Advertisement

ಮಾನವೀಯ ಸ್ಪಂದನ ಕಾವ್ಯದ ಆಶಯವಾಗಬೇಕು: ಮಹೇಶ್‌ ಪ್ರಸಾದ್‌ ಹೆಗ್ಡೆ

02:41 PM Aug 24, 2017 | |

ಪುಣೆ: ಕವಿಯಾದವನು ತನ್ನ ಅಂತರಂಗದೊಳಗೆ ಅದುಮಿಟ್ಟ ಆಸಕ್ತಿಗಳಿಗೆ ಜೀವಕೊಟ್ಟು ಅಂತರಂಗದ ಭಾವನೆಗಳೆಂಬ ತರಂಗಗಳನ್ನು ಹೊರಸೂಸಿದಾಗ ಸಹಜ ವಾಗಿ ಕಾವ್ಯದ ಸೃಷ್ಟಿಯಾಗುತ್ತದೆ. ಕಾವ್ಯ ವೆನ್ನುವುದು ಹತ್ತು ಹಲವು ಸಾಹಿತ್ಯ ಪ್ರಕಾರ ಗಳ ತಾಯಿಯಿದ್ದಂತೆ. ಸತ್ಯಾನ್ವೇಷಣೆ ಮತ್ತು ಕ್ರಿಯಾಶೀಲ ಸಂವಹನ ಕಾವ್ಯದ ಗುರಿಯಾಗಿರ ಬೇಕು. ಭೂತಕಾಲದ ನೆನಪು, ವರ್ತಮಾನದ ಸತ್ಯ, ಭವಿಷ್ಯತ್ತಿನ ಒಳಿತು ಕೆಡುಕುಗಳ ಚಿಂತನೆಗಳನ್ನು ಭಾಷಾ ಬಂಧನದಲ್ಲಿ ಹೆಣೆದು ಕವಿ ಯಾದವನು ಸಹೃದಯ ಓದುಗರ ಮುಂದಿಡಬೇಕು. ಅಂತಹ ಕವಿತೆಗಳು ಓದುಗರ ಮನ ಗೆಲ್ಲುವುದರಲ್ಲಿ ಸಂಶಯವಿಲ್ಲ. ಜೀವನ ಪ್ರೇಮ ಹಾಗೂ ಮಾನವೀಯ ಸ್ಪಂದನೆಗಳು ಕಾವ್ಯದ ಆಶಯವಾಗಿರಬೇಕು ಎಂದು ಪುಣೆಯ ಕವಿ, ಲೇಖಕ ಪೊಳಲಿ ಮಹೇಶ್‌ ಪ್ರಸಾದ್‌ ಹೆಗ್ಡೆ ಅಭಿಪ್ರಾಯಪಟ್ಟರು.

Advertisement

ಆ. 20ರಂದು ಡಾ| ಕಲ್ಮಾಡಿ ಕನ್ನಡ ಮಾಧ್ಯಮ ಹೈಸ್ಕೂಲ್‌ ಸಭಾಂಗಣದಲ್ಲಿ ಕನ್ನಡ ಸಂಘ ಪುಣೆ ಆಯೋಜಿಸಿದ ಕವಿ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕವಿಗಳು ಸಮಾಜದ ಕುಂದು ಕೊರತೆಗಳನ್ನು ತಿದ್ದುವ, ಅಶಕ್ತರ ಧ್ವನಿಯಾಗಿ ಹೃದಯ ಹೃದಯಗಳನ್ನು ಬೆಸೆಯುವ ಸ್ನೇಹ ಸೇತುವಾಗಬೇಕು. ಇಂದಿನ ಯಾಂತ್ರೀಕೃತ ಬದುಕಿನಲ್ಲಿ ನಮ್ಮ ಹಿರಿಯರ ಆಚಾರ ವಿಚಾರಗಳನ್ನು ಮೂಢನಂಬಿಕೆಗಳೆಂದು ಪರಿಗಣಿಸುತ್ತಿದ್ದು, ನಮ್ಮೊಳಗಿನ ಭಾವನಾತ್ಮಕ ಸಂಬಂಧಗಳಿಗೆ ಬೆಲೆ ಇಲ್ಲದಾಗಿದೆ. ತಂದೆ, ತಾಯಿ, ಮಕ್ಕಳೊಂದಿಗೆ ಪ್ರೀತಿಯಿಂದ ಕಾಲ ಕಳೆಯಲು ನಮ್ಮಲ್ಲಿ ಸಮಯ ವಿಲ್ಲದಾಗಿದೆ. ಪಾಶ್ಚಾತ್ಯ ಭಾಷೆ, ಸಂಸ್ಕೃತಿಗಳ ಅನುಕರಣೆಯೊಂದಿಗೆ ಅದರ ದಾಸರಾಗಿ ನಮ್ಮ ಸಂಸ್ಕೃತಿ, ಕನ್ನಡ ಭಾಷೆಗಳನ್ನು ಮರೆಯುತ್ತಿ ರುವುದು, ಮೊಬೈಲ್‌, ಇಂಟರ್‌ನೆಟ್‌, ಸಾಮಾಜಿಕ ಜಾಲತಾಣಗಳ ಮೋಹದೊಳಗೆ ಸಿಕ್ಕಿ ನಮ್ಮತನವನ್ನು ಕಳೆದುಕೊಳ್ಳುತ್ತಿರುವುದು ಇಂದಿನ ದುರಂತ ಸಂಗತಿಯಾಗಿದೆ ಎಂದು ತಮ್ಮ ಕಾವ್ಯಮಯ ಶೈಲಿಯಲ್ಲಿ ಅಂತರಂಗದ ಭಾವನೆಗಳನ್ನು ವ್ಯಕ್ತಪಡಿಸಿದರು. ಇಂದು ಈ ಕವಿ ಸಮ್ಮೇಳನದಲ್ಲಿ ಕವಿಗಳಿಗೆ ಪ್ರೇಮ ಎಂಬ ವಿಷಯದ ಮೇಲೆ ಕವನ ರಚಿಸಲು ಅವಕಾಶ ನೀಡಲಾಗಿದ್ದು, ಪುಣೆಯಲ್ಲಿನ ಪ್ರತಿಭಾನ್ವಿತ ಕವಿಗಳು ಪ್ರೀತಿ, ಪ್ರೇಮ ಎಂಬ ಭರವಸೆಯ ಬುನಾದಿಯ ಮೇಲೆ ನಿಂತಿರುವ ಜನರ ಭಾವನೆಗಳನ್ನು, ಪ್ರೇಮದ ಅರ್ಥಗಳನ್ನು ತಮ್ಮ ತಮ್ಮ ವಿಭಿನ್ನ ರೀತಿಯಲ್ಲಿ ಕವನರೂಪದಲ್ಲಿ ಉತ್ತಮವಾಗಿ ಪ್ರಸ್ತುತಪಡಿಸಿ ಕವಿಸಮ್ಮೇಳನದ ಉದ್ದೇಶವನ್ನು ಸಾರ್ಥಕಪಡಿಸಿದ್ದಾರೆ. ಈ ಸದವಕಾಶ ಕಲ್ಪಿಸಿಕೊಟ್ಟ ಕನ್ನಡ ಸಂಘಕ್ಕೆ ಕೃತಜ್ಞತೆಗಳು ಎಂದು ನುಡಿದು, ಸ್ವರಚಿತ ಕವನವನ್ನು ವಾಚಿಸಿದರು.

ಪುಣೆ ಕನ್ನಡ ಸಂಘದ ಕಾರ್ಯದರ್ಶಿ ಮಾಲತಿ ಕಲ್ಮಾಡಿ ಮಾತನಾಡಿ, ಬಹಳ ಉತ್ತಮ ಕಾರ್ಯಕ್ರಮ ಇದಾಗಿದ್ದು ಕನ್ನಡ ಸಂಘದ ವತಿಯಿಂದ ಕನ್ನಡ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಇಂದು ಕವನ ವಾಚಿಸಿದ ಕವಿಗಳ ಕವನಗಳನ್ನು ಸಂಗ್ರಹಿಸಿ ಕವನ ಸಂಕಲನ ಹೊರತರುವಲ್ಲಿ ಚಿಂತಿಸಲಾಗುವುದು ಎಂದರು.

ಪುಣೆಯ ಕವಿಗಳಾದ ಕೃಷ್ಣ ಇತ್ನಾಳ್‌, ಕೃ. ಶಿ. ಹೆಗ್ಡೆ, ಇಂದಿರಾ ಸಾಲ್ಯಾನ್‌, ಪಾಂಗಾಳ ವಿಶ್ವನಾಥ ಶೆಟ್ಟಿ, ಲಲಿತಾ ರಾವ್‌, ಸುಭಾಶ್ಚಂದ್ರ ಸಕ್ರೋಜಿ, ಅನ್ನಪೂರ್ಣ ಸಕ್ರೋಜಿ, ಜ್ಯೋತಿ ಕಡಕೋಳ, ಕಿರಣ್‌ ಬಿ. ರೈ ಕರ್ನೂರು, ಅನಂತ ಶರ್ಮ, ವಿಕೇಶ್‌ ರೈ ಶೇಣಿ, ಮಮತಾ ಪಿ. ಅಂಚನ್‌, ಪೊಳಲಿ ಮಹೇಶ್‌ ಪ್ರಸಾದ್‌ ಹೆಗ್ಡೆ ತಮ್ಮ ಕವನಗಳನ್ನು ವಾಚಿಸಿ ದರು. ಇಂದಿರಾ ಸಾಲ್ಯಾನ್‌ ತನ್ನ ಮಧುರ ಕಂಠ ದಿಂದ ಸುಶ್ರಾವ್ಯವಾಗಿ ಸ್ವರಚಿತ ಕವನವನ್ನು ಸಂಗೀತದೊಂದಿಗೆ ಹಾಡಿ ರಂಜಿಸಿದರು. ಮೊದಲಿಗೆ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. 

ಕಾರ್ಯಕ್ರಮದಲ್ಲಿ ಪುಣೆ ಕನ್ನಡ ಸಂಘದ ಕಾರ್ಯದರ್ಶಿ ಮಾಲತಿ ಕಲ್ಮಾಡಿ, ಜನಸಂಪರ್ಕಾಧಿಕಾರಿ ರಾಮದಾಸ ಆಚಾರ್ಯ, ಮಾಧವ ಸಾಲ್ಯಾನ್‌, ನಾಟ್ಯಗುರು ಮದಂಗಲ್ಲು ಆನಂದ ಭಟ್‌, ಶ್ರೀಧರ ಶೆಟ್ಟಿ ಕಲ್ಲಾಡಿ, ಮಟ್ಟಾರ್‌  ಪ್ರಕಾಶ್‌ ಹೆಗ್ಡೆ, ಪ್ರವೀಣ್‌ ಅಂಚನ್‌ ಮತ್ತು ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು.

Advertisement

ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಾದ ರೋಹಿತ್‌ ನಾಟೇಕರ್‌, ಚಾಮುಂಡೇಶ್ವರಿ ಕಲಶೆಟ್ಟಿ, ಮಮತಾ ರಾಥೋಡ್‌, ಶ್ರಾವ್ಯಾ ಕುಲಾಲ್‌, ನಿರ್ಮಲಾ ಚಲವಾದಿ, ರಾಧಿಕಾ ಮಸಬಿನಾಳ, ಅಶ್ವಿ‌ನಿ ವಡ್ಡರ, ಸವಿತಾ ಚಲವಾದಿ, ಶ್ರೀದೇವಿ ಈಡಿಗೇರ, ಚೈತ್ರಾ ಶೆಟ್ಟಿ ಕವಿಗಳನ್ನು ಪರಿಚಯಿಸಿದರು. ಕವಿಗಳನ್ನು ಸಂಘದ ವತಿಯಿಂದ ಗೌರವಿಸಲಾಯಿತು. ಇಂದಿರಾ ಸಾಲ್ಯಾನ್‌ ಅವರು ಸ್ವಾಗತಿಸಿ ಕನ್ನಡ ಮಾಧ್ಯಮ ಹೈಸ್ಕೂಲ್‌ ಮುಖ್ಯೋಪಾಧ್ಯಾಯರಾದ ಚಂದ್ರಕಾಂತ ಹಾರಕೂಡೆ ವಂದಿಸಿದರು. ಶಿಕ್ಷಕಿ ವಿಲ್ಮಾ ಮಾರ್ಟಿಸ್‌ ಕಾರ್ಯಕ್ರಮ ನಿರೂಪಿಸಿದರು.
ಶಿಕ್ಷಕಿಯರಾದ ಶ್ರೇಯಾ ಹಬ್ಬು, ಉಷಾ ಮೋರೆ, ರೂಪಲೇಖಾ ಹೆಗ್ಡೆ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next