ಬೆಂಗಳೂರು: ಸ್ವಾಧೀನ ಪತ್ರ (ಆಕ್ಯುಪೆನ್ಸಿ ಸರ್ಟಿಫಿಕೇಟ್) ಹೊಂದಿಲ್ಲದ ಬಾರ್ ಆಂಡ್ ರೆಸ್ಟೋರೆಂಟ್‌ಗಳು ಲೈವ್‌ಬ್ಯಾಂಡ್ ಚಟುವಟಿಕೆಗಳನ್ನು ನಿಲ್ಲಿಸುವಂತೆ ನಗರ ಪೊಲೀಸ್ ಆಯುಕ್ತರು ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಸೋಮವಾರ ಎತ್ತಿಹಿಡಿದಿದೆ.
ಈ ಸಂಬಂಧ ನಗರ ಪೊಲೀಸ್ ಆಯುಕ್ತರು ನೀಡಿದ ನೋಟಿಸ್ ರದ್ದುಗೊಳಿಸಬೇಕು ಎಂದು ಕೋರಿ ರೆಸಿಡೆನ್ಸಿ ರಸ್ತೆಯ ನರ್ತಕಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಸೇರಿದಂತೆ ನಗರದ ಹಲವು ಬಾರ್ ಅಂಡ್ ರೆಸ್ಟೋರೆಂಟ್‌ಗಳು ಸಲ್ಲಿಸಿದ್ದ ವಿಚಾರಣೆ ನಡೆಸಿದ ನ್ಯಾ. ಅರವಿಂದ ಕುಮಾರ್ ಅವರಿದ್ದ ಏಕಸದಸ್ಯಪೀಠ, ಸ್ವಾಧೀನಪತ್ರ ಹೊಂದಿರದಿದ್ದರೂ ಲೈವ್‌ಬ್ಯಾಂಡ್ ಚಟುವಟಿಕೆ ಮುಂದುವರಿಸಲು ಅನುಮತಿ ನೀಡಬೇಕು ಎಂಬ ಅರ್ಜಿದಾರರ ಮನವಿಯನ್ನು ಇದೇ ವೇಳೆ ತಳ್ಳಿಹಾಕಿತು.
ಜೊತೆಗೆ ಕಾನೂನಿನ ಅನ್ವಯ 1977ರ ನಂತರ ನಿರ್ಮಾಣಗೊಂಡಿರುವ ಕಟ್ಟಡಗಳು ಸ್ವಾಧೀನಾನುಭವ ಪತ್ರ ಪಡೆಯುವುದು ಕಡ್ಡಾಯ. ಅದರಂತೆ ಪೊಲೀಸ್ ಆಯುಕ್ತರ ಸೂಚನೆಯಂತೆ ಸ್ವಾಧೀನಾನುಭವ ಪತ್ರ ಪಡೆದುಕೊಂಡು ಲೈವ್ ಬ್ಯಾಂಡ್ ಚಟುವಟಿಕೆ ಮುಂದುವರಿಸುವಂತೆ ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ನ್ಯಾಯಪೀಠ ನಿರ್ದೇಶನ ನೀಡಿತು.
ಅಲ್ಲದೆ, ಕರ್ನಾಟಕ ಪೌರ ನಿಗಮಗಳ ಕಾಯ್ದೆ-1976 ಪ್ರಕಾರ, 1977ರ ನಂತರ ನಿರ್ಮಾಣಗೊಂಡ ಎಲ್ಲ ಕಟ್ಟಡಗಳು ಸಂಬಂಧಪಟ್ಟ ಅಧಿಕಾರಿಯಿಂದ ಸ್ವಾಧೀನಾನುಭವ ಪತ್ರ ಪಡೆಯುವುದು ಕಡ್ಡಾಯ. ಅದರಂತೆ ಕಟ್ಟಡಗಳಿಗೆ ಸ್ವಾಧೀನಾನುಭವ ಪತ್ರ ನೀಡುವುದು ಸಂಬಂಧ ಪಟ್ಟ ಇಲಾಖೆಗೆ ಬಿಟ್ಟದ್ದು. ಈ ವಿಚಾರದಲ್ಲಿ ಹೈಕೋರ್ಟ್ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ನ್ಯಾಯಪೀಠ ಹೇಳಿತು.
ಜತೆಗೆ, 1977ರ ನಂತರ ನಿರ್ಮಾಣ ಮಾಡಿದ ಕಟ್ಟಡಗಳಲ್ಲಿ ಲೈವ್ ಬಾಂಡ್ ನಡೆಸುತ್ತಿದ್ದರೆ, ಆ ಕಟ್ಟಡಗಳ ಮಾಲೀಕರು ಸಂಬಂಧಪಟ್ಟ ಅಧಿಕಾರಿಯಿಂದ ಸ್ವಾಧೀನಾನುಭವ ಪತ್ರವನ್ನು ಪಡೆಯುವುದು ಕಡ್ಡಾಯ. ಅದರಂತೆ ಅರ್ಜಿದಾರರು ಸ್ವಾಧೀನಾನುಭವ ಪತ್ರ ಕೋರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು.
ನಂತರ ಅಧಿಕಾರಿಯಿಂದ ನೀಡುವ ಸ್ವಾಧೀನಾನುಭವ ಪತ್ರವನ್ನು ಪೊಲೀಸರಿಗೆ ಸಲ್ಲಿಸಿ, ಲೈವ್‌ಬ್ಯಾಂಡ್ ನಡೆಸಲು ಅನುಮತಿ ಕೋರಬೇಕು. ಪೊಲೀಸರು ಆ ಅರ್ಜಿಗಳನ್ನು 30 ದಿನಗಳಲ್ಲಿ ಪರಿಗಣಿಸಬೇಕು. ಅಲ್ಲಿಯವರಿಗೆ ಅರ್ಜಿದಾರರು ಲೈವ್ ಬ್ಯಾಂಡ್ ಚಟುವಟಿಕೆ ನಡೆಸಬಾರದು ಎಂದು ಸೂಚಿಸಿದ ಹೈಕೋರ್ಟ್ ಅರ್ಜಿ ಇತ್ಯರ್ಥಪಡಿಸಿತು.