ಮದ್ದೂರು: ತಾಲೂಕು ಬೆಸಗರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಗ್ರಾಮಗಳ ನಾಲ್ಕು ದೇಗುಲಗಳ ವಿಗ್ರಹ ವಿರೂಪಗೊಳಿಸಿ, ಕಂಚಿನ ಪ್ರತಿಮೆ ಹೊತ್ತೂಯ್ದಿರುವ ಘಟನೆ ಮಂಗಳವಾರ ತಡರಾತ್ರಿ ಸಂಭವಿಸಿದೆ.
ಚುಂಚೇಗೌಡನದೊಡ್ಡಿ ಪಟ್ಟಲದಾಂಬ, ಪಣ್ಣೇ ದೊಡ್ಡಿ ವೀರಾಂಜನೇಯ, ಹೊಂಬಾಳೆಗೌಡನ ದೊಡ್ಡಿ ಶನಿ ಮಹಾತ್ಮ ಮತ್ತು ಬೆಳತೂರು ಗ್ರಾಮದ ಮುನೇಶ್ವರ ದೇವರ ವಿಗ್ರಹಗಳು ಭಗ್ನಗೊಂಡಿವೆ. ಇದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಒಂದೇ ರಾತ್ರಿ ನಡೆದ ಈ ನಾಲ್ಕು ಪ್ರಕರಣಗಳು ತಾಲೂಕಿನಲ್ಲಿ ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಗರ್ಭಗುಡಿ ಪ್ರವೇಶಿಸಿ ದೇವರ ವಿಗ್ರಹ ವಿರೂಪಗೊಳಿಸಿ, ಕೆಲವು ಹೊರತಂದು ಅಕ್ಕಪಕ್ಕದ ಜಮೀನಿನಲ್ಲಿ ವಿರೂಪ ಗೊಳಿಸಿ ಎಸೆದಿರುವ ಜೊತೆಗೆ ಪಣ್ಣೇದೊಡ್ಡಿ ಗ್ರಾಮದ ಆಂಜನೇಯಸ್ವಾಮಿ ದೇವರ ಕಂಚಿನ ಮೂರ್ತಿ ಯನ್ನು ಕಳವು ಮಾಡಿದ್ದಾರೆ. ಚುಂಚೇಗೌಡನದೊಡ್ಡಿ ಪಟ್ಟಲದಾಂಬ ದೇವಿ ಮೂಲ ವಿಗ್ರಹವನ್ನು ಒಡೆದು ಹಾಕಿ ಮದ್ದೂರು ಬೆಸಗರಹಳ್ಳಿ ರಸ್ತೆ ಬದಿಯ ಜಮೀನಿನಲ್ಲಿ ಎಸೆಯಲಾಗಿದೆ.
ಹೊಂಬಾಳೇಗೌಡನದೊಡ್ಡಿ ಶನಿಮಹಾತ್ಮ, ಬೆಳತೂರು ಮುನೇಶ್ವರ ದೇಗುಲಗಳ ಗರ್ಭಗುಡಿ ಯಲ್ಲಿದ್ದ ಮೂಲ ವಿಗ್ರಹಗಳನ್ನು ವಿರೂಪಗೊಳಿಸಿ ಹೊರತಂದು ಬಿಸಾಡಿರುವುದು ಹಲವು ಅನುಮಾ ನಗಳಿಗೆ ಎಡೆಮಾಡಿಕೊಟ್ಟಿದೆ. ಇದರು ಸ್ಥಳೀಯರು ಹಾಗೂ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಬುಧವಾರ ಬೆಳಗ್ಗೆ ದೇವರ ವಿಗ್ರಹ ವಿರೂಪ ಗೊಳಿಸಿರುವ ಸುದ್ದಿ ಎಲ್ಲೆಡೆ ಹರಡಿ ಸ್ಥಳಕ್ಕೆ ಭಕ್ತರು ಆಗಮಿಸಿ ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿದರು.
ಎಸ್ಪಿ ಭೇಟಿ: ವಿಷಯ ತಿಳಿಯುತ್ತಿದ್ದಂತೆ ನಾಲ್ಕೂ ದೇಗುಲಗಳಿಗೆ ಎಸ್ಪಿ ಶಿವಪ್ರಕಾಶ್ ದೇವರಾಜ್, ಡಿವೈಎಸ್‌ಪಿ ಶೈಲೇಂದ್ರ, ವೃತ್ತ ನಿರೀಕ್ಷಕ ಮಹೇಶ್ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದರು. ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಘಟನಾ ಸ್ಥಳಕ್ಕೆ ಕರೆಸಿ ವಿವರ ಪಡೆದರು. ಘಟನೆ ಸಂಬಂಧ ಮದ್ದೂರು ವೃತ್ತ ನಿರೀಕ್ಷಕ ಮಹೇಶ್ ಮಾರ್ಗದರ್ಶನದಲ್ಲಿ ಕೆಸ್ತೂರು ಠಾಣೆ ಪಿಎಸ್‌ಐ ಸಂತೋಷ್ ನೇತೃತ್ವದ ಪೊಲೀಸರ ತನಿಖಾ ತಂಡ ರಚಿಸಿರುವುದಾಗಿ ಡಿವೈಎಸ್‌ಪಿ ಶೈಲೇಂದ್ರ ತಿಳಿಸಿದರು. ಸದ್ಯಕ್ಕೆ ಬೆಸಗರಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಬಿಗುವಿನ ವಾತಾವರಣ ಮೂಡಿದೆ. ಪರಿಸ್ಥಿತಿ ಗಂಭೀರತೆ ಅರಿತ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಒಂದು ಜಿಲ್ಲಾ ಶಸಸ್ತ್ರ ಮೀಸಲುಪಡೆ ಹಾಗೂ ಸ್ಥಳೀಯ ಪೊಲೀಸ್ ಸಿಬ್ಬಂದಿಯ ಬಂದೋಬಸ್ತ್ ಕೈಗೊಂಡಿದ್ದಾರೆ.
ರಸ್ತೆ ತಡೆ: ಬೆಸಗರಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಕೆರೆಮೇಗಲದೊಡ್ಡಿ ಶೇಖರ್ ನೇತೃತ್ವದಲ್ಲಿ ನೂರಾರು ಸಂಖ್ಯೆಯ ಸ್ಥಳೀಯರು ಬೆಸಗರಹಳ್ಳಿ ಬಸ್ ನಿಲ್ದಾಣ ದಲ್ಲಿ ಪ್ರತಿಭಟನೆ ನಡೆಸಿ ಕೆಲಕಾಲ ಮದ್ದೂರು-ಮಂಡ್ಯ ಮುಖ್ಯರಸ್ತೆ ತಡೆ ನಡೆಸಿದರು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ದುಷ್ಕರ್ಮಿಗಳನ್ನು ಬಂಧಿಸುವಂತೆ ಒತ್ತಾಯಿಸಿದರು.