ಶಹಾಬಾದ: ತನಗೆ ತೋಚಿದ್ದನ್ನು ತಾನು ಕಂಡದ್ದನ್ನು ಅಂದಿನ ಸಮಾಜದ ಅಂಕು ಡೊಂಕುಗಳನ್ನು ತನ್ನ ನೇರ ನಡೆನುಡಿಗಳಿಗೆ ವಚನ ರೂಪ ನೀಡಿದ. ಅದರಂತೆ ಬದುಕಿ ಇತರರಿಗೆ ಮಾರ್ಗದರ್ಶನ ತೋರಿದ ನಿಜಶರಣ ಅಂಬಿಗರ ಚೌಡಯ್ಯ ಆದರ್ಶ ಮಾನವ ಎಂದು ತೊನಸನಹಳ್ಳಿ (ಎಸ್) ಅಲ್ಲಮಪ್ರಭು ಸಂಸ್ಥಾನ ಪೀಠದ ಮಲ್ಲಣಪ್ಪ ಮಹಾಸ್ವಾಮೀಜಿ ಹೇಳಿದರು.
ಮುತ್ತಗಾ ಗ್ರಾಮದಲ್ಲಿ ಕೋಲಿ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಅಂಬಿಗರ ಚೌಡಯ್ಯನವರು ಹನ್ನೆರಡನೇ ಶತಮಾನದ ಬಸವಣ್ಣನವರ ಸಮಕಾಲೀನರು.
ಸಾವಿರಾರು ವರ್ಷಗಳಿಂದ ಧರ್ಮ-ದೇವರುಗಳ ಬಗೆಗೆ ಜನ ಸಮೂಹದಲ್ಲಿದ್ದ ಮೂಢನಂಬಿಕೆಗಳನ್ನೆಲ್ಲ ಚೌಡಯ್ಯನವರು ಹೊಡೆದೋಡಿಸುತ್ತಲೇ ವಿಚಾರಪರವಾದ, ವಾಸ್ತವವಾದ ಅಂಶಗಳನ್ನು ಜನಮನದಲ್ಲಿ ಮೂಡಿಸಿದರು ಎಂದರು. ಇಂದಿಗೂ ಅನೇಕ ಜನರಲ್ಲಿ ಮೂಢನಂಬಿಕೆ, ಅಜ್ಞಾನ ತುಂಬಿ ಸಮಾಜ ಹಿಂದುಳಿಯಲು ಕಾರಣವಾಗಿದೆ.
ಇದರಿಂದ ಹೊರಬೇಕಾದರೆ ನಮ್ಮ ಮಕ್ಕಳು ಹೆಚ್ಚು ಶಿಕ್ಷಣವಂತರಾಗಬೇಕು. ಅಲ್ಲದೇ ಬಸವಾದಿ ಶರಣರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಮಳಖೇಡ ಹಜರತ್ ಸೈಯದ್ ಶಹಾ ಮುಸ್ತಫಾಖಾದ್ರಿ ಮಾತನಾಡಿ, ಸ್ವಂತಿಕೆಯಿಂದ ಯೋಚಿಸಿ ಸ್ವಾಭಿಮಾನದ ಬದುಕು ಬದುಕಬೇಕೆಂಬ ಅಂಶವನ್ನು ಅಂಬಿಗರ ಚೌಡಯ್ಯ ತಮ್ಮ ವಚನಗಳಲ್ಲಿ ತಿಳಿಸಿದ್ದಾರೆ ಎಂದರು.
ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ ಮಾತನಾಡಿ, ಚೌಡಯ್ಯನಲ್ಲಿ ಸಾಮಾಜಿಕ ಕಳಕಳಿ ಅಗಾಧವಾಗಿತ್ತು. ಹಾಗೆಂದೆ ಸಮಾಜದಲ್ಲಿನ ಅಸಂಪ್ರದಾಯಿಕ ಆಚರಣೆಗಳನ್ನು ವಚನದಲ್ಲಿ ಬಯಲಿಗೆಳೆದಿದ್ದಾನೆ. ಮೇಲ್ವರ್ಗದವರ ದಬ್ಟಾಳಿಕೆ, ಪುರೋಹಿತಶಾಹಿಗಳ ಶೋಷಣೆ, ಧಾರ್ಮಿಕ ಹೆಸರಿನಲ್ಲಿ ನಡೆಯುವ ಮೋಸ, ವಂಚನೆ, ಲಿಂಗಭೇದ, ವರ್ಗಭೇದಗಳಲ್ಲಿತಾರತಮ್ಯ ಇವೇ ಮೊದಲಾದ ಅಂಧಾನುಕರಣೆ ವಿರುದ್ಧ ಹೋರಾಡಿದ್ದಾರೆ ಎಂದು ಹೇಳಿದರು.
ಪೇಠಶಿರೂರನ ಸಿದ್ದಲಿಂಗ ಸ್ವಾಮೀಜಿ, ಯಾದಗಿರಿ ಕೋಲಿ ಸಮಾಜದ ಅಧ್ಯಕ್ಷ ಉಮೇಶ ಮುದ್ನಾಳ, ಮಾಜಿ ಜಿಪಂ ಸದಸ್ಯೆ ಶೋಭಾ ಬಾಣಿ, ತಾಪಂ ಸದಸ್ಯೆರಾದ ಸಂಗೀತಾ ದೇವೆಂದ್ರ ಕಾರೊಳ್ಳಿ, ಶ್ರೀದೇವಿ ಪ್ರಕಾಶ ಮಸಬೂ, ವಿಜಯಲ ಸುರೇಶ ಚವ್ಹಾಣ, ನಗರ ಕೋಲಿ ಸಮಾಜದ ಅಧ್ಯಕ್ಷ ನಿಂಗಪ್ಪ ಹುಳಗೋಳಕರ್, ಶಿವುಕುಮಾರ ಯಾಗಾಪುರ, ಶಿವಕುಮಾರ ಸುಣಗಾರ, ಭಂಕೂರ ಗ್ರಾಪಂ ಅಧ್ಯಕ್ಷೆ ವಿಜಯ ವಗ್ಗನ್, ಮೃತ್ಯುಂಜಯ ಹಿರೇಮಠ, ಸಂಪೂರ್ಣಬಾಯಿ ದತ್ತು ಹಾಗೂ ಇತರರು ಇದ್ದರು.