ಸಕಾರಾತ್ಮಕವಾಗಿ ಕಂಡು ಬಂದರೆ, ಹಣದುಬ್ಬರ ಪ್ರಮಾಣ, ವಿವಿಧ ವಿದ್ಯಮಾನಗಳು ಮಾರುಕಟ್ಟೆಯ ಮೇಲೆ ನೇರ ಪರಿಣಾಮವನ್ನು ಬೀರಿ ನಕಾರಾತ್ಮಕ ಗುಣಗಳೆನಿಸಿವೆ. ಅಲ್ಲದೇ ಹಣಕಾಸು ನೀತಿ ಬಡ್ಡಿದರವು ಜಾಗತೀಕರಣದ ಪ್ರಭಾವಕ್ಕೊಳಗಾದ ಅಂಶಗಳೂ ಆಗಿವೆ ಎಂದು ಹೇಳಿದರು.
ಡಾ| ಸಿ.ಟಿ. ಗುರುಪ್ರಸಾದ್ ಮುಖ್ಯಸ್ಥರು ಅಧ್ಯಕ್ಷತೆ ವಹಿಸಿದ್ದರು. ಸಂಶೋಧನಾರ್ಥಿ ಬಸವರಾಜ ಪೂಜಾರ ನಿರೂಪಿಸಿದರು. ಸಂಶೋಧನಾರ್ಥಿ ಕೋಮಲಾ. ಬಿ ಪ್ರಾರ್ಥನೆಯ ಮೂಲಕ ಚಾಲನೆ ನೀಡಿದರು. ಯಮನೂರಪ್ಪ ಸ್ವಾಗತಿಸಿದರು. ಏಕಾಂತಪ್ಪ. ಬಿ ವಂದಿಸಿದರು. ನಾಗೇಶ ಪೂಜಾರ ಹಾಗೂ ಮಂಜುನಾಥ ಎಸ್ .ಪಿ. ವರದಿ ಮಾಡಿದರು.