Advertisement

ಕೆಪಿಎಸ್‌ಸಿ ಅಕ್ರಮ ನೇಮಕ ಪ್ರಕರಣ ವಿಚಾರಣೆಗೆ ಹೈಕೋರ್ಟ್‌ ತಡೆಯಾಜ್ಞೆ

12:23 PM Apr 11, 2017 | Team Udayavani |

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ 2011ನೇ ಸಾಲಿನಲ್ಲಿ ನಡೆಸಿದ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಗೋನಾಳ್‌ ಭೀಮಪ್ಪ ವಿರುದ್ಧ ನಡೆಯುತ್ತಿರುವ ವಿಚಾರಣೆಗೆ ಹೈಕೋರ್ಟ್‌ ಸೋಮವಾರ ತಡೆಯಾಜ್ಞೆ ನೀಡಿದೆ.

Advertisement

ಅಕ್ರಮ ನೇಮಕಾತಿ ಕುರಿತಂತೆ  ತಮ್ಮ ವಿರುದ್ಧ ಬೆಂಗಳೂರಿನ ಅಧೀನ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ರದ್ದುಪಡಿಸುವಂತೆ ಕೋರಿ ಗೋನಾಳ್‌ ಭೀಮಪ್ಪ  ಹೈಕೋರ್ಟ್‌ನ ಮೊರೆ ಹೋಗಿದ್ದರು. ಈ ಅರ್ಜಿ ವಿಚಾರಣೆ  ನಡೆಸಿದ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಅವರಿದ್ದ ಏಕಸದಸ್ಯ ಪೀಠ, ಮಧ್ಯಂತರ ಆದೇಶದಲ್ಲಿ ತಡೆಯಾಜ್ಞೆ ನೀಡಿ ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೊಳಿಸಿ ಏ.17ಕ್ಕೆ ವಿಚಾರಣೆ ಮಂದೂಡಿತು.

ಅರ್ಜಿದಾರರ ಪರವಾಗಿ ವಾದಿಸಿದ ವಕೀಲರು, ಗೋನಾಳ್‌ ಭೀಮಪ್ಪ  ಕೆಪಿಎಸ್‌ಸಿ ಅಧ್ಯಕ್ಷರಾಗಿಧಿದ್ದರಿಂದ ಅವರ ವಿರುದ್ಧದ ವಿಚಾರಣೆಗೆ ರಾಷ್ಟ್ರಪತಿಗಳ ಪೂರ್ವಾನುಮತಿ ಅಗತ್ಯವಿತ್ತು. ಆದರೆ ಈ ಪ್ರಕರಣದಲ್ಲಿ ರಾಜ್ಯಪಾಲರೇ ಪೂರ್ವಾನುಮತಿ ನೀಡಿರುವುದು ಕಾನೂನು ಬಾಹಿರವಾಗಿದೆ. ಜತೆಗೆ ಗೋನಾಳ್‌ ಭೀಮಪ್ಪ ವಿರುದ್ಧದ ದೂರುಗಳನ್ನು ಪ್ರಜ್ಞಾಪೂರ್ವಕ ಅಪರಾಧ ಕೃತ್ಯ ಎಂದು ಪರಿಗಣಿಸಿ ಅಧೀನ ನ್ಯಾಯಾಲಯ ವಿಚಾರಣೆ ನಡೆಸುತ್ತಿರುವ ಕ್ರಮವೂ ತಪ್ಪಾಗಿದೆ ಎಂದು ನ್ಯಾಯಾಲಯದ ಗಮನಸೆಳೆದರು.

ಈ ವಾದ ಪುರಸ್ಕರಿಸಿದ ನ್ಯಾಯಾಲಯ, ಗೋನಾಳ್‌ ಭೀಮಪ್ಪ ವಿರುದ್ಧದ ವಿಚಾರಣೆಗೆ ತಡೆಯಾಜ್ಞೆ ನೀಡಿತು. ಹಾಗೇ ಈ ಅರ್ಜಿ ಸಂಬಂಧ ವಿಧಾನಸೌಧ ಪೊಲೀಸ್‌ ಠಾಣೆ ಹಾಗೂ ಕರ್ನಾಟಕ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಸೇವಾ ನಿಯಮಗಳು) ಇಲಾಖೆಯ ಉಪ ಕಾರ್ಯದರ್ಶಿಗೆ ನೋಟಿಸ್‌ ಜಾರಿಗೊಳಿಸಿತು.

Advertisement

Udayavani is now on Telegram. Click here to join our channel and stay updated with the latest news.

Next