ಎಚ್.ಡಿ.ಕೋಟೆ: ಕಳೆದ ಎರಡು ವರ್ಷ ಹಿಂದೆ ಆರಂಭಗೊಂಡಿದ್ದ ಸುಸಜ್ಜಿತ ತಾಯಿ-ಮಗು ಆಸ್ಪತ್ರೆ ಕಟ್ಟಡ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. 8 ಕೋಟಿ ರೂ. ವೆಚ್ಚದ ಆಸ್ಪತ್ರೆ ಲೋಕಾರ್ಪಣೆಗೆ ಸರ್ಕಾರ ನೀಡಿದ್ದ ಗಡುವು ಮುಗಿದು ಎಂಟು ತಿಂಗಳು ಪೂರೈಸಿದರೂ ಸಾರ್ವಜನಿಕ ಸೇವೆಗೆ ಸಿದ್ಧವಾಗಿಲ್ಲ. ಈ ವರ್ಷಾಂತ್ಯಕ್ಕೂ ಉದ್ಘಾಟನೆಯಾಗುವುದು ಬಹುತೇಕ ಅನುಮಾನವಾಗಿದೆ.
ತಾಲೂಕು ಕೇಂದ್ರ ಸ್ಥಾನದಲ್ಲಿ 8 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ತಾಯಿ ಮಗುವಿನ ಆರೋಗ್ಯದ ದೃಷ್ಟಿಯಿಂದ ಸುಸಜ್ಜಿತ ನೂತನ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಕಳೆದ ಮಾರ್ಚ್ 22ಕ್ಕೆ ಆಸ್ಪತ್ರೆ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಲೋಕಾರ್ಪಣೆ ಮಾಡಬೇಕು ಎಂದು ಗುತ್ತಿಗೆದಾರರಿಗೆ ಸರ್ಕಾರ ಷರತ್ತು ಬದ್ಧ ಗಡುವು ನೀಡಿತ್ತು.
ಅವಧಿ ವಿಸ್ತರಣೆ: ಆದರೆ, ಕಾಮಗಾರಿ ಆರಂಭಗೊಂಡು 2 ವರ್ಷ ಕಳೆದರೂ ಇಂದಿಗೂ ಕಟ್ಟಡ ಪೂರ್ಣಗೊಂಡಿಲ್ಲ. ಕಾಮಗಾರಿ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದೆ. ಗುತ್ತಿಗೆದಾರರ ವಿರುದ್ಧ ಕೆಂಡಮಂಡಲವಾದ ಸರ್ಕಾರ ಮಾರ್ಚ್ ತಿಂಗಳಿಂದ ಮತ್ತೆ 2 ತಿಂಗಳು ವಿಸ್ತರಣೆ ಮಾಡಿ ಅಷ್ಟರೊಳಗೆ ಕಾಮಗಾರಿ ಪೂರ್ಣಗೊಳಿಸುವ ತಾಕೀತು ಮಾಡಿತ್ತು. ಆದರೂ ಕಾಮಗಾರಿ ಅರ್ಪೂಣಗೊಂಡ ಹಿನ್ನೆಲೆಯಲ್ಲಿ ಮತ್ತೆ 2 ತಿಂಗಳ ಅವಧಿ ವಿಸ್ತಿರಿಸಿತ್ತು. ಇದೀಗ ಕಾಮಗಾರಿ ಷರತ್ತಿನ ಅವಧಿ ಪೂರ್ಣಗೊಂಡು ಸುಮಾರು 8 ತಿಂಗಳು ಕಳೆದರೂ ಆಸ್ಪತ್ರೆ ಲೋಕಾರ್ಪಣೆಯಾಗಿಲ್ಲ. ಸದ್ಯಕ್ಕೆ ಉದ್ಘಾಟನೆಯಾಗುವ ಲಕ್ಷಣವೂ ಕಾಣುತ್ತಿಲ್ಲ.
ಸುಮಾರು 30 ಹಾಸಿಗೆಗಳ ಸಾಮರ್ಥ್ಯ ಹೊಂದಿರುವ ತಾಯಿ ಮಗುವಿನ ಆರೈಕೆ ಆಸ್ಪತ್ರೆಯಲ್ಲಿ ವೈಜ್ಞಾನಿಕ ಉಪಕರಣಗಳ ಅಳವಡಿಕೆ ಸೇರಿದಂತೆ ಸುಸಜ್ಜಿತ, ಹೆರಿಗೆ ಆಸ್ಪತ್ರೆ ಸೇವೆ ತಾಲೂಕಿನ ಮಹಿಳೆಯರು ಮತ್ತು ಮಕ್ಕಳಿಗೆ ಲಭ್ಯವಾಗಬೇಕು. ಆದರೆ, ಬಲ್ಲ ಮೂಲಗಳ ಪ್ರಕಾರ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗುತ್ತಿಗೆದಾರರ ಹಣದಾಸೆಗೆ ಬಲಿಯಾಗಿ ಕಾಮಗಾರಿ ವಿಳಂಬವಾದರೂ ಚಕಾರ ಎತ್ತುತ್ತಿಲ್ಲ. ಈ ಕುರಿತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಅಕ್ರೋಶ ವ್ಯಕ್ತವಾಗುತ್ತಿದೆ.
ಆಗ್ರಹ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಡಜನರೇ ಬಹುಸಂಖ್ಯೆಯಲ್ಲಿರುವ ಹಿಂದುಳಿದ ತಾಲೂಕು ಕೇಂದ್ರ ಸ್ಥಾನದ ತಾಯಿ ಮಗುವಿನ ಆಸ್ಪತ್ರೆ ಕಾಮಗಾರಿ ತ್ವರಿತಗತಿಯಲ್ಲಿ ಸಾಗಿ ಜನಸೇವೆಗೆ ಮುಂದಾಗುವಂತೆ ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕ್ರಮವಹಿಸಬೇಕು ಎಂದು ತಾಲೂಕಿನ ನಾಗರಿಕರು ಆಗ್ರಹಿಸಿದ್ದಾರೆ.
ಹಿಂದುಳಿದ ಎಚ್.ಡಿ.ಕೋಟೆ ತಾಲೂಕು ಕೇಂದ್ರ ಸ್ಥಾನದಲ್ಲಿ 8 ಕೋಟಿ ರೂ.ವೆಚ್ಚದಲ್ಲಿ ತಾಯಿ ಮಗುವಿನ ಆರೈಕೆ ಆಸ್ಪತ್ರೆ ನಿರ್ಮಾಣಗೊಳ್ಳುತ್ತಿರುವುದು ಸಂತಸದ ವಿಚಾರ. ಆದರೆ, ಕಾಮಗಾರಿ ಸಾಕಷ್ಟು ವಿಳಂಬವಾಗುತ್ತಿದೆ. ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕ ಸೇವೆ ಕಲ್ಪಿಸಬೇಕಿದೆ.
-ಎಚ್.ಎನ್.ನಾಗರಾಜು, ಸ್ಥಳೀಯ ನಿವಾಸಿ
ಹಿಂದುಳಿದ ಎಚ್.ಡಿ.ಕೋಟೆ ತಾಲೂಕಿನ ಅಭಿವೃದ್ಧಿಗೆ ಸರ್ಕಾರ ಅನುದಾನದ ಹೊಳೆಯನ್ನೇ ಹರಿಸುತ್ತದೆ. ಆದರೆ, ಅಧಿಕಾರಿಗಳು ಮತ್ತು ಚುನಾಯಿತಿ ಪ್ರತಿನಿಧಿಗಳು ಗುತ್ತಿಗೆದಾರರ ಬಳಿ ಇಂತಿಷ್ಟು ಪ್ರಮಾಣದಲ್ಲಿ ಹಣ ನೀಡಬೇಕೆನ್ನುವ ಒಪ್ಪಂದ ಮಾಡಿಕೊಂಡ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗಲಿ, ಕಳಪೆಯಾಗಲಿ ಚಕಾರ ಎತ್ತುತ್ತಿಲ್ಲ.
-ಪಿ.ಸುರೇಶ್, ಯರಹಳ್ಳಿ
ಎಚ್.ಡಿ.ಕೋಟೆ ಪಟ್ಟಣದಲ್ಲಿ ನಿರ್ಮಿಸುತ್ತಿರುವ 8 ಕೋಟಿ ರೂ. ಅಂದಾಜು ವೆಚ್ಚದ ಆಸ್ಪತ್ರೆ ಕಟ್ಟಡ ಕಾಮಗಾರಿ ಈಗಾಗಲೇ ವಿಳಂಬವಾಗಿದೆ. ಇದೀಗ ಚುರುಕಾಗಿ ಕೆಲಸಗಳು ನಡೆಯುತ್ತಿವೆ. ಒಂದೆರಡು ತಿಂಗಳಲ್ಲಿ ಕಟ್ಟಡ ಪೂರ್ಣಗೊಂಡು ಲೋಕಾರ್ಪಣೆಯಾಗಲಿದೆ.
-ಭಾಸ್ಕರ್, ಆಡಳಿತಾಧಿಕಾರಿ, ಸಾರ್ವಜನಿಕ ಆಸ್ಪತ್ರೆ
* ಎಚ್.ಬಿ. ಬಸವರಾಜು