ಮನೆ ಎಂದರೆ ಸಿಮೆಂಟು, ಕಲ್ಲು, ಮಣ್ಣು ಇಟ್ಟಿಗೆಗಳಿಂದ ಮಾಡಿರಲೇಬೇಕೆಂಬ ನಿಯಮ ಎಲ್ಲೂ ಇಲ್ಲ. ಮನೆ ಎಂದರೆ ಗೋಡೆ, ಕಾಂಪೌಂಡುಗಳಿಗೆ ಸುಣ್ಣ ಬಣ್ಣ ಬಳಿದಿರಬೇಕೆಂದೂ ಇಲ್ಲ. ಅದಕ್ಕೆ ಉದಾಹರಣೆ ಈ ಮುಚ್ಚಳದ ಮನೆ. ಅರ್ಥಾತ್ ಬಾಟಲಿ ಮುಚ್ಚಳಗಳಿಂದ ತಯಾರಾದ ಮನೆ!
ಈ ಪುಟ್ಟ ಮನೆಯ ಗೋಡೆಗಳಿಗೆ ಸುಣ್ಣ, ಬಣ್ಣ ಬಳಿದಿಲ್ಲ. ಮೊಸಾಯಿಕ್ ಹೆಂಚುಗಳನ್ನು ಜೋಡಿಸಿಲ್ಲ. ಆದರೂ ಈ ಮನೆ, ಮನ ಸೆಳೆಯುವ ಬಣ್ಣಗಳಿಂದ ಆಕರ್ಷಕವಾಗಿದೆ. ನೇಯ್ಗೆಯ ಕೌಶಲ ಬಳಸಿರುವ ಚಿತ್ರಗಳೂ ಇವೆ.
ಅಚ್ಚರಿಯ ವಿಷಯವೆಂದರೆ ಈ ಕಲೆ ಸೃಷ್ಟಿಯಾಗಿರುವುದು ಸೋಡಾ, ನೀರು ಮತ್ತು ಕಿತ್ತಳೆಯ ಜ್ಯೂಸ್ ತುಂಬಿಡುವ ಬಾಟಲಿಗಳ ನಿರುಪಯುಕ್ತ ಮುಚ್ಚಳಗಳಿಂದ. ನಾವೆಲ್ಲಾ ಬಳಸಿ ಬಿಸಾಡುವ ಮುಚ್ಚಳಗಳಿಂದ ಈ ಕಲೆ ಸೃಷ್ಟಿಯಾಗಿದ್ದು, ಒಟ್ಟು ಮೂವತ್ತು ಸಾವಿರ ಮುಚ್ಚಳಗಳ ಬಳಕೆಯಾಗಿದೆ.
ಎಲ್ಲಿದೆ ಮುಚ್ಚಳದ ಮನೆ?: ಇಂಥ ಚಂದದ ಮನೆ ಇರುವುದು ರಷ್ಯಾದ ಕಮರ್ಚಾಗಾ ಗ್ರಾಮದಲ್ಲಿ. ಕ್ರಸ್ನೋಯಾರ್ಕ್ ನಗರದಿಂದ ಆಗ್ನೇಯಕ್ಕೆ ಎಂಬತ್ತು ಕಿಲೊಮೀಟರ್ ದೂರದಲ್ಲಿರುವ ಈ ಗ್ರಾಮದಲ್ಲಿ ಜನಸಂಖ್ಯೆ ಬಹು ವಿರಳವಾಗಿದೆ. ಚದರ ಕಿಲೋಮೀಟರ್‌ಗೆ ಮೂರು ಜನರಿದ್ದಾರೆ. ಇಂಥ ಊರಿನಲ್ಲಿ ಅಪರೂಪದ ಮನೆಯೊಂದನ್ನು ಸೃಷ್ಟಿಸಿರುವುದು ಓಲ್ಗಾ ಕೋಸ್ಟಿನಾ ಎಂಬ ಮಹಿಳೆ.
ಉದ್ಯೋಗದಿಂದ ನಿವೃತ್ತರಾಗಿರುವ ಓಲ್ಗಾ, ಒಮ್ಮೆ ಸಮೀಪದ ಟೈಗಾದ ಕಾಡುಪ್ರದೇಶಕ್ಕೆ ಹೋಗಿದ್ದರು. ಅಲ್ಲಿ ವಿಹಾರಕ್ಕೆ ಬರುವ ಪ್ರವಾಸಿಗರು ಎಸೆದುಹೋದ ಸಾವಿರಾರು ಪ್ಲಾಸ್ಟಿಕ್ ಬಾಟಲಿಗಳತ್ತ ಅವರ ಲಕ್ಷÂ ಹರಿಯಿತು. ಪರಿಸರವನ್ನು ಕೆಡಿಸುವ ಈ ಬಾಟಲಿಗಳ ರಾಶಿಯನ್ನು ಕಂಡು ದುಃಖವೂ ಆಯಿತು. ಅವುಗಳನ್ನು ಬಳಸಿಕೊಂಡು ಏನಾದರೂ ಮಾಡಬೇಕು ಎಂದವರು ಯೋಚಿಸಿದರು.
ಕಸದಿಂದ ರಸ: ಓಲ್ಗಾ ಈ ಮುಚ್ಚಳಗಳನ್ನು ಸಂಗ್ರಹಿಸಲೆಂದೇ ಕಾಡಿನಲ್ಲಿ ಹಲವು ತಿಂಗಳು ತಿರುಗಾಟ ನಡೆಸಿದರು. ಮೂವತ್ತು ಸಾವಿರ ವರ್ಣರಂಜಿತ ಮುಚ್ಚಳಗಳು ಸಂಗ್ರಹವಾದಾಗ, ಇದರಿಂದ ಏನು ಮಾಡಬಹುದೆಂದು ಯೋಚಿಸಿದರು.
ಈ ಮುಚ್ಚಳಗಳನ್ನು ಬಳಸಿ, ತನ್ನ ಚಿಕ್ಕ ಮನೆಯ ಗೋಡೆಗಳನ್ನು ಕಲಾತ್ಮಕಗೊಳಿಸುವ ಯೋಚನೆ ಮೂಡಿತು. ಮರದಿಂದ ನಿರ್ಮಾಣವಾದ ಅವರ ಸರಳವಾದ ಮನೆಗೆ ಈ ಕಲಾತ್ಮಕ ವಿನ್ಯಾಸ ಅಚ್ಚಳಿಯದ ಶೋಭೆ ತಂದಿದೆ. ಸಾಂಪ್ರದಾಯಿಕ ಶೈಲಿಯ ಚಿತ್ರಗಳಿರುವ ಈ ಮನೆಯ ಗೋಡೆ ಇಂದು ಪ್ರವಾಸಿಗರ ದಂಡನ್ನು ಆಕರ್ಷಿಸುತ್ತಿದೆ.
* ಪ.ರಾಮಕೃಷ್ಣ ಶಾಸ್ತ್ರಿ