Advertisement

ಇಫಿ ಚಿತ್ರೋತ್ಸವದ ಇತಿಹಾಸವೇ ಆಸಕ್ತಿಕರ: ಎರಡನೇ ಉತ್ಸವಕ್ಕೆ ಕಾದದ್ದು ಬರೋಬ್ಬರಿ 9 ವರ್ಷ !

06:09 PM Nov 17, 2022 | ಅರವಿಂದ ನಾವಡ |

ಮೊದಲನೇ ಚಿತ್ರೋತ್ಸವ ಸಿನಿಮಾಸಕ್ತರಲ್ಲಿ ಆಸಕ್ತಿಯ ಕಿಡಿ ಹೊತ್ತಿಸಿದರೂ ಅದರ ಕಾವು ಉಳಿಸಿಕೊಳ್ಳಲು ಒಂಬತ್ತು ವರ್ಷ ಹೆಣಗಾಡಬೇಕಾಯಿತು. 1952 ರ ಬಳಿಕ 1961 ರಲ್ಲಿ ಎರಡನೇ ಚಿತ್ರೋತ್ಸವ ನಡೆಯಿತು. ಮೂರನೇ ಚಿತ್ರೋತ್ಸವವೂ ಕೂಡಲೇ ಬರಲಿಲ್ಲ !
*
ಅರವಿಂದ ನಾವಡ
ಗೋವಾದ ರಾಜಧಾನಿಯಲ್ಲಿ 53ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವೇದಿಕೆ ಸಜ್ಜಾಗಿದೆ. ಏಷ್ಯಾದಲ್ಲೇ ಪ್ರಮುಖ ಹಾಗೂ ದೊಡ್ಡ ಚಿತ್ರೋತ್ಸವವಿದು. ರಾಷ್ಟ್ರದ ವಾಣಿಜ್ಯ ನಗರಿಯಲ್ಲಿ ಹುಟ್ಟಿ ದೇಶವೆಲ್ಲಾ ಸುತ್ತಾಡಿ ಈಗ ಪಣಜಿಯಲ್ಲಿ ಕುಳಿತಿರುವ ಇಫಿ ಚಿತ್ರೋತ್ಸವದ ಇತಿಹಾಸವೇ ಆಸಕ್ತಿಕರವಾದುದು.

Advertisement

ಕೇಂದ್ರ ಸರಕಾರ 1952ರಲ್ಲಿ ಚಿತ್ರಜಗತ್ತನ್ನು ಪ್ರೋತ್ಸಾಹಿಸುವ ಹಾಗೂ ಜಗತ್ತಿನ ಚಿತ್ರಪ್ರಪಂಚವನ್ನು ನಮ್ಮಲ್ಲಿನ ಸಿನಿಮಾಸಕ್ತರಿಗೆ ತೆರೆಯುವ ಉದ್ದೇಶದಿಂದ ಆರಂಭಿಸಿತು. ವಸುದೈವ ಕುಟುಂಬಕಮ್‌ ಎಂಬುದು ಇದರ ಹಿಂದಿದ್ದ ಪರಿಕಲ್ಪನೆ.

1952ರ ಜನವರಿ 24ರಿಂದ ಫೆಬ್ರವರಿ 1ರವರೆಗೆ ನಡೆದದ್ದು ಮೊದಲ ಚಿತ್ರೋತ್ಸವ. ವಾಣಿಜ್ಯ ನಗರಿ ಹಾಗೂ ಚಿತ್ರ ನಗರಿ ಮುಂಬಯಿಯಲ್ಲಿ. ಉದ್ಘಾಟಿಸಿದ್ದು ದೇಶದ ಮೊದಲ ಪ್ರಧಾನಿ ಪಂಡಿತ್‌ ಜವಾಹರಲಾಲ್‌ ನೆಹರು. ಸುಮಾರು 40 ಕಥಾ ಹಾಗೂ 100 ಕಿರುಚಿತ್ರಗಳನ್ನು ಪ್ರದರ್ಶಿಸಲಾಯಿತು. ಅದೇ ವರ್ಷ ಈ ಚಿತ್ರೋತ್ಸವದ ರಥ, ಮದ್ರಾಸು, ದಿಲ್ಲಿ, ಕೋಲ್ಕತ್ತಾ, ತಿರುವನಂತಪುರಂಗೆ ಚಲಿಸಿತು. ದಿಲ್ಲಿಯಲ್ಲಿ ಅದೇ ವರ್ಷ ಫೆಬ್ರವರಿ 21ಕ್ಕೆ ಪ್ರಧಾನಿ ನೆಹರೂ ಉದ್ಘಾಟಿಸಿದ್ದರು.

ಮೊದಲ ಚಿತ್ರೋತ್ಸವ ಒಂದು ಬಗೆಯಲ್ಲಿ ಸಾದಾ ಸರಳ ಚಿತ್ರೋತ್ಸವ. ಅದರಲ್ಲಿ ಸ್ಪರ್ಧೆ ಎಂಬುದು ಇರಲಿಲ್ಲ, ಕೇವಲ ಚಲನಚಿತ್ರಗಳ ಪ್ರದರ್ಶನವಷ್ಟೇ. ಆದರೂ ಅಮೆರಿಕ ಸೇರಿದಂತೆ 23 ದೇಶಗಳ ಚಿತ್ರಗಳ ಪ್ರದರ್ಶನವಾಗಿತ್ತು. ಹಿಂದಿಯ ’ಆವಾರ’, ತೆಲುಗಿನ ’ಪಾತಾಳ ಭೈರವಿ’, ಮರಾಠಿಯ ’ಅಮರ್‌ ಭೂಪಾಲಿ’ ಹಾಗೂ ಬಂಗಾಳಿಯ ’ ಬಾಬ್ಲಾ’ ಚಿತ್ರಗಳೂ ಪ್ರದರ್ಶನಗೊಂಡಿದ್ದವು.

Advertisement

ಇವುಗಳೊಂದಿಗೆ ಭಾರತದ ಹೆಸರಾಂತ ಸಿನಿಮಾಕರ್ತರ ಮೇಲೆ ಪ್ರಭಾವ ಬೀರಿದ ಬೈಸಿಕಲ್‌ ಥೀವ್ಸ್‌ ಸೇರಿದಂತೆ ಮಿರಾಕಲ್‌ ಇನ್‌ ಮಿಲನ್‌, ರೋಮ್‌ ಓಪನ್‌ ಸಿಟಿ, ಯುಕಿವರಿಸು, ದಿ ಡ್ಯಾನ್ಸಿಂಗ್‌ ಫ್ಲೀಸ್‌, ದಿ ರಿವರ್‌, ದಿ ಫಾಲ್ ಆಫ್‌ ಬರ್ಲಿನ್‌ ನಂಥ ಚಿತ್ರಗಳು ಪ್ರದರ್ಶಿತವಾಗಿದ್ದವು.

ಎರಡನೇ ಚಿತ್ರೋತ್ಸವಕ್ಕೆ ಒಂಬತ್ತು ವರ್ಷ
ಹೌದು. ಮೊದಲನೇ ಚಿತ್ರೋತ್ಸವ ಸಾಕಷ್ಟು ಸಿನಿಮಾಸಕ್ತರನ್ನು ಆಕರ್ಷಿಸಿತು. ಜಗತ್ತಿನ ಚಿತ್ರಗಳನ್ನು ಒಂದೇ ಕಡೆ ವೀಕ್ಷಿಸುವ ಅವಕಾಶ. ಆದರೆ ಇಂಥದೊಂದು ಮತ್ತೊಂದು ಅವಕಾಶಕ್ಕೆ ಒಂಬತ್ತು ವರ್ಷಗಳು ಕಾಯಬೇಕಾಯಿತು. ಹಾಗಾಗಿ ಎರಡನೇ ಚಿತ್ರೋತ್ಸವ [ಇಫಿ] ನಡೆದದ್ದು 1961ರಲ್ಲಿ. ಅಕ್ಟೋಬರ್‌, ನವೆಂಬರ್‌ನಲ್ಲಿ ನಡೆದದ್ದು ದಿಲ್ಲಿಯಲ್ಲಿ. ಈ ಉತ್ಸವದಲ್ಲೂ ಸ್ಪರ್ಧೆ ಇರಲಿಲ್ಲ.

ಮತ್ತೆ ನಾಲ್ಕು ವರ್ಷಗಳ ಬಳಿಕ ಮೂರನೇ ಚಿತ್ರೋತ್ಸವ ದಿಲ್ಲಿಯಲ್ಲೇ 1965ರ ಜನವರಿಯಲ್ಲಿ ನಡೆಯಿತು. ನಾಲ್ಕು [1969] ಹಾಗೂ ಐದನೇ [1974] ಬರೋಬ್ಬರಿ ನಾಲ್ಕು ವರ್ಷಗಳ ಅಂತರದಲ್ಲಿ ದಿಲ್ಲಿಯಲ್ಲೇ ನಡೆಯಿತು. ಆದರೆ ಐದನೇ ವರ್ಷ ಮೊದಲನೇ ವರ್ಷದ ಪರಂಪರೆಯನ್ನು ಮರು ಆರಂಭಿಸಿತು. ದಿಲ್ಲಿಯಲ್ಲಿ ನಡೆಯುವುದಕ್ಕೆ ಅಂತಾರಾಷ್ಟ್ರೀಯ ಚಿತ್ರೋತ್ಸವವೆಂದು ಕರೆದು, ಅದೇ ವರ್ಷ ಕೋಲ್ಕತ್ತಾ ಹಾಗೂ ಮುಂಬಯಿಯಲ್ಲಿ ಫಿಲ್ಮೋತ್ಸವವನ್ನು ಆಯೋಜಿಸಿತು. ಮೂರನೇ ವರ್ಷದಿಂದ ಸ್ಪರ್ಧಾತ್ಮಕ ವಿಭಾಗ ಸೇರ್ಪಡೆಯಾಯಿತು. ಆದರೆ ಈ ವಿಭಾಗ ಫಿಲ್ಮೋತ್ಸವಕ್ಕೆ ಅನ್ವಯಿಸಲಾಗುತ್ತಿರಲಿಲ್ಲ.

ಆರಕ್ಕೆ ಹಲವು ಮಾದರಿ
ಆರನೇ ಚಿತ್ರೋತ್ಸವದ [1977]ಹೊತ್ತಿನಲ್ಲಿ ಮತ್ತೊಂದು ಮಾದರಿಯ ಪ್ರಯೋಗಕ್ಕೆ ಇಫಿ ಮುಂದಾಯಿತು. ಪ್ರತೀ ವರ್ಷವೂ ಚಿತ್ರೋತ್ಸವ ಆಯೋಜನೆಗೊಳ್ಳತೊಡಗಿತು. ಜತೆಗೆ ಚಿತ್ರೋತ್ಸವ ದಿಲ್ಲಿಯಲ್ಲೇ ನಡೆದರೂ ಫಿಲ್ಮೋತ್ಸವವನ್ನು ಒಂದೊಂದು ವರ್ಷ ಒಂದು ನಗರದಲ್ಲಿ ನಡೆಸಲು ಮುಂದಾಯಿತು. ಅಷ್ಟೇ ಅಲ್ಲ. ಜನವರಿ ತಿಂಗಳಿಗೆ ಬಹುತೇಕ ತಿಂಗಳು ನಿಗದಿಯಾಯಿತು. ಆರನೇ ವರ್ಷ ಮದರಾಸಿಗೆ ಒಲಿದರೆ, ಏಳನೇ ವರ್ಷ ಬೆಂಗಳೂರಿಗೆ ಫಿಲ್ಮೋತ್ಸವ ಬಂದಿತು. ಎಂಟು, ಒಂಬತ್ತು, ಹತ್ತು, ಹನ್ನೊಂದರ ಹೊತ್ತಿಗೆ ಈ ಫಿಲ್ಮೋತ್ಸವ ಕೋಲ್ಕತ್ತಾ, ಮುಂಬಯಿ, ಹೈದರಾಬಾದ್‌, ತಿರುವನಂತಪುರಂಗಳಲ್ಲಿ ನಡೆಯಿತು. ಫಿಲ್ಮೋತ್ಸವ ಮಾದರಿ ನಡೆದದ್ದು ಇದೇ ಕೊನೆಯದ್ದು.

ಹನ್ನೆರಡನೇ ಚಿತ್ರೋತ್ಸವ ಮತ್ತೂ ವಿಶೇಷ
ಹನ್ನೆರಡನೇ ಚಿತ್ರೋತ್ಸವ [1989] ದಿಲ್ಲಿಯಲ್ಲಿ ನಡೆಯಿತಾದರೂ, ತದನಂತರ ಪ್ರತಿ ವರ್ಷ ಚಲನಚಿತ್ರೋತ್ಸವ ಬೇರೆ ಬೇರೆ ನಗರಗಳಿಗೆ ಸುತ್ತಾಡತೊಡಗಿತು. ಹದಿಮೂರನೆಯದ್ದು ಕೋಲ್ಕತ್ತಾದಲ್ಲಿ ನಡೆದರೆ, ಹದಿನಾಲ್ಕನೆಯದ್ದು ಮುಂಬಯಿ ಹಾಗೂ ಹದಿನೈದನೇ ಚಿತ್ರೋತ್ಸವ ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಈ ವರ್ಷದ ಬಳಿಕ 1993ರಿಂದ 24ನೇ ಚಲನಚಿತ್ರೋತ್ಸವವೆಂದು ಕರೆಯಲಾಯಿತು.

ಅದುವರೆಗೂ ನಡೆದ ಫಿಲ್ಮೋತ್ಸವಗಳನ್ನೂ ಚಿತ್ರೋತ್ಸವಗಳೆಂದು ಪರಿಗಣಿಸಿ 24ನೇ ಚಲನಚಿತ್ರೋತ್ಸವವನ್ನು ದಿಲ್ಲಿಯಲ್ಲೇ ನಡೆಸಲಾಯಿತು. ಅದಾದ ಬಳಿಕ 34ನೇ ಚಿತ್ರೋತ್ಸವದವರೆಗೆ ಮುಂಬಯಿ, ಹೈದರಾಬಾದ್‌, ತಿರುವನಂತಪುರಂ ಹಾಗೂ ಕೋಲ್ಕತ್ತಾದಲ್ಲಿ ತಲಾ ಒಂದು ಬಾರಿ ನಡೆದರೆ, ಉಳಿದೆಲ್ಲವೂ ದಿಲ್ಲಿಯಲ್ಲೇ ನಡೆದವು.

ಶಾಶ್ವತ ನಗರಿಗೆ ಚಿತ್ರೋತ್ಸವ
35ನೇ ಚಿತ್ರೋತ್ಸವದಿಂದ ಈ ಚಿತ್ರೋತ್ಸವ ರಥ ಗೋವಾದ ಪಣಜಿಗೆ ಬಂದು ಕುಳಿತುಕೊಂಡಿತು. ಗೋವಾವನ್ನೇ ಚಿತ್ರೋತ್ಸವದ ಶಾಶ್ವತ ತಾಣವನ್ನಾಗಿ ಅಂಗೀಕರಿಸಲಾಯಿತು. ಅದರಂತೆ ಈಗ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವವೆಂಬ ಹೆಸರಿನ ಪಕ್ಕದಲ್ಲಿ ಗೋವಾ ಸೇರಿಕೊಂಡಿತು.

ಈ ಮಧ್ಯೆ 27ನೇ ಚಿತ್ರೋತ್ಸವದಿಂದ ‘ಏಷ್ಯನ್‌ ಸಿನಿಮಾ ವಿಭಾಗ’ ಎಂಬುದು ಸ್ಪರ್ಧೆಗೆ ಸೇರಿಕೊಂಡಿತು. ಇದೆಲ್ಲದರ ಮಧ್ಯೆ 32ನೇ ಚಿತ್ರೋತ್ಸವ [ಬೆಂಗಳೂರು]ವೊಂದು ರದ್ದಾಯಿತು. ಉಳಿದಂತೆ ಯಾವುದೇ ಚಿತ್ರೋತ್ಸವ ಘೋಷಿತವಾದ ಮೇಲೆ ರದ್ದುಗೊಳ್ಳಲಿಲ್ಲ. ಈ 32ನೇ ಚಿತ್ರೋತ್ಸವದ ಬಳಿಕ ಮತ್ತೆ ತಿಂಗಳು ನಿಗದಿಯಲ್ಲಿ ಹೆಚ್ಚು ಕಡಿಮೆಯಾಯಿತು. ಆದರೆ ಈಗ ಪ್ರತೀ ವರ್ಷದ ನವೆಂಬರ್‌ ತಿಂಗಳ 20ರಿಂದ 28ರವರೆಗೆ ದಿನಾಂಕ ನಿಗದಿಯಾಗಿದೆ.
2021ರಲ್ಲಿ ಕೋವಿಡ್‌ ಕಾರಣಕ್ಕಾಗಿ ಚಿತ್ರೋತ್ಸವ ಹೈಬ್ರಿಡ್‌ ರೂಪ ಪಡೆಯಿತು. ವರ್ಚುವಲ್‌ ಹಾಗೂ ರೆಗ್ಯುಲರ್‌ ಎಂಬ ಎರಡೂ ಆಯ್ಕೆ ಸಿನಿಮಾಸಕ್ತರಿಗೆ ಲಭ್ಯವಾಯಿತು. ಸಾಮಾನ್ಯವಾಗಿ 10 ರಿಂದ 15 ಸಾವಿರ ಪ್ರತಿನಿಧಿಗಳು ಭಾಗವಹಿಸುವ ಚಿತ್ರೋತ್ಸವವಿದು. ಈ ವರ್ಷ ಕೋವಿಡ್‌ ರಗಳೆ ಸಂಪೂರ್ಣ ಕಳೆದಿರುವ ಕಾರಣ, ಮತ್ತೆ ಚಿತ್ರೋತ್ಸವಕ್ಕೆ ಹೊಸ ಕಳೆ ಬರುವ ಸಾಧ್ಯತೆ ಇದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next