ಬೆಂಗಳೂರು: ನಗರದ ಪುರಾತನ ಕ್ರೈಸ್ತ ದೇವಾಲಯ ಸೇಂಟ್ ಪ್ಯಾಟ್ರಿಕ್ ಚರ್ಚ್‌ನ ಹುಟ್ಟು ಮತ್ತು ಬೆಳವಣಿಗೆಯ ಚಾರಿತ್ರಿéಕ ಹಿನ್ನೆಲೆಯ ದಾಖಲೆಗಳನ್ನು ಹೊಂದಿರುವ ಗ್ರೆಗೊರಿ ಡಿ ನಜರೇತ್ ಅವರ ಸಂಪಾದಕತ್ವದ “ಕಾಫಿ ಟೇಬಲ್ ಬುಕ್’ ಕೃತಿಯನ್ನು ಆರ್ಚ್ ಬಿಷಪ್ ರೆವರೆಂಡ್ ಡಾ.ಬರ್ನಾಡ್ ಮೊರಾಸ್ ಲೋಕಾರ್ಪಣೆ ಮಾಡಿದರು.
ಭಾನುವಾರ ನಗರದ ಬ್ರಿಗೇಡ್ ರಸ್ತೆಯಲ್ಲಿರುವ ಸೇಂಟ್ ಪ್ಯಾಟ್ರಿಕ್ ಚರ್ಚ್‌ನಲ್ಲಿ ನಡೆದ ಸಮಾರಂಭದಲ್ಲಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಆರ್ಚ್ ಬಿಷಪ್ ರೆವರೆಂಡ್ ಡಾ.ಬರ್ನಾಡ್ ಮೊರಾಸ್, “ಕಳೆದ ಒಂದು ವರ್ಷದಿಂದ ಚರ್ಚ್‌ನ 175ನೇ ವರ್ಷಾಚರಣೆ ಸಂಭ್ರಮ ಇಂದಿಗೆ ಮುಕ್ತಾಯವಾಗಿದೆ,’ ಎಂದು ಘೋಷಿಸಿದರು.
ನಗರದ ಹೃದಯ ಭಾಗದಲ್ಲಿ 175 ವರ್ಷಗಳ ಹಿಂದೆ ವಿಶಿಷ್ಟ ವಾಸ್ತುಶಿಲ್ಪದಿಂದ ನಿರ್ಮಾಣಗೊಂಡ ಸೇಂಟ್ ಪ್ಯಾಟ್ರಿಕ್ ಚರ್ಚ್‌ನ ಸಂಪೂರ್ಣ ಇತಿಹಾಸ, ಅಪರೂಪದ ಛಾಯಾಚಿತ್ರಗಳನ್ನು “ಕಾಫಿ ಟೇಬಲ್ ಬುಕ್’ ಒಳಗೊಂಡಿದೆ. ಇದೊಂದು ಐತಿಹಾಸಿಕ ಮಾಹಿತಿಯುಳ್ಳ ಶ್ರೇಷ್ಠ ಕೃತಿಯಾಗಿದೆ ಎಂದ ಅವರು, ಸೇಂಟ್ ಪ್ಯಾಟ್ರಿಕ್ ಚರ್ಚ್ ಇತಿಹಾಸ ಮಾತ್ರವಲ್ಲ, ಈ ಸಂಸ್ಥೆಯ ಸೇವೆಗಳು ಕೂಡ ಶ್ರೇಷ್ಠವಾಗಿವೆ. ನಿರ್ಗತಿಕರಿಗೆ, ಹಿರಿಯರಿಗೆ, ವಿದ್ಯಾರ್ಥಿಗಳಿಗೆ ಬಡಕುಟುಂಬದವರಿಗೆ ಸೇವೆ ಸಲ್ಲಿಸುತ್ತಿದೆ. ಸಂಸ್ಥೆಯ ಎಲ್ಲಾ ಸಮಿತಿಗಳು ಸೇವೆಯನ್ನು ಸಂಭ್ರಮದಿಂದಲೇ ನಿರ್ವಹಿಸಿವೆ ಎಂದು ಹೇಳಿದರು.
ಸೇಂಟ್ ಪ್ಯಾಟ್ರಿಕ್ ಚರ್ಚ್‌ನ ಧರ್ಮಗುರು ಫಾದರ್ ಸಿ. ಫ್ರಾನ್ಸಿಸ್, “ಈ ಚರ್ಚ್ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದರೂ, ಬ್ರಿಟಿಷರ ಸಹಕಾರವಿಲ್ಲದೆ ಐರಿಷ್ ಸೈನಿಕರ ದೇಣಿಗೆಯಿಂದ ತಲೆಎತ್ತಿತು. 1841ರಲ್ಲಿ ಐರ್ಲೆಂಡ್ ಮೂಲದ ರೋಮನ್ ಕೆಥೋಲಿಕ್ ಸೈನಿಕರಿಂದ ನಿರ್ಮಾಣಗೊಂಡ ಗೋಥಿಕ್ ಶೈಲಿಯಲ್ಲಿರುವ ಚರ್ಚ್ ಬೆಂಗಳೂರಿನ ಆಕರ್ಷಣೆಗಳಲ್ಲೊಂದು. 200 ಸೈನಿಕರಿಂದ ಸಂಗ್ರಹವಾದ 4 ಸಾವಿರದಲ್ಲಿ ಚರ್ಚ್ ನಿರ್ಮಾಣಗೊಂಡಿತ್ತು.
ಚರ್ಚ್‌ಗೆ ಐರ್ಲೆಂಡ್ನ್ ಸೇಂಟ್ ಪ್ಯಾಟ್ರಿಕ್ ಅವರ ಹೆಸರನ್ನೇ ಇರಿಸಲಾಗಿದೆ. 1846ರಲ್ಲಿ ನಿರ್ಮಾಣಗೊಂಡ ಚರ್ಚ್ 1890ರಲ್ಲಿ ನವೀಕರಣಗೊಂಡಿದೆ. ಈ ವೇಳೆ ಗೋಪುರವನ್ನು ಎರಡು ಪಟ್ಟು ಎತ್ತರಿಸಲಾಗಿದೆ. ಈ ಚರ್ಚ್ ನ್ಯೂಯಾರ್ಕ್‌ನ ಸೇಂಟ್ ಪ್ಯಾಟ್ರಿಕ್ ಕೆಥೆಡ್ರಲ್‌ಗೆ ಹೋಲುತ್ತದೆ. ಇದೀಗ 175 ವರ್ಷಾಚರಣೆಯನ್ನು ಪೂರ್ಣಗೊಳಿಸಿದೆ,’ ಎಂದರು.
“ಕಾಫಿ ಟೇಬಲ್ ಬುಕ್’ ಕೃತಿಯ ಮಾರಾಟದಿಂದ ಬಂದ ಹಣವನ್ನು ಕಡಿಸೇನಹಳ್ಳಿ ಗ್ರಾಮದಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಬಳಸಿಕೊಳ್ಳಲಾಗುವುದು. ಸೇಂಟ್ ಪ್ಯಾಟ್ರಿಕ್ ಚರ್ಚ್ ಆ ಗ್ರಾಮವನ್ನು ದತ್ತುಪಡೆಯಲಿದೆ. ನಿರ್ಗತಿಕರೊಂದಿಗೆ ದೇವರು ಇದ್ದಾನೆ. ನೆರವು ನೀಡುವವರು ಕೈಲಾದಷ್ಟು ಸಹಾಯ ಮಾಡಿದರೆ, ಬಡಕುಟುಂಬಗಳ ಅಭಿವೃದ್ಧಿಗೆ ಬಳಸಲಾಗುವುದು ಎಂದು ಹೇಳಿದರು.
ಮೋರಾಸ್ ಸಹಿಯುಳ್ಳ ಕೃತಿ 1.25ಲಕ್ಷಕ್ಕೆ ಮಾರಾಟ
“ಕಾಫಿ ಟೇಬಲ್ ಬುಕ್’ ಬಿಡುಗಡೆ ಬಳಿಕ ಆರ್ಚ್ ಬಿಷಪ್ ರೇ.ಡಾ.ಬರ್ನಾಡ್ ಮೊರಾಸ್ ಅವರ ಸಹಿಯುಳ್ಳ ಕೃತಿಯ ಹರಾಜು ನಡೆಯಿತು. ಸಭೆಯ ಫಾನ್ಸಿಸ್ ಪಿಂಟೋ ಎಂಬುವರು ಸುಮಾರು 1.25 ಲಕ್ಷ ರೂ.ಗೆ ಆ ಕೃತಿ ಪಡೆಯುವಲ್ಲಿ ಯಶಸ್ವಿಯಾದರು. ಒಂದು ಸಾವಿರ ಮುಖ ಬೆಲೆಯ ಕೃತಿಗಳನ್ನು ಭಾನುವಾರ ಕೇವಲ 600ರೂ.ಗಳಿಗೆ ಮಾರಾಟ ಮಾಡಲಾಯಿತು.