Advertisement

ಎಸಿಬಿ ತನಿಖೆ ಆದೇಶ ಪ್ರಶ್ನಿಸಿ ಹೈಕೋರ್ಟ್‌ ಮೊರೆ

12:34 PM Mar 07, 2018 | |

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲು ಅಕ್ರಮಗಳ ಆರೋಪ ಕುರಿತು ತಮ್ಮ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ತನಿಖೆಗೆ ಆದೇಶಿಸಿರುವ ರಾಜ್ಯ ಸರ್ಕಾರದ ಕ್ರಮ ಕಾನೂನು ಬಾಹಿರ ಎಂದು ಆಕ್ಷೇಪಿಸಿ ಕಾರಾಗೃಹ ಇಲಾಖೆ ನಿವೃತ್ತ ಡಿಜಿಪಿ ಎಚ್‌.ಎನ್‌ ಸತ್ಯನಾರಾಯಣ ರಾವ್‌ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

Advertisement

ಈ ಅರ್ಜಿ ವಿಚಾರಣೆಯನ್ನು ಮಂಗಳವಾರ ನಡೆಸಿದ ನ್ಯಾ. ವಿನೀತ್‌ ಕೊಠಾರಿ ಅವರಿದ್ದ ಏಕಸದಸ್ಯ ಪೀಠ, ಜೈಲು ಅಕ್ರಮ ಹಾಗೂ ಶಶಿಕಲಾಗೆ ವಿಶೇಷ ಸೌಲಭ್ಯ ಕಲ್ಪಿಸಿದ ಆರೋಪ ಕುರಿತು ನಿವೃತ್ತ ಐಎಎಸ್‌ ಅಧಿಕಾರಿ ವಿನಯ್‌ ಕುಮಾರ್‌ ನೇತೃತ್ವದ ಸಮಿತಿ ರಾಜ್ಯ ಸರ್ಕಾರಕ್ಕೆ ನೀಡಿರುವ ವರದಿ ಹಾಗೂ ಎಸಿಬಿ ದಾಖಲಿಸಿರುವ ಎಫ್ಐಆರ್‌ ಪ್ರತಿ ಸಲ್ಲಿಸುವಂತೆ ಸತ್ಯನಾರಾಯಣರಾವ್‌ ಪರ ವಕೀಲರಿಗೆ ನಿರ್ದೇಶಿಸಿದೆ.

ವಿಚಾರಣೆ ವೇಳೆ ಸತ್ಯನಾರಾಯಣ ರಾವ್‌ ಪರ ವಕೀಲರು ವಾದ ಮಂಡಿಸಿ, ಕೇಂದ್ರ ಕಾರಾಗೃಹದಲ್ಲಿ ಸಜಾ ಕೈದಿಯಾಗಿರುವ ತಮಿಳುನಾಡಿನ  ಶಶಿಕಲಾ ಅವರಿಗೆ ವಿಶೇಷ ಸೌಲಭ್ಯ ನೀಡಲು ಅಂದಿನ ಡಿಜಿಪಿಯಾಗಿದ್ದ ಅರ್ಜಿದಾರರರು ಲಂಚ ಪಡೆದಿರುವ ಸಾಧ್ಯತೆಯಿದೆ ಎಂದು ಆಗಿನ ಡಿಐಜಿ ಡಿ.ರೂಪ ಆರೋಪಿಸಿದ್ದರು.  ಈ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ನಿವೃತ್ತ ಐಎಎಸ್‌ ಅಧಿಕಾರಿ ವಿನಯ್‌ಕುಮಾರ್‌ ನೇತೃತ್ವದ ಸಮಿತಿ ಅರ್ಜಿದಾರರಿಗೆ ಕ್ಲೀನ್‌ ಚಿಟ್‌ ನೀಡಿದೆ ಎಂದು ತಿಳಿಸಿದರು. 

ವಿನಯಕುಮಾರ್‌ ಅವರ ವರದಿ ಆಧರಿಸಿ ರಾಜ್ಯಸರ್ಕಾರ ಫೆ.26ರಂದು ಅರ್ಜಿದಾರರ ವಿರುದ್ಧ ಎಸಿಬಿ ತನಿಖೆಗೆ ಆದೇಶಿಸಿರುವುದು ಕಾನೂನು ಬಾಹಿರವಾಗಿದೆ. ಈ ಸಂಬಂಧ ಎಸಿಬಿ ಅರ್ಜಿದಾರರ ವಿರುದ್ಧ ಎಫ್ಐಆರ್‌ ದಾಖಲಿಸಿಕೊಂಡಿದ್ದು ಬಂಧಿಸುವ ಸಾಧ್ಯತೆಯಿದೆ. ಹೀಗಾಗಿ ಸರ್ಕಾರದ ಆದೇಶ ರದ್ದುಪಡಿಸುವಂತೆ ನ್ಯಾಯಪೀಠಕ್ಕೆ ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ವಿನಯ್‌ಕುಮಾರ್‌ ವರದಿ ಅರ್ಜಿದಾರರು ನೋಡಿದ್ದಾರೆಯೇ? ಕ್ಲೀನ್‌ ಚಿಟ್‌ ನೀಡಿದ್ದಾರೆ ಎಂದು ನಿಮಗೆ ಹೇಗೆ ಗೊತ್ತು ಎಂದು ಪ್ರಶ್ನಿಸಿತು. ಮಾಧ್ಯಮಗಳಲ್ಲಿ ಕ್ಲೀನ್‌ ಚಿಟ್‌ ಬಗ್ಗೆ ವರದಿಯಾಗಿದೆ ಎಂಬ ವಕೀಲರ ವಾದವನ್ನು ಪೀಠ ತಳ್ಳಿಹಾಕಿತು.

Advertisement

ಸರ್ಕಾರದ ಪರ ವಕೀಲ ಶ್ರೀನಿಧಿ, ವಿನಯ್‌ಕುಮಾರ್‌ ವರದಿ ಆಧರಿಸಿ ತನಿಖೆ ನಡೆಸುವಂತೆ ಎಸಿಬಿಗೆ ಸರ್ಕಾರ ಆದೇಶ ಮಾಡಿದೆ. ಈಗಾಗಲೇ ಹಲವರ ವಿರುದ್ಧ ಪ್ರಾಥಮಿಕ ತನಿಖೆ ಮುಂದುವರಿದಿದೆ ಎಂದು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು. ವಾದ -ಪ್ರತಿವಾದ ಆಲಿಸಿದ ನಾಯಾಲಯ ಪ್ರಕರಣದ ಕುರಿತ ವರದಿಗಳನ್ನು ನೀಡುವಂತೆ ಸತ್ಯ ನಾರಾಯಣ ಪರ ವಕೀಲರಿಗೆ ಸೂಚಿಸಿತು.

ಆರೋಪ ಆರೋಪವೇ ತಾನೆ!: ಅರ್ಜಿದಾರರು 30 ವರ್ಷಗಳ ಸೇವಾ ಅವಧಿಯಲ್ಲಿ ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದಾರೆ ಎಂಬ ವಕೀಲರ ಸಮಜಾಯಿಷಿಗೆ ಪ್ರತಿಕ್ರಿಯಿಸಿದ ನ್ಯಾಯಪೀಠ, 30 ವರ್ಷ ಸೇವೆಯಲ್ಲಿ ಒಂದು ಬಾರಿ ಆರೋಪ ಕೇಳಿ ಬಂದರೂ, ಆರೋಪವೇ ತಾನೇ ಎಂದಿತು.

ಸಿಎಂ ಸೂಚನೆ ಮೇರೆಗೆ ಶಶಿಕಲಾಗೆ ಸಿಂಗಲ್‌ ಬೆಡ್‌, ದಿಂಬು!
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮೇರೆಗೆ ಶಶಿಕಲಾಗೆ ಜೈಲಿನಲ್ಲಿ ಸಿಂಗಲ್‌ ಬೆಡ್‌, ದಿಂಬು ನೀಡಿದ್ದಾಗಿ ಕಾರಾಗೃಹ ಇಲಾಖೆ ನಿವೃತ್ತ ಡಿಜಿಪಿ ಎಚ್‌.ಎನ್‌ ಸತ್ಯನಾರಾಯಣ ರಾವ್‌ ತಿಳಿಸಿದ್ದಾರೆ. 2017ರ ಫೆಬ್ರವರಿಯಿಂದ ಸಜಾ ಕೈದಿಯಾಗಿರುವ ಶಶಿಕಲಾ, ತಮಗೆ ಕ್ಲಾಸ್‌ ಒನ್‌ ವಿಶೇಷ ಸೌಲಭ್ಯ ಒದಗಿಸುವಂತೆ ನೀಡಿದ್ದ ಮನವಿಯನ್ನು ಕಾರಾಗೃಹ ನಿಯಮಾವಳಿಗಳ ಪ್ರಕಾರ ನಿರಾಕರಿಸಲಾಗಿತ್ತು.

ಇದಾದ ಒಂದು ತಿಂಗಳ ಬಳಿಕ ಸಿಎಂ ಆಪ್ತ ಸಹಾಯಕ ವೆಂಕಟೇಶ್‌ ಕರೆ ಮಾಡಿ ಕೆಪಿಸಿ ಅತಿಥಿಗೃಹಕ್ಕೆ ಬರಲು ಹೇಳಿದ್ದರು. ಅಂದಿನ ಭೇಟಿಯಲ್ಲಿ ಶಶಿಕಲಾಗೆ ಒಂದು ಸಿಂಗಲ್‌ ಬೆಡ್‌ ಕಾಟ್‌, ತಲೆ ದಿಂಬು ನೀಡುವಂತೆ ಸೂಚಿಸಿದ್ದರು. ಈ ವಿಚಾರದಲ್ಲಿ ಸರ್ಕಾರಕ್ಕೆ ಅಧಿಕಾರವಿರುವುದರಿಂದ ಪಾಲಿಸಿದ್ದೇನೆ. ಅದನ್ನು ಹೊರತುಪಡಿಸಿ ಇನ್ನಿತರ ಯಾವುದೇ ವಿಶೇಷ ಸೌಲಭ್ಯಗಳನ್ನು ಶಶಿಕಲಾ ಅವರಿಗೆ ನೀಡಿರಲಿಲ್ಲ ಎಂದು ಸತ್ಯನಾರಾಯಣ ರಾವ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next