Advertisement
ಹಲವೆಡೆ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು. ಮಳೆಯ ಹೊಡೆತಕ್ಕೆ ಹತ್ತು ಮರಗಳು ನೆಲಕಚ್ಚಿದವು. ಮತ್ತೆ ನೂರಾರು ಗುಂಡಿಗಳು ಬಾಯೆ¤ರೆದವು. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ಹೊಸೂರು ರಸ್ತೆ, ಮೈಸೂರು ರಸ್ತೆಗಳಲ್ಲಿ ಬಸ್ ಕಾರ್ಯಾಚರಣೆಗೆ ಮಳೆ ತೀವ್ರ ಅಡ್ಡಿಪಡಿಸಿತು. ಸಕಾಲದಲ್ಲಿ ಬಸ್‌ಗಳು ನಿಗದಿತ ಸ್ಥಳ ತಲುಪಲಿಲ್ಲ. ಇದರಿಂದ ಅಲ್ಲಿ ಕೆಲವು ಟ್ರಿಪ್‌ಗ್ಳಿಗೆ ಕತ್ತರಿಬಿದ್ದಿತು.
Related Articles
Advertisement
ಅಲ್ಲದೆ, ಎಲೆಕ್ಟ್ರಾನಿಕ್ ಸಿಟಿಯ ಪಿಇಎಸ್ ಕಾಲೇಜು ಬಳಿ ಬಿಎಂಟಿಸಿ ಬಸ್, ಆಟೋ, ದ್ವಿಚಕ್ರವಾಹನಗಳು ನೀರಿನಲ್ಲಿ ಮುಳುಗಿದವು. ಅಲ್ಲಲ್ಲಿ ಜನ ಆಕ್ರೋಶ ಹೊರಹಾಕುತ್ತಿರುವುದು ಕಂಡುಬಂತು. ಕನ್ನಿಂಗ್‌ಹ್ಯಾಂ ರಸ್ತೆಯಲ್ಲಿ ಮ್ಯಾನ್‌ಹೋಲ್ ತುಂಬಿಹರಿಯಿತು. ನಗರದ ಬೊಮ್ಮನಹಳ್ಳಿಯಲ್ಲಿ ಅತಿ ಹೆಚ್ಚು 75.5 ಮಿ.ಮೀ. ಮಳೆಯಾಗಿದೆ. ಪಂಗಿರಾಮನಗರದಲ್ಲಿ 62, ಕಾಟನ್‌ಪೇಟೆ 56, ಮುತ್ತನ ಆಲೂರು 46 ಮಿ.ಮೀ. ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವರಿ ಕೇಂದ್ರ ತಿಳಿಸಿದೆ. ತಡರಾತ್ರಿ ಮತ್ತೆ ಮಳೆ ಮುಂದುವರಿದಿದ್ದರಿಂದ ನಗರದ ಜನ ಆತಂಕದಲ್ಲಿ ರಾತ್ರಿ ದೂಡಿದರು.
ಪೊಲೀಸ್ ಚೌಕಿಗಳೇ ಆಶ್ರಯ: ನಗರದಲ್ಲಿ ಗುರುವಾರ ಮಧ್ಯಾಹ್ನದಿಂದ ನಿರಂತರವಾಗಿ ಸುರಿದ ಭಾರಿ ಮಳೆಯಿಂದ ತಪ್ಪಿಸಿಕೊಳ್ಳಲು ಸಾರ್ವಜನಿಕರು ಬಸ್ ತಂಗುದಾಣ ಹಾಗೂ ಮರಗಳನ್ನು ಆಶ್ರಯಿಸಿದರು. ಇನ್ನು ಕೆಲವು ಪ್ರಮುಖ ಜಂಕ್ಷನ್‌ಗಳಲ್ಲಿನ ಪೊಲೀಸ್ ಚೌಕಿಗಳಲ್ಲಿಯೂ ಜನರು ಆಶ್ರಯ ಪಡೆದಿದ್ದು ಕಂಡು ಬಂತು.
50ಕ್ಕೂ ಹೆಚ್ಚು ದೂರುಗಳು: ಗುರುವಾರ ಮಧ್ಯಾಹ್ನದಿಂದ ಬಿಬಿಎಂಪಿಯ ಎಂಟೂ ವಲಯಗಳಲ್ಲಿ ಮನೆಗಳಿಗೆ ನೀರು ನುಗ್ಗಿರುವುದು, ರಸ್ತೆಗಳಲ್ಲಿ ನೀರು ನಿಂತಿರುವುದು, ಬೀದಿ ದೀಪಗಳು ಹಾಳಾಗಿರುವುದು, ಗೋಡೆ ಕುಸಿದಿರುವುದು ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ದೂರುಗಳು ಪಾಲಿಕೆಗೆ ಬಂದಿವೆ. ಇದರೊಂದಿಗೆ ಸ್ವತಃ ಮೇಯರ್ ಸಂಪತ್‌ರಾಜ್ ಅವರೇ ಕಂಟ್ರೋಲ್ ರೂಂನಲ್ಲಿ ಕುಳಿತು ಸಾರ್ವಜನಿಕರ ಅಹವಾಲು ಸ್ವೀಕರಿಸಿದ್ದಾರೆ.
ಹತ್ತಕ್ಕೂ ಹೆಚ್ಚು ಮರಗಳು ಧರೆಗೆ: ಗುರುವಾರದ ಭಾರಿ ಮಳೆಗೆ ನಗರದ ವಿವಿಧ ಭಾಗಗಳಲ್ಲಿ ಹತ್ತಕ್ಕೂ ಹೆಚ್ಚು ಮರಗಳು ಧರೆಗುರುಳಿದರ ಪರಿಣಾಮ ಕೆಲ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಕೋರಮಂಗಲ, ವಸಂತನಗರ, ಉಲ್ಲಾಳ, ಮಹದೇವಪುರ ಮುಖ್ಯರಸ್ತೆ, ಕಾಡುಗೋಡಿ ಹಾಗೂ ಸುಬ್ರಮಣ್ಯ ನಗರದಲ್ಲಿ ಹತ್ತಕ್ಕೂ ಹೆಚ್ಚು ಮರ ಹಾಗೂ ಮರದ ಕೊಂಬೆಗಳು ಧರೆಗುರುಳಿವೆ.
ದಿನವಿಡೀ ಪರಿಶೀಲನೆ: ಗುರುವಾರ ಬೆಳಗ್ಗೆಯಿಂದಲೇ ಮಳೆಯಿಂದ ಅನಾಹುತಕ್ಕೆ ಒಳಗಾದ ಪ್ರದೇಶಗಳಿಗೆ ಮೇಯರ್ ಸಂಪತ್‌ರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರದ ಗುರುವಾರ ಮಧ್ಯಾಹ್ನ ಆರಂಭವಾದ ಮಳೆಯ ನಡುವೆಯೇ ಮೇಯರ್ ಮೈಸೂರು ರಸ್ತೆ ಸೇರಿದಂತೆ ಪ್ರಮುಖ ಪ್ರದೇಶಗಳಿಗೆ ಭೇಟಿ ನೀಡಿ ಶೀಘ್ರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
15 ವಿಶೇಷ ತಂಡಗಳ ರಚನೆ: ನಗರದ ಎಲ್ಲ ವಾರ್ಡ್‌ಗಳಲ್ಲಿನ ರಸ್ತೆಗುಂಡಿಗಳು 15 ದಿನಗಳೊಳಗೆ ಮುಚ್ಚುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ರಸ್ತೆ ಗುಂಡಿಗಳನ್ನು ಮುಚ್ಚುವ ಸಲುವಾಗಿಯೇ ಹದಿನೈದು ತಂಡಗಳನ್ನು ರಚಿಸಲಾಗಿದೆ. 25 ಬಿಸಿ ಡಾಂಬಾರ್ ತಯಾರಿಸೋ ಪ್ಲಾಂಟ್‌ಗಳು ಕಾರ್ಯನಿರ್ವಹಿಸುತ್ತಿದ್ದು, ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಡಾಂಬರು ಹಾಕಿದರೂ ಕಿತ್ತು ಬರಲಿದೆ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.
ಮೆಟ್ರೋ ನಿಲ್ದಾಣದಲ್ಲೂ ಮಳೆ!: ಮೆಟ್ರೋ ನಿಲ್ದಾಣಗಳಲ್ಲೂ ಮಳೆ ನೀರು ನುಗ್ಗಿತ್ತು. ಹಸಿರು ಮಾರ್ಗದ ಎತ್ತರಿಸಿದ ನಿಲ್ದಾಣಗಳಾದ ಶ್ರೀರಾಮಪುರ, ರಾಜಾಜಿನಗರ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಮಳೆ ಕಿರಿಕಿರಿ ಉಂಟುಮಾಡಿತು. ನಿಲ್ದಾಣಗಳಲ್ಲಿ ಮಳೆ ರಕ್ಷಣೆಗೆ ಯಾವುದೇ ತಡೆಗೋಡೆಗಳಿಲ್ಲ. ಹಾಗಾಗಿ, ಗಾಳಿಸಹಿತ ಮಳೆ ಅನಾಯಾಸವಾಗಿ ಬರುತ್ತಿತ್ತು. ಇದರಿಂದ ರಕ್ಷಣೆ ಪಡೆಯಲು ಪ್ರಯಾಣಿಕರು ಪರದಾಡಿದರು.
ದಟ್ಟಣೆಯಲ್ಲೇ ನಿಂತ ಆ್ಯಂಬುಲನ್ಸ್: ಸರ್ಕಾರಿ ರಜೆ ನಡುವೆಯೂ ಐಟಿಸಿ ವಿಂಡ್ಸರ್ ಮ್ಯಾನರ್ ಬಳಿ ವಿಪರೀತ ವಾಹನದಟ್ಟಣೆ ಉಂಟಾಗಿತ್ತು. ಇದರಲ್ಲಿ ಕೆಲಹೊತ್ತು ಆ್ಯಂಬುಲನ್ಸ್ ಕೂಡ ಸಿಲುಕಿತ್ತು. ಅದೇ ರೀತಿ, ಬೆಂಗಳೂರು-ಮೈಸೂರು ಹೆದ್ದಾರಿ, ನೈಸ್ ರಸ್ತೆಯಲ್ಲಿ ಸುಮಾರು 3 ಕಿ.ಮೀ.ವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ವಸಂತನಗರ, ಸ್ವಾತಂತ್ರ್ಯ ಉದ್ಯಾನ, ರಿಚ್‌ಮಂಡ್ ವೃತ್ತ, ಬ್ರಿಗೇಡ್ ರಸ್ತೆ, ಮಹಾತ್ಮಗಾಂಧಿ ರಸ್ತೆ, ಕಲಾಸಿಪಾಳ್ಯ, ಶಿವಾಜಿನಗರ, ಬನ್ನೇರುಘಟ್ಟ ರಸ್ತೆ, ಹೊಸೂರು ರಸ್ತೆ, ಶಾಂತಿನಗರ, ವಿಜಯನಗರ, ಕೆ.ಆರ್. ರಸ್ತೆ, ಆಡುಗೋಡಿ, ಕೋರಮಂಗಲ ಮೊದಲಾದೆಡೆ ವಾಹನದಟ್ಟಣೆ ತುಸು ಹೆಚ್ಚಿತ್ತು.
ದಶಕದೀಚೆಗಿನ ಭಾರೀ ಮಳೆ: ಅಕ್ಟೋಬರ್‌ನಲ್ಲಿ ಒಂದೇ ದಿನದಲ್ಲಿ ಸುರಿದ ದಶಕದ ದಾಖಲೆ ಮಳೆಗೆ ಗುರುವಾರ ಬೆಂಗಳೂರು ಸಾಕ್ಷಿಯಾಯಿತು. ರಾತ್ರಿ 8.30ರವರೆಗೆ ನಗರದಲ್ಲಿ 65.2 ಮಿ.ಮೀ. ಮಳೆಯಾಗಿದೆ. 2007ರಿಂದ ಈಚೆಗೆ ಈ ತಿಂಗಳಲ್ಲಿ ಸುರಿದ ಅತ್ಯಧಿಕ ಮಳೆ ಇದಾಗಿದೆ. 1997ರ ಅಕ್ಟೋಬರ್ 1ರಂದು ನಗರದಲ್ಲಿ 178.9 ಮಿ.ಮೀ. ಮಳೆಯಾಗಿತ್ತು. ಇದು ಈವರೆಗಿನ ಸಾರ್ವಕಾಲಿಕ ದಾಖಲೆಯಾಗಿದೆ.
ಇನ್ನು ಇಡೀ ತಿಂಗಳ ವಾಡಿಕೆ ಮಳೆ 170.6 ಮಿ.ಮೀ. ಈ ಪೈಕಿ ಕಳೆದ ಐದು ದಿನಗಳಲ್ಲೇ ಶೇ. 77ರಷ್ಟು ಅಂದರೆ 130.2 ಮಿ.ಮೀ. ಮಳೆ ಬಿದ್ದಿದೆ. ಇನ್ನೂ 25 ದಿನಗಳು ಬಾಕಿ ಇದ್ದು, ಮುಂದಿನ ಎರಡು ದಿನಗಳು ವ್ಯಾಪಕ ಮಳೆಯಾಗುವ ಮುನ್ಸೂಚನೆಯೂ ಇದೆ. ಈ ಹಿನ್ನೆಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಅಕ್ಟೋಬರ್‌ನಲ್ಲಿ ಕಳೆದ 10 ವರ್ಷಗಳಲ್ಲಿ ಅಧಿಕ ಮಳೆ ಸುರಿದ ದಿನಗಳ ವಿವರ ಹೀಗಿದೆ.
ಹತ್ತು ವರ್ಷಗಳ ಅಕ್ಟೋಬರ್ ಮಳೆವರ್ಷ (ದಿನಾಂಕ) ಮಳೆ (ಮಿ.ಮೀ)
-2007 (21) 50.7
-2008 (7) 41.4
-2009 (14) 10.0
-2010 (15) 34.9
-2011 (11) 38.4
-2012 (7) 34.2
-2013 (28) 26.8
-2014 (9) 63.1
-2015 (5) 10.9
-2016 (31) 33.5
-2017 (5) 65.2 (ರಾತ್ರಿ 8.30ರವರೆಗೆ) ಅರಬ್ಬೀ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ಮೇಲ್ಮೆ„ಸುಳಿಗಾಳಿ ಹಾಗೂ ಈ ಮಧ್ಯೆ ಕಡಿಮೆ ಒತ್ತಡದ ತಗ್ಗು (ಟ್ರಫ್) ಉಂಟಾಗಿರುವುದರಿಂದ ನಗರದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಇದು ಶುಕ್ರವಾರ ಕೂಡ ಮುಂದುವರಿಯುವ ಸಾಧ್ಯತೆ ಇದೆ.
-ಎಸ್.ಎಂ. ಮೇತ್ರಿ, ನಿರ್ದೇಶಕರು, ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ