ದುನಿಯಾ ವಿಜಯ್ “ಜಾನಿ ಜಾನಿ ಎಸ್ ಪಪ್ಪಾ’ ಎಂಬ ಸಿನಿಮಾ ಮಾಡುತ್ತಿದ್ದು, ಈ ಸಿನಿಮಾವನ್ನು ಪ್ರೀತಂ ಗುಬ್ಬಿ ನಿರ್ದೇಶಿಸಲಿದ್ದಾರೆಂಬ ವಿಷಯ ನಿಮಗೆ ಗೊತ್ತೇ ಇದೆ. ಈ ಹಿಂದೆ ಪ್ರೀತಂ ಹಾಗೂ ವಿಜಯ್ ಜೊತೆಯಾಗಿ “ಜಾನಿ ಮೇರಾ ನಾಮ್’ ಸಿನಿಮಾವನ್ನು ಮಾಡಿದ್ದು, ಆ ಸಿನಿಮಾದಲ್ಲಿ ರಮ್ಯಾ ನಾಯಕಿಯಾಗಿ ನಟಿಸಿದ್ದರು. ಈಗ “ಜಾನಿ ಜಾನಿ ಎಸ್ ಪಪ್ಪಾ’ ಸಿನಿಮಾ ಆರಂಭವಾಗುತ್ತಿದ್ದಂತೆ ಈ ಚಿತ್ರದಲ್ಲಿ ರಮ್ಯಾ ನಟಿಸುತ್ತಾರಾ ಎಂಬ ಪ್ರಶ್ನೆ ಅನೇಕರಲ್ಲಿತ್ತು.
ಈಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. “ಜಾನಿ ಜಾನಿ ಎಸ್ ಪಪ್ಪಾ’ದಲ್ಲಿ ನಾಯಕಿಯಾಗಿ ರಚಿತಾ ರಾಮ್ ನಟಿಸುತ್ತಿದ್ದಾರೆ. ಈ ಮೂಲಕ ರಚಿತಾ ಮತ್ತೂಂದು ಸ್ಟಾರ್ ಸಿನಿಮಾ ಒಪ್ಪಿಕೊಂಡಂತಾಗಿದೆ. ಕನ್ನಡದ ಬಹುತೇಕ ಸ್ಟಾರ್ ನಟರ ಜೊತೆ ನಟಿಸಿರುವ ರಚಿತಾ, ವಿಜಯ್ ಚಿತ್ರದಲ್ಲಿ ನಟಿಸಿರಲಿಲ್ಲ. ಈಗ “ಜಾನಿ ಜಾನಿ ಎಸ್ ಪಪ್ಪಾ’ ಮೂಲಕ ವಿಜಯ್ ಹಾಗೂ ರಚಿತಾ ಜೊತೆಯಾದಂತಾಗಿದೆ.
“ಜಾನಿ ಜಾನಿ ಎಸ್ ಪಪ್ಪಾ’ ಚಿತ್ರವನ್ನು ಯಾರು ನಿರ್ಮಿಸುತ್ತಾರೆಂಬ ಪ್ರಶ್ನೆಗೂ ಉತ್ತರ ಸಿಕ್ಕಿದೆ. ಸ್ವತಃ ವಿಜಯ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಈ ಮೂಲಕ ಒಂದು ದೊಡ್ಡ ಗ್ಯಾಪ್ನ ಬಳಿಕ ವಿಜಯ್ ಮತ್ತೆ ನಿರ್ಮಾಣಕ್ಕಿಳಿದಿದ್ದಾರೆ. “ಜಯಮ್ಮನ ಮಗ’ ಚಿತ್ರವನ್ನು ತಮ್ಮ ಸ್ನೇಹಿತರೊಬ್ಬರ ಜೊತೆ ಸೇರಿಕೊಂಡು ವಿಜಯ್ ನಿರ್ಮಿಸಿದ್ದರು. ಆ ನಂತರ ಯಾವುದೇ ಚಿತ್ರ ನಿರ್ಮಿಸಿರಲಿಲ್ಲ. ಈಗ “ಜಾನಿ ಜಾನಿ ಎಸ್ ಪಪ್ಪಾ’ ನಿರ್ಮಿಸುತ್ತಿದ್ದಾರೆ.
ಇದು “ಜಾನಿ ಮೇರಾ ನಾಮ್’ ಚಿತ್ರದ ಮುಂದುವರಿದ ಭಾಗದಂತಿದ್ದರೂ ಆ ಕಥೆಗೂ ಇಲ್ಲಿನ ಕಥೆಗೂ ಯಾವುದೇ ಸಂಬಂಧವಿರುವುದಿಲ್ಲವಂತೆ. ಆದರೆ, ಈ ಚಿತ್ರಕ್ಕಾಗಿಯೂ ವಿಶೇಷವಾದ ಸೆಟ್ ಹಾಕಲಾಗುತ್ತಿದೆ. “ಜಾನಿ ಮೇರಾ ನಾಮ್’ ಚಿತ್ರಕ್ಕಾಗಿ ಪ್ರೀತಂ ಗುಬ್ಬಿ ವಿಶೇಷವಾದ ಸೆಟ್ ಹಾಕಿಸಿದ್ದರು ಮತ್ತು ಬಹುತೇಕ ಸಿನಿಮಾ ಅಲ್ಲೇ ನಡೆದಿತ್ತು ಕೂಡಾ. ಈಗ “ಜಾನಿ ಜಾನಿ ಎಸ್ ಪಪ್ಪಾ’ ಚಿತ್ರಕ್ಕೂ ವಿಶೇಷವಾದ ಸೆಟ್ ಹಾಕಿಸುತ್ತಿದ್ದಾರೆ.
“ರೈನ್ಬೊ ಕಾಲೋನಿ’ ಹೆಸರಿನ ವಿಶೇಷವಾದ ಸೆಟ್ ಹಾಕಿಸುತ್ತಿದ್ದಾರೆ. ಈ ಕಾಲೋನಿಯಲ್ಲಿ ಎಲ್ಲಾ ಜಾತಿ, ಧರ್ಮದ ಜನರು ಖುಷಿಯಿಂದ ಬದುಕುತ್ತಿರುವ ಸನ್ನಿವೇಶದ ಜೊತೆಗೆ ಚಿತ್ರದ ಬಹುತೇಕ ಭಾಗದ ಚಿತ್ರೀಕರಣ ಇಲ್ಲೇ ನಡೆಯಲಿದೆಯಂತೆ. ಕಲಾ ನಿರ್ದೇಶಕ ಮೋಹನ್ ಬಿ.ಕೆರೆಗೆ ಈ ಸೆಟ್ನ ಜವಾಬ್ದಾರಿ ವಹಿಸಲಾಗಿದೆ. ಚಿತ್ರದಲ್ಲಿ ರಂಗಾಯಣ ರಘು, ಸಾಧುಕೋಕಿಲ, ದತ್ತಣ್ಣ ಸೇರಿದಂತೆ ಅನೇಕರು ನಟಿಸುತ್ತಿದ್ದು, ಹರಿಕೃಷ್ಣ ಸಂಗೀತ ನೀಡುತ್ತಿದ್ದಾರೆ. ಛಾಯಾಗ್ರಾಹಕರ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ಜುಲೈನಿಂದ ಚಿತ್ರೀಕರಣ ಶುರು.