ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್ ಆತಿಥ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ಐಸಿಸಿ ಅಂಡರ್-19 ಕ್ರಿಕೆಟ್ ಪಂದ್ಯಾವಳಿಗೆ ಗುರುವಾರ ವೆಲ್ಲಿಂಗ್ಟನ್‌ನಲ್ಲಿ ಅಧಿಕೃತ ಚಾಲನೆ ಲಭಿಸಿದೆ. ನ್ಯೂಜಿಲ್ಯಾಂಡ್ ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟಿಗರ ಸಹಿತ ಪ್ರಮುಖ ಕ್ರಿಕೆಟ್ ಅಧಿಕಾರಿಗಳು ಇದಕ್ಕೆ ಸಾಕ್ಷಿಯಾದರು.
ಕಿರಿಯರ ಈ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ಇನ್ನೂ 44 ದಿನಗಳಿವೆ. 16 ತಂಡಗಳು ಪಾಲ್ಗೊಳ್ಳಲಿರುವ ಈ ಕೂಟ ನ್ಯೂಜಿಲ್ಯಾಂಡಿನ ವಿವಿಧ ಕೇಂದ್ರಗಳಲ್ಲಿ 2018ರ ಜ. 13ರಿಂದ ಫೆ. 3ರ ತನಕ ಸಾಗಲಿದೆ. ಗುರುವಾರ ವಿಶ್ವಕಪ್ ಟ್ರೋಫಿಯ ಅನಾವರಣದ ಜತೆಗೆ, ಮುಂದಿನ ದಿನಗಳಲ್ಲಿ ಈ ಟ್ರೋಫಿ ಸಂಚರಿಸುವ ಮಾರ್ಗದ ನಕ್ಷೆಯನ್ನು ಬಿಡುಗಡೆಗೊಳಿಸಲಾಯಿತು.
ನ್ಯೂಜಿಲ್ಯಾಂಡಿನ ಕ್ರೀಡಾ ಸಚಿವ ಗ್ರ್ಯಾಂಟ್ ರಾಬರ್ಟ್‌ಸನ್, ಐಸಿಸಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡೇವಿಡ್ ರಿಚರ್ಡ್‌ಸನ್, ನ್ಯೂಜಿಲ್ಯಾಂಡ್ ಕ್ರಿಕೆಟ್ ಸಿಇಒ ಡೇವಿಡ್ ವೈಟ್ ಮತ್ತು ಕೂಟದ ಬ್ರ್ಯಾಂಡ್ ಅಂಬಾಸಡರ್ ಕೋರಿ ಆ್ಯಂಡರ್ಸನ್ ಈ ಸಮಾರಂಭದಲ್ಲಿದ್ದರು. ನ್ಯೂಜಿಲ್ಯಾಂಡ್-ವೆಸ್ಟ್ ಇಂಡೀಸ್ ನಡುವೆ ಶುಕ್ರವಾರದಿಂದ ವೆಲ್ಲಿಂಗ್ಟನ್‌ನಲ್ಲಿ ಮೊದಲ ಟೆಸ್ಟ್ ಆರಂಭವಾಗಲಿದ್ದು, ಇತ್ತಂಡಗಳ ಆಟಗಾರರು ಪಾಲ್ಗೊಂಡದ್ದು ಈ ಸಮಾರಂಭದ ಕಳೆ ಹೆಚ್ಚಿಸಿತು.
“ಕಿರಿಯರ ವಿಶ್ವಕಪ್ ಕ್ರಿಕೆಟ್ ಎನ್ನುವುದು ಜಾಗತಿಕ ಕ್ರಿಕೆಟಿನ ಬಾಗಿಲು. ವೃತ್ತಿಪರ ಕ್ರಿಕೆಟಿಗರಾಗಿ ರೂಪುಗೊಳ್ಳಲು ಇಲ್ಲಿ ವಿಪುಲ ಅವಕಾಶಗಳಿವೆ. ಶಿಸ್ತು, ನಾಯಕತ್ವ, ಒತ್ತಡದಲ್ಲಿ ಆಡುವುದು, ಎಲ್ಲಕ್ಕಿಂತ ಮಿಗಿಲಾಗಿ ಯುವ ಆಟಗಾರರಲ್ಲಿ ಇದು ಕ್ರೀಡಾಸ್ಫೂರ್ತಿಯನ್ನು ತುಂಬುತ್ತದೆ. ಈ ಕೂಟವನ್ನು 3ನೇ ಸಲ ನಡೆಸಿಕೊಡಲು ಸಜ್ಜಾಗಿರುವ ನ್ಯೂಜಿಲ್ಯಾಂಡಿಗೆ ಕೃತಜ್ಞತೆಗಳು’ ಎಂದು ರಿಚರ್ಡ್‌ಸನ್ ಹೇಳಿದರು.
ಭಾರತ ಮತ್ತು ಆಸ್ಟ್ರೇಲಿಯ ಅತ್ಯಧಿಕ 3 ಸಲ ಅಂಡರ್-19 ವಿಶ್ವಕಪ್ ಗೆದ್ದ ತಂಡಗಳಾಗಿವೆ. ವೆಸ್ಟ್ ಇಂಡೀಸ್ ಹಾಲಿ ಚಾಂಪಿಯನ್. ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡ ಏಕೈಕ ತಂಡವೆಂದರೆ ಪಾಕಿಸ್ಥಾನ. ಆದು 2004 ಹಾಗೂ 2006ರಲ್ಲಿ ಚಾಂಪಿಯನ್ ಆಗಿತ್ತು.
ಕೋರಿ ವಿಶ್ವಕಪ್ ಮೆಲುಕು
“ಈ ಕೂಟದ ರಾಯಭಾರಿ ಆಗಿರುವುದು ನನ್ನ ಪಾಲಿನ ಹೆಮ್ಮ. ನಾನು ಕಿರಿಯರ 2 ವಿಶ್ವಕಪ್ ಕೂಟದಲ್ಲಿ ಆಡಿದ್ದೇನೆ. ಇಂದು ವಿಶ್ವ ಮಟ್ಟದಲ್ಲಿ ಭಾರೀ ಸುದ್ದಿಯಲ್ಲಿರುವ ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್, ಸ್ಟೀವನ್ ಸ್ಮಿತ್, ಜೋ ರೂಟ್, ಸಫìರಾಜ್ ಅಹ್ಮದ್, ದಿನೇಶ್ ಚಂಡಿಮಾಲ್ ಮೊದಲಾದವರೆಲ್ಲ ಅಂಡರ್-19 ವಿಶ್ವಕಪ್‌ನಲ್ಲಿ ಆಡಿ ಬೆಳೆದವರೆಂಬುದನ್ನು ಮರೆಯುವಂತಿಲ್ಲ’ ಎಂದು ಕೋರಿ ಆ್ಯಂಡರ್ಸನ್ ಹೇಳಿದರು.
ಡಿ. ಒಂದರಿಂದ ವಿಶ್ವಕಪ್ ಟ್ರೋಫಿ ನ್ಯೂಜಿಲ್ಯಾಂಡಿನ ಪ್ರಮುಖ ಶಾಲೆ ಹಾಗೂ ಕ್ರೀಡಾ ಕ್ಲಬ್‌ಗಳಿಗೆ ಸಂಚಾರ ಆರಂಭಿಸಲಿದ್ದು, ಡಿ. 13ರಂದು ಲಿಂಕನ್ ತಲುಪಲಿದೆ.