Advertisement

ಅಕ್ರಮ ಮರಳು ದಂಧೆಗೆ ಬಿದ್ದಿಲ್ಲ ಪೂರ್ಣ ಕಡಿವಾಣ

12:30 AM Mar 07, 2019 | Team Udayavani |

ಕುಂದಾಪುರ: ಮರಳುಗಾರಿಕೆ ನಡೆಸಲು ಕುಂದಾಪುರ ತಾಲೂಕಿನಲ್ಲಿ ಯಾವುದೇ ಮರಳು ಅಡ್ಡೆ ಗುರುತಿಸಿಲ್ಲ. ಪರಿಣಾಮ ತಾಲೂಕಿನಲ್ಲಿ ಕಳೆದ 1 ವರ್ಷದಿಂದ ಮರಳಿನ ಕೊರತೆಯಿದ್ದು ವಿವಿಧೆಡೆ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. 

Advertisement

ಸೌಪರ್ಣಿಕಾ ನದಿ, ವಾರಾಹಿ ಸಹಿತ ವಿವಿಧ ನದಿ, ಹೊಳೆಗಳಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಮೊಳಹಳ್ಳಿ, ಕಂಡೂÉರು, ತ್ರಾಸಿಯ ಕಳವಿನಬಾಗಿಲು, ಹಡವು ಪಡುಕೋಣೆ, ಸಿದ್ದಾಪುರ, ಬೈಂದೂರಿನ ಬಡಾಕೆರೆ ಭಾಗದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಮೊವಾಡಿ, ಆನಗೋಡು, ಸಣ್ಣಕುಂಬ್ರಿ, ಮೆಕ್ಕೆಯಿಂದ ತ್ರಾಸಿ ಮೂಲಕ ಲಾರಿಗಳಲ್ಲಿ ಮರಳು ಸಾಗಿಸಲಾಗುತ್ತಿದೆ. ಅಕ್ರಮ ಮರಳುಗಾರಿಕೆ ನಿಷೇಧದೊಂದಿಗೆ ಸಕ್ರಮ ಮರಳುಗಾರಿಕೆಗೆ ಅವಕಾಶ ನೀಡಬೇಕೆಂಬ ಬೇಡಿಕೆ ಕೇಳಿಬರುತ್ತಿದೆ.

ರಾತ್ರಿ ಅಕ್ರಮ
ರಾತ್ರಿ 10 ಗಂಟೆಯಿಂದ ಮುಂಜಾವಿನ 5 ಗಂಟೆವರೆಗೆ ಮರಳುಗಾರಿಕೆ, ಸಾಗಾಟ ಇತ್ಯಾದಿ ನಡೆಯುತ್ತದೆ. ಇದಕ್ಕೆ ರಾಜಕೀಯ ವ್ಯಕ್ತಿಗಳ ಕೃಪಾಕಟಾಕ್ಷ ಇದೆ. ಆದ್ದರಿಂದ ಪೊಲೀಸರು ಹಾಗೂ ಇತರ ಇಲಾಖೆಗಳ ಅಧಿಕಾರಿಗಳ ಕೈ ಕಟ್ಟಿಹಾಕಿದಂತಾಗಿದೆ. ಅಕ್ರಮ ಸಾಗಾಟದ ಮರಳಿಗೆ ಲೋಡಿಗೆ 22 ಸಾವಿರ ರೂ.ವರೆಗೂ ಬಿಕರಿಯಾಗುತ್ತದೆ.
 
ಮಾಹಿತಿ, ದಾಳಿ
ತ್ರಾಸಿಯ ಅಕ್ರಮ ಮರಳುದಂಧೆ ಕುರಿತು ಸ್ಥಳೀಯರು ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾಗ ಸ್ಥಳಕ್ಕೆ ಬಂದು ಪರಿಶೀಲಿಸಿ ಹೋಗಿದ್ದರು. ಆದರೆ ಹಗಲು ಹೊತ್ತಿನಲ್ಲಿ ಯಾವುದೇ ಕುರುಹು ಇಲ್ಲದಂತೆ, ರಾತ್ರಿ ವೇಳೆ ಕಾರ್ಯಾಚರಣೆ ನಡೆಸುವ ಕಾರಣ ಅಧಿಕಾರಿಗಳು ಹಗಲು ಬಂದರೆ ಬರಿಕೈಯಲ್ಲಿ ಹೋಗಬೇಕಾಗುತ್ತದೆ. ಜಿಲ್ಲೆಗೆ ನೂತನವಾಗಿ ಬಂದ ಎಸ್‌ಪಿಯವರು ಮರಳು ಅಡ್ಡೆಗೆ ಕಡಿವಾಣ ಹಾಕಲು ನಿರ್ಧರಿಸಿದಂತಿದೆ. ತಾಲೂಕಿನ ಮೊಳಹಳ್ಳಿ, ಬೈಂದೂರು ತಾಲೂಕಿನ ಬಡಾಕೆರೆ ಗ್ರಾಮದ ವಕ್ಕೇರಿ ಮೊದಲಾದೆಡೆ ದಾಳಿ ನಡೆಸಿದ್ದಾರೆ.

ಕಾರ್ಮಿಕರು
ಎಲ್ಲೆಡೆ ಮರಳುಗಾರಿಕೆಗೆ ಸ್ಥಳೀಯರ ಬದಲು ಬಿಹಾರ ಮೂಲದ ಕಾರ್ಮಿಕರನ್ನು ಬಳಸಲಾಗುತ್ತದೆ. ಇವರಿಗೆ ಕಡಿಮೆ ವೇತನ ಸಾಕಾಗುತ್ತದೆ, ರಾತ್ರಿ ಕಾರ್ಯಾಚರಣೆಗೆ ನೆರವಾಗುತ್ತಾರೆ, ಮಾಹಿತಿ ಸೋರಿಕೆ ಮಾಡುವುದಿಲ್ಲ ಎನ್ನುವ ವಿಶ್ವಾಸ ದಂಧೆ
ಕೋರರದ್ದು. ಈ ಹಿಂದೆ ಕಂಡೂÉರಿನಲ್ಲಿ ಉಡುಪಿ ಜಿಲ್ಲಾಧಿಕಾರಿ ಹಾಗೂ ಕುಂದಾಪುರ ಎಸಿಯವರು ಮರಳು ಅಡ್ಡೆಗೆ ದಾಳಿ ನಡೆಸಿದಾಗ ಅಧಿಕಾರಿಗಳ ಮೇಲೆ ಹಲ್ಲೆಗೈದದ್ದು ಇಂಥದ್ದೇ ಬಿಹಾರ ಕಾರ್ಮಿಕರು. ಬಹುತೇಕ ಕಡೆ ಸಾಂಪ್ರದಾಯಿಕ ಮರಳುಗಾರಿಕೆ ಮಾಡಲಾಗುತ್ತಿದೆ. ಸಾಗಾಟ ವಾಹನದ ಸದ್ದು ಮಾತ್ರ ಜನರಿಗೆ ಕೇಳುತ್ತದೆ. ರಾತ್ರಿವೇಳೆ ಚೆಕ್‌ಪಾಯಿಂಟ್‌ಗಳನ್ನು ನಿರ್ಮಿಸಿಕೊಂಡಿದ್ದು ದಾಳಿ ನಡೆಸಲು ಬರುವ ಅಧಿಕಾರಿಗಳ ಚಲನವಲನದ ಮಾಹಿತಿ ಕೂಡಲೇ ರವಾನಿಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಹಾಗಾಗಿ ಸ್ಥಳೀಯರೂ ಓಡಾಡಲು ಅಂಜುವ ವಾತಾವರಣ ಇದೆ.
 
ನದಿಯಲ್ಲಿ  ಆಳಟನ್‌ಗಟ್ಟಲೆ ಮರಳು ತೆಗೆದ ಪರಿಣಾಮ ನದಿಯಲ್ಲಿ ಆಳ ಉಂಟಾಗಿದೆ. ಇದರಿಂದಾಗಿ ಸ್ಥಳೀಯರಿಗೆ ನದಿಯಿಂದ ಮರುವಾಯಿ (ಮಳಿ) ಸಂಗ್ರಹ ಕೂಡ ಸಾಧ್ಯವಿಲ್ಲ. ಹಿಂದೆ ನೂರಾರು ಮಂದಿ ಮಹಿಳೆಯರು ಮರುವಾಯಿ ಸಂಗ್ರಹಿಸಿ ಮಾರಾಟ ಮಾಡಿ ಜೀವನೋಪಾಯ ನಡೆಸುತ್ತಿದ್ದರು. ಈಗ ಅದಕ್ಕೂ ಕಲ್ಲು ಬಿದ್ದಿದೆ. 
 
ಕಾನೂನಾತ್ಮಕವಾಗಿ ತೆಗೆಯಲು ಬಿಡಲಿ
ಮರಳು ಇಲ್ಲದೇ ಕಟ್ಟಡ, ಮನೆ ಸೇರಿದಂತೆ ಸರಕಾರಿ ಯೋಜನೆಗಳು ನನೆಗುದಿಗೆ ಬಿದ್ದಿವೆ. ಕಾರ್ಮಿಕರಿಗೂ ಕೆಲಸ ಇಲ್ಲ.  ಸಮುದ್ರ ತಡೆಗೋಡೆ ನಿರ್ಮಾಣ ಸಂದರ್ಭ ಸಂಗ್ರಹಿಸಿದ ಮರಳನ್ನು ಕೋಡಿಯಲ್ಲಿ ಸಂಗ್ರಹಿಸಲಾಗಿದ್ದು ಅದನ್ನು ಸರಕಾರಿ ದರದಲ್ಲಿ ಕೊಡುವಂತೆ ಈ ಹಿಂದೆ ಆದೇಶಿಸಲಾಗಿತ್ತು. ಮರಳುಗಾರಿಕೆಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಈಗ ಕೊಡಲಾಗುತ್ತಿಲ್ಲ. ಆದರೆ ಕುಂದಾಪುರಕ್ಕೆ ಅಧಿಕೃತ ಮರಳುದಿಬ್ಬ ಇಲ್ಲದ ಕಾರಣ ಸಮಸ್ಯೆ ಮುಂದುವರಿದಿದೆ. 

ಮರಳು ದೊರೆಯುವಂತಾಗಲು ಪ್ರಯತ್ನಿಸುತ್ತೇವೆ
ಈ ಭಾಗದಲ್ಲಿ ಸಾಕಷ್ಟು ಮರಳಿದೆ. ಆದರೆ ಕಾನೂನು ರೀತ್ಯಾ ತೆಗೆಯಲು ಪ್ರಕ್ರಿಯೆಗಳು ನಡೆಯಬೇಕಿದೆ. ಈ ಕುರಿತು ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು. ಜನರಿಗೆ ಮರಳು ದೊರೆಯದಿದ್ದರೆ ಎಂಸ್ಯಾಂಡ್‌ ಬಳಸಬಹುದು. ಆದರೆ ಇಲ್ಲಿ ಎಂಸ್ಯಾಂಡ್‌ ಘಟಕ ಇಲ್ಲದಿದ್ದ ಕಾರಣ ಪ್ರಾಕೃತಿಕ ಮರಳು ಅನಿವಾರ್ಯ. ಸಾಮಾನ್ಯ ಜನರಿಗೆ ಮರಳು ದೊರೆಯುವಂತೆ ಮಾಡಲಾಗುವುದು. ಅಕ್ರಮಗಳಿಗೆ ಕಡಿವಾಣ ಹಾಕಲಾಗುವುದು. ಈ ಭಾಗಕ್ಕೆ ಮರಳು ದೊರೆಯುವಂತೆ ಮಾಡಲು ಅಗತ್ಯವುಳ್ಳ ಶಿಫಾರಸು ಮಾಡಲಾಗುವುದು.
– ಮಧುಕೇಶ್ವರ್‌
ಸಹಾಯಕ ಕಮಿಷನರ್‌, ಕುಂದಾಪುರ

Advertisement

ಕಡಿವಾಣ ಹಾಕಲಾಗುತ್ತಿದೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ಬಂದಾಗ ದಾಳಿ ನಡೆಸಿದ್ದೇವೆ. ಇದು ಮುಂದುವರಿಯುತ್ತದೆ. ಅಕ್ರಮಗಳಿಗೆ ಕಡಿವಾಣ ಹಾಕಲು ಇಲಾಖೆ ಬದ್ಧವಿದೆ. 
– ಬಿ.ಪಿ. ದಿನೇಶ್‌ ಕುಮಾರ್‌
ಡಿವೈಎಸ್‌ಪಿ, ಕುಂದಾಪುರ ಉಪವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next