ಉಡುಪಿಯ ರಾಜಾಂಗಣದಲ್ಲಿ ಪ್ರದರ್ಶನವಾದ “ಹೈದರಾಬಾದ್ ವಿಜಯ’ ತಾಳಮದ್ದಳೆಯು ಹಲವು ಕಾರಣಗಳಿಂದಾಗಿ ಮನಸ್ಸಿಗೆ ಹಿತವಾಗಿದೆ. ಹಿರಿಯ ಪತ್ರಕರ್ತ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಎಂ.ವಿ. ಹೆಗ್ಡೆ ಅವರು ಬರೆದಿದ್ದ ಸ್ವಾತಂತ್ರ್ಯ ಹೋರಾಟ ಕೇಂದ್ರಿತ ಎರಡು ಯಕ್ಷಗಾನ ಪ್ರಸಂಗಗಳಲ್ಲಿ ಒಂದಾಗಿರುವ “ಹೈದರಾಬಾದ್ ವಿಜಯ’ (ರಜಕಾರಾಸುರ ಸಂಹಾರ)ವು ಪಟ್ಲ ಸತೀಶ್ ಶೆಟ್ಟಿ ಭಾಗವತಿಕೆಯಲ್ಲಿ ಮೂಡಿಬಂತು. ಈ ಕೃತಿಯನ್ನು ಜೋಪಾನವಾಗಿ ಸಂಗ್ರಹಿಸಿಟ್ಟು, ಕಾರ್ಯಕ್ರಮದ ರೂವಾರಿಯಾಗಿದ್ದ ಸುಧಾಕರ ಆಚಾರ್ಯ ಅವರಿಗೆ ತಲುಪಿಸಿದ ತೆಕ್ಕಟ್ಟೆ ವೆಂಕಟೇಶ್ ವೈದ್ಯ ಅವರನ್ನು ಗೌರವಿಸಲಾಯಿತು. ಕೃತಿಯನ್ನು ಒದಗಿಸಿದ್ದ ಮಂಗಳೂರಿನ ಕೃಷ್ಣಪ್ಪ ಕರ್ಕೇರ ಅವರು ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ.
ಇಲ್ಲಿ ಓರ್ವ ನಾಯಕನಾದವನು ಹೇಗಿರಬೇಕು? ಕೈಕಳಗಿನವರನ್ನು ಮತ್ತು ಜನರನ್ನು ಒಲಿಸಿಕೊಳ್ಳಲು ಭೀತಿಯೊಂದೇ ಸಾಧನವೇ? ಪಾಕಿಸ್ಥಾನದ ಇಂದಿನ ಕುಟಿಲ ನೀತಿ ಹಿಂದೆಯೂ ಇದೇ ರೀತಿ ಇತ್ತಾ? ಮುಸ್ಲಿಮರಲ್ಲಿರುವ ಭಾರತಪರ ದೇಶಭಕ್ತಿಯಿಂದಲೇ ಹೈದರಾಬಾದ್ ನಿಜಾಮನಿಗೆ ಸುಲಭವಾಗಿ ಸೋಲಾಯಿತೇ ಮುಂತಾದ ಪ್ರಶ್ನೆಗಳಿಗೂ ಉತ್ತರ ನೀಡುವಲ್ಲಿ ಕಲಾವಿದರು ಸಮರ್ಥರಾದರು.
ಸುಮಾರು ಎರಡರಿಂದ ಎರಡೂವರೆ ತಾಸು ಕಾಲ ತಾಳಮದ್ದಳೆ ಜರಗಿದ್ದು, ಸಮಯಾಭಾವದಿಂದ ಮೂಲ ಕೃತಿಯಲ್ಲಿದ್ದ ಕೆಲವು ಪದ್ಯಗಳನ್ನು ಕೈಬಿಡಲಾಗಿದೆ ಎಂದು ತಿಳಿಸಲಾಗಿತ್ತಾದರೂ, ಇಲ್ಲಿ ಕಥೆಗೆ ಭಂಗ ಉಂಟಾಗಲಿಲ್ಲ. ವಂದೇ ಮಾತರಂ ಹಾಡಿನೊಂದಿಗೆ ತಾಳಮದ್ದಳೆ ಆರಂಭವಾಗಿದ್ದು, ಬಳಿಕ ಹಲವು ಪದ್ಯಗಳು ಪಟ್ಲರ ಕಂಠದಿಂದ ಹೊರಬಂದಿದ್ದು, ಅವುಗಳಲ್ಲಿ “ಕಲಿಸಿಹನು ಗುರು ಶಾಂತಿಮಂತ್ರವ, ಕಲಹ ಬೇಡೆನುತ’ ಹಾಡಿಗೆ ಪ್ರೇಕ್ಷಕರ ಚಪ್ಪಾಳೆ ಅರ್ಹವಾಗಿಯೇ ಸಿಕ್ಕಿತು. ಬಳಿಕ “ಬೆದರುವ ಕಾರಣವಿಲ್ಲ, ಕದನವೆ ನಡೆದರೂ ನಮಗಿಲ್ಲ ಅಶುಭ’ ಹಾಡೂ ಮೆಚ್ಚುಗೆಯಾಯಿತು. “ಸೈನಿಕ ಮಕ್ಕಳಿರಾ ಗೆದ್ದು ಬನ್ನಿ’ ಹಾಗೂ “ನಿಜಾಮನ ಕುಸಿದನು ಭಾರತಕೆ ಶರಣೆನುತ’ ಮುಂತಾದ ಹಾಡುಗಳು ಹೆಚ್ಚು ಶ್ಲಾಘನೆಗೆ ಒಳಗಾದವು. ಹೆಚ್ಚಿನ ಹಾಡುಗಳು ಗಾತ್ರದಲ್ಲಿ ಕಿರಿದಾಗಿದ್ದರೂ, ಕಲಾಭಿಮಾನಿಗಳನ್ನು ರಂಜಿಸುವಲ್ಲಿ ಸಫಲವಾಯಿತು.
ವಲ್ಲಭಭಾಯಿ ಪಟೇಲ್ ಪಾತ್ರಧಾರಿಯಾಗಿದ್ದ ಪ್ರಶಾಂತ್ ಬೇಳೂರು ದಿಟ್ಟತನ, ಗಾಂಭೀರ್ಯ ಮತ್ತು ನಿರರ್ಗಳ ಮಾತುಗಾರಿಕೆ ಯಿಂದ ಗಮನ ಸೆಳೆದರು. ನೆಹರೂ ಪಾತ್ರಧಾರಿ ನಾರಾಯಣ ಹೆಗಡೆ ಹಾಗೂ ರಾಜಾಜಿ ಪಾತ್ರಧಾರಿ ಎಂ.ಎಲ್. ಸಾಮಗ ಮಾತಿನ ಮಂಟಪಕ್ಕೆ ಸೂಕ್ತ ಆಧಾರವಾದರು. ರಜಾಕಾರ ಸೇನೆಯ ಮುಖ್ಯಸ್ಥ ಸಯ್ಯದ್ ಖಾಸಿಂ ರಜ್ಮಿ ಪಾತ್ರ ಮಾಡಿದ್ದ ಸದಾಶಿವ ಆಳ್ವ ತಲಪಾಡಿ ವಿಡಂಬನಾತ್ಮಕ ಮಾತುಗಳ ಮೂಲಕ ಇಡೀ ಕೂಟಕ್ಕೆ ಹೊಸ ಕಳೆ ತುಂಬಿದರು. ನಿಜಾಮನ ಪ್ರಧಾನಿ ಲಾಯಕ್ ಅಲಿ ಪಾತ್ರ ಮಾಡಿದ್ದ ಶ್ರೀರಮಣ ಆಚಾರ್ಯ ಗಮನ ಸೆಳೆದರು. ನಿಜಾಮ ಪಾತ್ರಧಾರಿ ಅಪ್ಪು ನಾಯಕ್ ಆತ್ರಾಡಿ, ಅಸಮರ್ಥ ಹಾಗೂ ಅಸಹಾಯಕ ನಾಯಕನ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದರು. ಜತೆಗೆ ನಾಯಕನಾದವನು ಪರಿಸ್ಥಿತಿಯನ್ನು ಸರಿಯಾಗಿ ಅರ್ಥೈಸಿಕೊಳ್ಳದಿದ್ದರೆ, ತನ್ನ ಸುತ್ತ ಇರುವವರ ಮೇಲೆ ಅತಿಯಾದ ನಂಬಿಕೆ ಹೊಂದಿದ್ದರೆ ಯಾವ ಪರಿಸ್ಥಿತಿ ಎದುರಾದೀತು ಎಂಬುದನ್ನು ಮನಸ್ಪರ್ಶಿಯಾಗಿ ಪ್ರೇಕ್ಷಕರಿಗೆ ನೀಡುವಲ್ಲಿ ಸಫಲರಾದರು.
ಸೇನಾಧಿಕಾರಿ ಜನರಲ್ ಮಹಾರಾಜ ರಾಜೇಂದ್ರ ಸಿಂಗ್ ಪಾತ್ರ ಮಾಡಿದ್ದ ಪಾದೆಕಲ್ಲು ವಿಷ್ಣು ಭಟ್ ಮತ್ತು ಮೇ| ಜ| ಜೆಕೆಎನ್ ಚೌಧರಿ ಪಾತ್ರಕ್ಕೆ ಜೀವ ತುಂಬಿದ್ದ ಕುಂಬ್ಳೆ ಸುಂದರ ರಾವ್ ಸಮರ್ಥವಾಗಿಯೇ ಪ್ರೇಕ್ಷಕರನ್ನು ರಂಜಿಸಿದರು.
ಪ್ರಸಂಗವು ಹೆಚ್ಚಿನವರಿಗೆ ತಿಳಿದಿರದ ಒಂದು ಕಥೆಯನ್ನು ರಾಷ್ಟ್ರೀಯತೆಯೊಂದಿಗೆ ಬೆರೆಸಿ ಪ್ರೇಕ್ಷಕರನ್ನು ತಲುಪುವಲ್ಲಿ ಸಫಲ ವಾಯಿತು. ನಾಯಕನಾದವನು ಪ್ರೀತಿಯಿಂದಲೇ ಜನರನ್ನು ಒಲಿಸಲು ಮುಂದಾಗಬೇಕು, ಅದರಲ್ಲಿ ಫಲ ಸಿಗದಿದ್ದರೆ ಮಾತ್ರ ಭೀತಿ ಸೃಷ್ಟಿಸಬೇಕು. ಪಾಕಿಸ್ಥಾನವು ಆಗಲೂ ಕುಟಿಲ ಭಾರತ ವಿರೋಧಿ ನೀತಿಯ ಮೂಲಕ ನಿಜಾಮರಿಗೆ ಹೇಗೆ ಸಹಕಾರ ನೀಡುತ್ತಿತ್ತು ಎಂಬುದನ್ನೂ ತಿಳಿಸುವುದರ ಜತೆಗೆ, ಹೈದರಾಬಾದ್‌ನ ಮುಸ್ಲಿಮರು ನಿಜಾಮನಿಗೆ ವಿರುದ್ಧವಾಗಿ ಭಾರತ ಪರ ನಿಲುವು ಹೊಂದಿದ್ದರಿಂದ ಕೇವಲ ಐದೇ ದಿನದಲ್ಲಿ ಜಯ ಭಾರತದ ಪಾಲಾಗಿತ್ತು. ಒಂದು ಹೊಸ ಅನುಭವ ನೀಡಿದ ಈ ಕಾರ್ಯಕ್ರಮದ ಆಯೋಜಕರು ಶ್ಲಾಘನೀಯರು.
ಪುತ್ತಿಗೆ ಪದ್ಮನಾಭ ರೈ