Advertisement

ಸಹಕಾರ ತತ್ವದಲ್ಲಿ ಗ್ರಾಮಾಭಿವೃದ್ಧಿ ಕಲ್ಪನೆ

09:29 PM Jan 21, 2020 | Lakshmi GovindaRaj |

ತಿಪಟೂರು: ಮಹಾತ್ಮಾ ಗಾಂಧೀಜಿಯವರ ಗ್ರಾಮಾಭಿವೃದ್ಧಿ ಕಲ್ಪನೆ ಸಹಕಾರ ತತ್ವದಲ್ಲಿ ಅಡಗಿದೆ. ಸಹಕಾರ ಸಂಘಗಗಳು ಸರ್ಕಾರಗಳು ಮಾಡಲು ಸಾಧ್ಯವಾಗದ ಎಷ್ಟೋ ಜನೋಪಯೋಗಿ ಕಾರ್ಯಗಳನ್ನು ಮಾಡುತ್ತಿದ್ದು, ಅವು ಸಂಘಟನೆಯ ಶಕ್ತಿ ಕೇಂದ್ರಗಳಾಗಿವೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ, ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು. ತಾಲೂಕಿನ ದಸರೀಘಟ್ಟದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಸಭಾಭವನ ಮತ್ತು ಹೆಚ್ಚುವರಿ ಗೋದಾಮಿನ ಆರಂಭೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

Advertisement

ಗ್ರಾಮೀಣರು ಸ್ವತಂತ್ರ ಜೀವನ ನಡೆಸುವಂತಾಗಲಿ: ಗ್ರಾಮೀಣರು ಆರ್ಥಿಕವಾಗಿ ಶಕ್ತಿವಂತರಾಗಬೇಕು. ಇನ್ನೊಬ್ಬರ ಅಡಿಯಾಳಾಗಿರದೇ ಸ್ವತಂತ್ರ ಜೀವನ ಸಾಗಿಸಬೇಕು. ಗ್ರಾಮೀಣ ಭಾಗದಲ್ಲಿ ಬೆಳೆದ ಉತ್ಪನ್ನಗಳನ್ನು ಸಹಕಾರ ಸಂಘಗಳಿಂದ ಮಾರಾಟ ಮಾಡಲು ಇಂತಹ ಸಹಕಾರಗಳು ಅನುಕೂಲವಾಗಿವೆ. ರಾಜ್ಯದಲ್ಲಿಡೇರಿ ಮುಖಾಂತರ ಹಾಲಿನ ಉತ್ಪನ್ನಗಳನ್ನು ಪಡೆಯಲಾಗುತ್ತಿದೆ. ಅದೇ ರೀತಿ ರೈತರು ಬೆಳೆದ ಹಣ್ಣು, ತರಕಾರಿಗಳಿಗೂ ಉತ್ತಮ ಮಾರುಕಟ್ಟೆ ದೊರಕಿದರೆ ರೈತರ ಬದುಕು ಹಸನಾಗಲಿದೆ.

ಸಹಕಾರ ಸಂಘಗಳು ರೈತರ ಜೀವನಾಡಿ ಇದ್ದಂತೆ. ರೈತರು ಇಂತಹ ಸಹಕಾರಗಳ ಲಾಭ ಪಡೆಯಬೇಕು. ಸಂಘಗಳು ಬಲಿಷ್ಠವಾಗಿದ್ದರೆ ನಮ್ಮ ದೈನಂದಿನ ಬದುಕಿಗೆ ಆಸರೆಯಾಗಲಿವೆ. ಪಡಿತರ ವಿತರಣೆ, ಕೀಟನಾಶಕ, ಗೊಬ್ಬರ ವಿತರಣೆ ಪ್ರತಿಯೊಂದು ಸಹಕಾರಿ ಬಗ್ಗೆ ನಂಬಿಕೆ ಇಟ್ಟುಕೊಂಡು ಸರ್ಕಾರ ಮಾರಾಟ ಮಾಡಲು ನೀಡುತ್ತಿದೆ. ಇಂತಹ ಸಹಕಾರಿಗಳು ಪ್ರತಿ ಗ್ರಾಮದಲ್ಲೂ ಅಭಿವೃದ್ಧಿಯಾಗಬೇಕು ಎಂದು ಹೇಳಿದರು.

ಸಹಕಾರ ಸಂಘ ಆರಂಭಕ್ಕೆ ಮೈಸೂರಿನ ಕೊಡುಗೆ ಹೆಚ್ಚು: ದಸರೀಘಟ್ಟ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಸಹಕಾರ ಸಂಘ ಅಭಿವೃದ್ಧಿಗೊಳ್ಳಲು ಅನೇಕ ಮಹನೀಯರು ಕಾರಣಕರ್ತರಾಗಿದ್ದಾರೆ. ಹಳೇ ಬೇರು ಹೊಸ ಚಿಗುರು ಎಂಬಂತೆ ಈ ಸಹಕಾರ ಕ್ಷೇತ್ರ ಈಗ ಹೆಮ್ಮರವಾಗಿ ಬೆಳೆದಿದೆ. ರಾಜ್ಯದಲ್ಲಿ ಸಹಕಾರ ಸಂಘ ಆರಂಭವಾಗಲು ಮೈಸೂರಿನ ಜಯಚಾಮರಾಜೇಂದ್ರ ಒಡೆಯರು ಮುಖ್ಯ. ಸಹಕಾರ ಸಂಘ ಬ್ಯಾಂಕುಗಳ ಸ್ಥಾಪನೆಗೆ ಮೈಸೂರು ಒಡೆಯರ ಕೊಡುಗೆ ಅಪಾರವಾಗಿದೆ. ದಸರೀಘಟ್ಟದಂತಹ ಪುಟ್ಟ ಗ್ರಾಮದಲ್ಲಿ ಸಹಕಾರಿ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.

ಶಾಸಕ ಬಿ.ಸಿ.ನಾಗೇಶ್‌ ಮಾತನಾಡಿ, ಸಹಕಾರ ಕ್ಷೇತ್ರ ಈ ದೇಶದಲ್ಲಿ ಭದ್ರವಾಗಿದೆ. ರಾಜಕೀಯ ಪ್ರವೇಶದಿಂದ ದೂರವಿದ್ದರೆ ಮತ್ತಷ್ಟು ಅಭಿವೃದ್ಧಿ ಹೊಂದಬಹುದು. ಸಂಘಗಳಲ್ಲಿ ಸದಸ್ಯರು, ಆಡಳಿತ ಮಂಡಳಿ ಪ್ರಾಮಾಣಿಕವಾಗಿ ವ್ಯವಹಾರ ನಡೆಸಿದರೆ ಲಾಭಾಂಶ ಹೆಚ್ಚಲಿದೆ. ಮುಂದಿನ ದಿನಗಳಲ್ಲಿ ಸಹಕಾರ ಕ್ಷೇತ್ರ ಮತ್ತಷ್ಟು ಬಲಿಷ್ಠಗೊಳ್ಳಲಿ ಎಂದು ಆಶಯ ವ್ಯಕ್ತಪಡಿಸಿದರು.

Advertisement

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಅಧ್ಯಕ್ಷ ಡಿ.ಟಿ. ಕೃಷ್ಣೇಗೌಡ ಮಾತನಾಡಿ, ಸಹಕಾರ ಸಂಘ, ಉತ್ತಮ ಲಾಭಾಂಶ ಹೊಂದಿದ್ದು, 325 ರೈತ ಕುಟುಂಬಗಳು, ಸಂಘದ ಲಾಭ ಪಡೆಯುತ್ತಿವೆ. ಕಾಲಕಾಲಕ್ಕೆ ಸಾಲ ಮರುಪಾವತಿ ಸೇರಿದಂತೆ ಮೃತ ರೈತರಿಗೆ ಸಾಲಮನ್ನಾ ಮಾಡಲಾಗಿದೆ. ಸಂಘದ ಅಭಿವೃದ್ಧಿಗೆ ಸದಸ್ಯರು, ನಿರ್ದೇಶಕರು ಆಡಳಿತ ಮಂಡಳಿ ಕಾರಣ ಎಂದು ಹೇಳಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಎಚ್‌.ಬಿ. ದಿವಾಕರ್‌, ಜಿಪಂ ಸದಸ್ಯೆ ಭಾಗ್ಯಮ್ಮ, ತಾಪಂ ಅಧ್ಯಕ್ಷ ಜಿ.ಎಸ್‌.ಶಿವಸ್ವಾಮಿ, ಗ್ರಾಪಂ ಅಧ್ಯಕ್ಷ ರಾಜಕುಮಾರ, ಡಿಸಿಸಿ ಬ್ಯಾಂಕ್‌ ಮೇಲ್ವಿಚಾರಕ ಉಮಾಶಂಕರ್‌, ಸಹಕಾರಿ ಉಪಾಧ್ಯಕ್ಷ ಅಬ್ದುಲ್‌ ರಶೀದ್‌, ನಿರ್ದೇಶಕ ದೊರೆಸ್ವಾಮಿ, ಕೃಷ್ಣಮೂರ್ತಿ, ಗಂಗಾಧರ್‌, ಗೌರಮ್ಮ, ಸರೋಜಮ್ಮ, ಮೋಹನ್‌ಕುಮಾರ್‌, ನಿಂಗಯ್ಯ, ಗೋವಿಂದಪ್ಪ, ಪುರುಷೋತ್ತಮ್‌, ಮಂಜುನಾಥ್‌, ಕುಮಾರಸ್ವಾಮಿ, ಶಿಕ್ಷಕ ದಿವಾಕರ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next