Advertisement

ಹೆಲಿಕಾಪ್ಟರ್‌ ಹೂಮಳೆಗೆ ಇಲ್ಲ ಕೋರ್ಟ್‌ ಸಮ್ಮತಿ

12:03 PM Feb 07, 2017 | Team Udayavani |

ಬೆಂಗಳೂರು: ಗೃಹಪ್ರವೇಶದಂದು ಮನೆ ಮೇಲೆ ಹೆಲಿಕಾಪ್ಟರ್‌ನಿಂದ ಹೂಮಳೆ ಸುರಿಸಲು ಅನುಮತಿ ನೀಡುವಂತೆ ಪೊಲೀಸ್‌ ಆಯುಕ್ತರು ಮತ್ತು ವರ್ತೂರು ಠಾಣೆಗೆ ನಿರ್ದೇಶಿಸಬೇಕೆಂಬ ವ್ಯಕ್ತಿಯೊಬ್ಬರ ಅರ್ಜಿಯನ್ನು ಹೈಕೋರ್ಟ್‌ ನಿರಾಕರಿಸಿದೆ.

Advertisement

ನಗರದ ಪೂರ್ವ ತಾಲೂಕಿನ ಮುಳ್ಳೂರಿನ ನಿವಾಸಿ ಎಂ.ಮುನಿರಾಜು ಎಂಬುವರು ಫೆ.9ರಂದು ನಡೆಯಲಿರುವ ತಮ್ಮ ಮನೆ ಗೃಹಪ್ರವೇಶ ದಿನದಂದು ಹೆಲಿಕಾಪ್ಟರ್‌ನಿಂದ ಹೂಮಳೆ ಸುರಿಸಲು ಅನುಮತಿ ನೀಡುವಂತೆ ಪೊಲೀಸ್‌ ಇಲಾಖೆಗೆ ಸೂಚಿಸಿ ಎಂದು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿರುವ ಹೈಕೋರ್ಟ್‌, ಆ ರೀತಿ ನ್ಯಾಯಾಲಯ ಸೂಚಿಸಲು ಸಾಧ್ಯವಿಲ್ಲ ಎಂದು ಹೇಳಿತು. 

ಮುನಿರಾಜು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎ.ಎಸ್‌.ಬೋಪಣ್ಣ ಅವರಿದ್ದ ಏಕಸದಸ್ಯ ಪೀಠ, ಪ್ರಕರಣದಲ್ಲಿ ಸಂವಿಧಾನ ಪರಿಚ್ಛೇಧ 14 ಉಲ್ಲಂಘನೆಯಾಗಿದೆ ಮತ್ತು ತಾರತಮ್ಯ ನೀತಿ ಅನುಸರಿಸಲಾಗಿದೆ ಎಂಬುದು ಮೇಲ್ನೋಟಕ್ಕೆ ಕಾಣುವುದಿಲ್ಲ. ಹೀಗಾಗಿ, ಅರ್ಜಿದಾರರ ಮನೆ ಮೇಲೆ ಹೂಮಳೆ ಸುರಿಸಲು ಅನುಮತಿ ನೀಡುವಂತೆ ಪೊಲೀಸರಿಗೆ ನಿರ್ದೇಶಿಸಲು ಸಾಧ್ಯವಿಲ್ಲ ಎಂದು ತಿಳಿಸಿ ಅರ್ಜಿ ಇತ್ಯರ್ಥಪಡಿಸಿತು.

ಪಕ್ಕದವರಿಗೆ ಕೊಟ್ಟ ಅವಕಾಶ; ನಮಗೇಕಿಲ್ಲ 
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, “ಕಾನೂನಿನಲ್ಲಿ ಎಲ್ಲರೂ ಸಮಾನರು. ಜನರ ಮಧ್ಯೆ ತಾರತಮ್ಯ ನೀತಿ ಅನುಸರಿಸುವಂತಿಲ್ಲ. ಕಳೆದ ವರ್ಷ ನನ್ನ ಕಕ್ಷಿದಾರರ ಪಕ್ಕದ ಮನೆಯವರ ಗೃಹಪ್ರವೇಶದ ವೇಳೆ ಹೆಲಿಕಾಪ್ಟರ್‌ ಮೂಲಕ ಹೂಮಳೆ ಸುರಿಸಲು ಪೊಲೀಸರು ಅನುಮತಿ ನೀಡಿದ್ದರು. ಆದರೆ, ಇದೀಗ ನನ್ನ ಕಕ್ಷಿದಾರರಿಗೆ ಅನುಮತಿ ನೀಡುತ್ತಿಲ್ಲ. ಇದು ಸಂವಿಧಾನದ ಪರಿಚ್ಛೇಧ 14ರ ಉಲ್ಲಂಘನೆ,” ಎಂದು ವಾದಿಸಿದರು.

ಹೂಮಳೆ ಶಾಸ್ತ್ರವೇ, ಸಂಪ್ರದಾಯವೇ? 
ಹೂಮಳೆಗೆ ಅವಕಾಸ ನೀಡುವಂತೆ ಅರ್ಜಿದಾರರ ಪರ ವಕೀಲರು ಮಂಡಿಸಿದ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, “”ಪಕ್ಕದ ಮನೆಯವರಿಗೆ ಅನುಮತಿ ನೀಡಲಾಗಿದೆಯೆಂಬ ಕಾರಣಕ್ಕೆ ಇವರಿಗೂ ಅನುಮತಿ ನೀಡಬೇಕಿಲ್ಲ. ಹಿಂದೆ ಅನುಮತಿ ನೀಡಿ ತಪ್ಪು ಮಾಡಲಾಗಿದೆ. ಅದನ್ನು ಇದೀಗ ಸರಿಪಡಿಸಿಕೊಳ್ಳಲಾಗುತ್ತಿದೆ. ಅರ್ಜಿದಾರರ ಮನವಿ ಪುರಸ್ಕರಿಸಿದರೆ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾ ಗುತ್ತದೆ. ಹೆಲಿಕಾಪ್ಟರ್‌ನಿಂದ ಮನೆಯ ಮೇಲೆ ಹೂಮಳೆ ಸುರಿಸುವುದು ಶಾಸ್ತ್ರವೇ ಅಥವಾ ಸಂಪ್ರದಾಯವೇ? ಎಂದು ಖಾರವಾಗಿ ಪ್ರಶ್ನಿಸಿದರು. 

Advertisement

ಪ್ರಕರಣವೇನು?
ನಗರದ ಪೂರ್ವ ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ಎಂ.ಮುನಿರಾಜು ಅವರು ಭವ್ಯ ಮನೆ ನಿರ್ಮಿಸಿಕೊಂಡಿದ್ದಾರೆ. ಫೆ.9ರಂದು ಆ ಮನೆಯ ಗೃಹ ಪ್ರವೇಶ ಕಾರ್ಯಕ್ರಮ ನಿಗದಿಪಡಿಸಿದ್ದು, ಆ ವೇಳೆ ಹೆಲಿಕಾಪ್ಟರ್‌ನಿಂದ ಮನೆಯ ಮೇಲೆ ಹೂಮಳೆ ಸುರಿಸಲು ತೀರ್ಮಾನಿಸಿದ್ದಾರೆ. ಈಗಾಗಲೇ ಆಹ್ವಾನ ಪತ್ರಿಕೆಯಲ್ಲಿ ಮಧ್ಯಾಹ್ನ 12ಕ್ಕೆ ಹೆಲಿಕಾಪ್ಟರ್‌ನಿಂದ ಪುಷ್ಪಾರ್ಚನೆ ಎಂದು ಮುದ್ರಿಸಿ, ಹೆಲಿಕಾಪ್ಟರ್‌ ಚಿತ್ರವನ್ನೂ ಹಾಕಿಸಿದ್ದರು.  

ಹೆಲಿಕಾಪ್ಟರ್‌ನಿಂದ ಹೂ ಮಳೆ ಸುರಿಸುವಂತೆ ಡೆಕ್ಕನ್‌ ಏರ್‌ವೆàಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಜತೆ ಮಾತನಾಡಿದ್ದರು. ಆದರೆ, ಪೊಲೀಸರಿಂದ ಅನುಮತಿ ಪಡೆಯುವಂತೆ ಮುನಿರಾಜುಗೆ ಕಂಪನಿ ತಿಳಿಸಿತ್ತು. ಅದರಂತೆ ನಗರ ಪೊಲೀಸ್‌ ಆಯುಕ್ತರು ಮತ್ತು ವರ್ತೂರು ಪೊಲೀಸರಿಗೆ ಮನವಿ ಮಾಡಿದ್ದರು. ತಿಂಗಳು ಕಳೆದರೂ ಪೊಲೀಸರು ಅನುಮತಿ ನೀಡದ ಕಾರಣಕ್ಕೆ ಮುನಿರಾಜು ಹೈಕೊರ್ಟ್‌ ಮೊರೆ ಹೊಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next