ರೋಮನ್ ಇತಿಹಾಸದಲ್ಲಿ ಕಲಿಗುಲ ಎಂಬ ಹೆಸರಿನ ಚಕ್ರವರ್ತಿ ಇದ್ದ. ಅವನ ಬಳಿ ಇನ್ಸಿಟೇಟಸ್ ಎಂಬ ಕುದುರೆಯಿತ್ತು. ಚಕ್ರವರ್ತಿಗೆ ಆ ಕುದುರೆಯನ್ನು ಕಂಡರೆ ತುಂಬಾ ಪ್ರೀತಿ.
ಸ್ವಂತದವರ ಮೇಲೆ ಇಲ್ಲದಷ್ಟು ಅಕ್ಕರೆಯನ್ನು ಕುದುರೆ ಮೇಲೆ ತೋರಿಸುತ್ತಿದ್ದ. ಅದನ್ನಿರಿಸಲು ಅಮೃತಶಿಲೆಯ ಲಾಯ, ಅದನ್ನು ಕಟ್ಟಲು ಆಭರಣಗಳಿಂದ ತಯಾರಿಸಿದ ಸರಪಣಿ, ಅದನ್ನು ನೋಡಿಕೊಳ್ಳಲು ಪ್ರತ್ಯೇಕ ಸೈನಿಕ ವಿಭಾಗ, ಇವಿಷ್ಟನ್ನೂ ನಿಯೋಜಿಸಿದ್ದ.
ಕಲಿಗುಲ ಎಂಥ ಹುಚ್ಚನೆಂದರೆ ಒಂದು ಬಾರಿ ಕುದುರೆಗೆ ಓಟ್ಸ್ ಮತ್ತು ಚಿನ್ನದ ಹುಡಿಯನ್ನು ಮಿಶ್ರಣ ಮಾಡಿ ತಿನ್ನಿಸಬೇಕೆಂದು ಸೇವಕರಿಗೆ ಕಟ್ಟಪ್ಪಣೆ ಹೊರಡಿಸಿದ್ದ. ಅವನ ಯೋಚನೆಗಳು, ಆಜ್ಞೆಗಳು ಕ್ಷಣ ಕ್ಷಣಕ್ಕೂ ಬದಲಾಗುತ್ತಿದ್ದವಂತೆ. ಇಷ್ಟು ಸಾಲದೆಂಬಂತೆ ಅವನು ಕುದುರೆಯನ್ನು ತನ್ನ ಸಾಮ್ರಾಜ್ಯಕ್ಕೆ ಮಂತ್ರಿಯನ್ನಾಗಿ ನಿಯೋಜಿಸಿದ. ಅಧಿಕಾರಿ ವರ್ಗ ಗಾಬರಿ ಬಿದ್ದಿತ್ತು. ಇತಿಹಾಸದಲ್ಲಿ ಕಲಿಗುಲ ಹುಚ್ಚ ಚಕ್ರವರ್ತಿಯೆಂದೇ ದಾಖಲಾಗಿದ್ದರೂ ಅವೆಲ್ಲ ವಾದಗಳಿಗೆ ಪುರಾವೆಗಳಿಲ್ಲ, ಅದೆಲ್ಲಾ ಸುಳ್ಳು ಎನ್ನುವವರೂ ಇದ್ದಾರೆ.
ಅಧಿಕಾರದ ಮದ, ಲಾಲಸೆಯಲ್ಲಿ ತೇಲಾಡುತ್ತಿದ್ದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ಕಲಿಗುಲ ತನ್ನ ಕುದುರೆಯನ್ನು ಮಂತ್ರಿಯನ್ನಾಗಿಸಿದ ಎಂಬ ವಾದವೂ ಇದೆ. ಅವೇನೇ ಇದ್ದರೂ ಕಲಿಗುಲನನ್ನು ವರ್ಣರಂಜಿತ ಚಕ್ರವರ್ತಿ ಎಂದೇ ಇತಿಹಾಸ ನೆನಪಿಟ್ಟುಕೊಂಡಿರುವುದರಲ್ಲಿ ಅನುಮಾನವಿಲ್ಲ. ಅವನು ಕುದುರೆ ಸವಾರಿ ಮಾಡುವ ಪ್ರತಿಮೆ ಲಂಡನ್‌ನ ಬ್ರಿಟಿಷ್ ಮ್ಯೂಸಿಯಂನಲ್ಲಿದೆ.
– ಹವನ