Advertisement

ಸ್ಪೀಕರ್‌ ಮುಂದೆ ಹಾಜರಾಗಲು ರವಿಬೆಳಗೆರೆಗೆ ಹೈಕೋರ್ಟ್‌ ಸೂಚನೆ

03:45 AM Jul 02, 2017 | |

ಬೆಂಗಳೂರು: ವಿಧಾನಸಭೆಯ ಹಕ್ಕು ಬಾಧ್ಯತಾ ಸಮಿತಿ ಸೂಚನೆ ಮೇರೆಗೆ ಪತ್ರಕರ್ತ ರವಿಬೆಳಗೆರೆ ಹಾಗೂ ಅನಿಲ್‌ ರಾಜ್‌ ಅವರಿಗೆ  ಸೋಮವಾರ ಸ್ಪೀಕರ್‌ ಮುಂದೆ ಹಾಜರಾಗಿ ಜ್ಞಾಪನಾಪತ್ರ ಸಲ್ಲಿಸಲು ಹೈಕೋರ್ಟ್‌ ಶನಿವಾರ ಸೂಚಿಸಿದೆ.

Advertisement

ಸ್ಪೀಕರ್‌ ರೂಲಿಂಗ್‌ ಪ್ರಶ್ನಿಸಿ ಇಬ್ಬರು ಪತ್ರಕರ್ತರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅಶೋಕ್‌ ಬಿ.ಹಿಂಚಿಗೇರಿ ಅವರಿದ್ದ ಏಕಸದಸ್ಯ ಪೀಠ ಈ ಸೂಚನೆ ನೀಡಿದೆ.

ವಿಚಾರಣೆ ಆರಂಭವಾಗುತ್ತಿದ್ದಂತೆ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎ.ಎಸ್‌.ಪೊನ್ನಣ್ಣ ವಾದ ಮಂಡಿಸಿ, ಅರ್ಜಿದಾರರು ವಿಧಾನಸಭಾಧ್ಯಕ್ಷ ಮುಂದೆ ಹಾಜರಾಗಿ ತಮ್ಮ ವಿರುದ್ಧ ಕೈಗೊಂಡಿರುವ ಸಮಿತಿ ನಿರ್ಣಯವನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದರೆ, ಪಕರಣವನ್ನು ಮರು ವಿಮರ್ಶೆ ಮಾಡಲಾಗುವುದು ಎಂದು ತಿಳಿಸಿದರು.ಇದಕ್ಕೆ ಒಪ್ಪಿಗೆ ಸೂಚಿಸಿದ ನ್ಯಾಯಾಪೀಠ, ಅರ್ಜಿದಾರರು ಸೋಮವಾರ ಸ್ಪೀಕರ್‌ ಮುಂದೆ ಹಾಜರಾಗಿ ನಿರ್ಣಯ ಮರುಪರಿಶೀಲಿಸುವಂತೆ ಮನವಿ ಮಾಡಬೇಕು. ಇದರನ್ವಯ ಸ್ವೀಕರ್‌ ತೀರ್ಮಾನಕೈಗೊಳ್ಳಬಹುದು ಎಂದು ತಿಳಿಸಿತು.

ಅರ್ಜಿ ವಾಪಸ್‌
ನಂತರ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಶಂಕರಪ್ಪ, ಸ್ಪೀಕರ್‌ ಮುಂದೆ ಹಾಜರಾಗಲು ನಮ್ಮ ಕಕ್ಷಿದಾರರು ಸಿದ್ದರಿದ್ದಾರೆ. ಆದರೆ, ಆ ವೇಳೆ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಎಜಿ ಪೊನ್ನಣ್ಣ, ಅಂತಹ ಯಾವುದೇ ಕ್ರಮಕ್ಕೆ ಮುಂದಾಗುವುದಿಲ್ಲ ಎಂದು ವಾಗ್ಧಾನ ನೀಡಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ವಕೀಲ ಶಂಕರಪ್ಪ ಅವರು ತಮ್ಮ ಅರ್ಜಿಯನ್ನು ಹಿಂಪಡೆಯುವುದಾಗಿ ನ್ಯಾಯಪೀಠಕ್ಕೆ ತಿಳಿಸಿದರು.

ಇದೇ ವೇಳೆ ವಕೀಲ ಶಂಕರಪ್ಪ, ಆದೇಶದಲ್ಲಿ ಬಂಧಿಸಬಾರದು ಎಂದು ನಿರ್ದೇಶನ ಮಾಡಿ ಎಂದು ಕೋರಿದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿದ ನ್ಯಾಯಾಧೀಶರು, ಆದೇಶದಲ್ಲಿ ಬಂಧಿಸದಂತೆ ನಿರ್ದೇಶನ ನೀಡಲು ಸಾಧ್ಯವಿಲ್ಲ. ಒಂದು ವೇಳೆ ನ್ಯಾಯಾಲಯಕ್ಕೆ ನೀಡಿರುವ ವಾಗ್ಧಾನ ಮುರಿದಲ್ಲಿ, ಅರ್ಜಿದಾರರು ಯಾವುದೇ ಸಮಯದಲ್ಲಿ ಮತ್ತೆ ಹೈಕೋರ್ಟ್‌ ಮುಂದೆ ಬರಬಹುದು ಎಂದು ಹೇಳಿದರು.

Advertisement

ಅರ್ಜಿದಾರರಿಗೆ ಎಚ್ಚರಿಕೆ
ವಿಧಾನಸಭಾಧ್ಯಕ್ಷ ಮುಂದೆ ಹಾಜರಾಗುವ ಪತ್ರಕರ್ತರು ಯಾವುದೇ ಅವಿಧೇಯತೆ ಪ್ರದರ್ಶಿಸಬಾರದು ಹಾಗೂ ಎಲ್ಲವನ್ನು ತಾಳ್ಮೆಯಿಂದ ಬಗೆಹರಿಸಿಕೊಳ್ಳಬೇಕು. ಅಲ್ಲದೇ ಮುಂದೆ ಅನುಚಿತವಾಗಿ ವರ್ತನೆ ತೋರಿದಲ್ಲಿ ಸದನ ನಿಮ್ಮ ವಿರುದ್ಧ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ನ್ಯಾಯಪೀಠ ಅರ್ಜಿದಾರರಿಗೆ ಎಚ್ಚರಿಕೆ ನೀಡಿತು.

Advertisement

Udayavani is now on Telegram. Click here to join our channel and stay updated with the latest news.

Next