Advertisement

ವರ್ಗಾವಣೆ ದೊಡ್ಡ ದಂಧೆ

06:00 AM Nov 06, 2018 | Team Udayavani |

ಬೆಂಗಳೂರು: ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ರಾಜ್ಯ ಸರ್ಕಾರಕ್ಕೆ “ತಪರಾಕಿ’ ಹಾಕಿರುವ ಹೈಕೋರ್ಟ್‌, ವರ್ಗಾವಣೆ ಅನ್ನುವುದು ಸರ್ಕಾರದಲ್ಲಿ ದೊಡ್ಡ ದಂಧೆಯಾಗಿ ಬಿಟ್ಟಿದೆ. ವರ್ಗಾವಣೆಯ ಬೇಕಾಬಿಟ್ಟಿ ವ್ಯವಹಾರಗಳಿಂದಾಗಿ ಅಧಿಕಾರಿಗಳು, ಮಂತ್ರಿಗಳು ಹುದ್ದೆಗಳನ್ನು ಬಿಕರಿಗೆ ಇಟ್ಟಿದ್ದಾರೆಂದು ತೀವ್ರ ಅಕ್ರೋಶ ವ್ಯಕ್ತಪಡಿಸಿತು.

Advertisement

ವಲಯ ಅರಣ್ಯಾಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದ ಅರ್ಜಿಯೊಂದರ ವಿಚಾರಣೆ ನಡೆಸಿದ ನ್ಯಾ. ಎಚ್‌.ಜಿ. ರಮೇಶ್‌ ಹಾಗೂ ನ್ಯಾ. ಅಶೋಕ್‌ ಜಿ. ನಿಜಗಣ್ಣನವರ್‌ ಅವರಿದ್ದ ವಿಭಾಗೀಯ ನ್ಯಾಯಪೀಠ, ವರ್ಗಾವಣೆ ನೀತಿ, ಪ್ರಕ್ರಿಯೆ ಹಾಗೂ ಬೆಳವಣಿಗೆಗಳ ಬಗ್ಗೆ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಲ್ಲದೇ “ಈ ವರ್ಗಾವಣೆ ದಂಧೆ ಬಗ್ಗೆ ರಾಜ್ಯಪಾಲರು ಸಮಗ್ರ ಮಾಹಿತಿ ಪಡೆದು, ರಾಷ್ಟ್ರಪತಿಗಳಿಗೆ ಕಳಿಸಬೇಕು. ರಾಷ್ಟ್ರಪತಿಗಳು ಸರ್ಕಾರದ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗಬೇಕಾಗುತ್ತೇನೋ ಎಂದು ಮೌಖೀಕ ಅಭಿಪ್ರಾಯ ವ್ಯಕ್ತಪಡಿಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರ ಈರಣ್ಣ ಯಾದಗಿರಿಯ ವಲಯ ಅರಣ್ಯಾಧಿಕಾರಿಯಾಗಿದ್ದು, ಇವರ ಸ್ಥಾನಕ್ಕೆ ಮತ್ತೂಬ್ಬರನ್ನು ವರ್ಗಾವಣೆ ಮಾಡಲಾಗಿದೆ. ಆದರೆ, ಈರಣ್ಣ ಅವರಿಗೆ ಬೇರೊಂದು ಸ್ಥಳ ತೋರಿಸಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಹೇಳ್ಳೋರು, ಕೇಳ್ಳೋರು ಇಲ್ಲ
ಅರ್ಜಿದಾರರ ಪರ ವಕೀಲರ ಈ ಮಾತಿನಿಂದ ಸಿಟ್ಟಾದ ನ್ಯಾ. ಎಚ್‌.ಜಿ. ರಮೇಶ್‌, “ಸರ್ಕಾರಕ್ಕೆ ಹೇಳ್ಳೋರು, ಕೇಳ್ಳೋರು ಇಲ್ಲದಂತಾಗಿದೆ. ಬೇಕಾಬಿಟ್ಟಿ, ಕಾನೂನುಬಾಹಿರ ವರ್ಗಾವಣೆ ಸುಗ್ಗಿಯಾಗಿ ಪರಿಣಮಿಸಿದೆ. ವರ್ಗಾವಣೆ ವಿಚಾರದಲ್ಲಂತೂ ಸರ್ಕಾರಕ್ಕೆ ಎಚ್ಚರಿಕೆ ನೀಡಿ ಹೈಕೋರ್ಟ್‌ ಸುಸ್ತಾಗಿ ಹೋಗಿದೆ. ಆದರೆ, ಇನ್ನು ಮುಂದೆ ಇಂತಹದ್ದನ್ನು ಸಹಿಸಲು ಸಾಧ್ಯವಿಲ್ಲ. ವರ್ಗಾವಣೆ ನಿಯಮಗಳನ್ನು ಸಮಗ್ರವಾಗಿ ಪರಿಶೀಲಿಸುವಂತೆ ರಾಜ್ಯಪಾಲರನ್ನು ಕೋರಿಕೊಳ್ಳಲಾಗುವುದು, ರಾಜ್ಯಪಾಲರು ಕಳಿಸಿದ ಮಾಹಿತಿ ಆಧರಿಸಿ ರಾಜ್ಯ ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳುವ ಅನಿವಾರ್ಯತೆ ಬಗ್ಗೆ ರಾಷ್ಟ್ರಪತಿಗಳಿಗೆ ಮನವರಿಕೆ ಮಾಡಿಕೊಡಬೇಕೆಂದು ನ್ಯಾಯಮೂರ್ತಿಗಳು ಮೌಖೀಕವಾಗಿ ಹೇಳಿದರು.

ವಿಚಾರಣೆ ನಡೆಸಿದ ನ್ಯಾಯಪೀಠ, ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿರುವ ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಈರಣ್ಣ ಅವರ ಜಾಗಕ್ಕೆ ವರ್ಗಾವಣೆಗೊಂಡಿರುವ ಹುಮನಾಬಾದ ವಲಯ ಅರಣ್ಯಾಧಿಕಾರಿ ಬಸವರಾಜ್‌ ಎಸ್‌. ಡಾಂಗೆ ಅವರಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿ, ವಿಚಾರಣೆ ಮುಂದೂಡಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next