Advertisement

Puttur: ಸಜ್ಜಾಗುತ್ತಿದೆ ಆನೆಮಜಲು ಕೋರ್ಟ್‌ ಸಂಕೀರ್ಣ

12:57 PM Nov 19, 2024 | Team Udayavani |

ಪುತ್ತೂರು: ಎಲ್ಲವೂ ಅಂದುಕೊಂಡಂತೆ ಸಾಗಿದರೆ ಹೊಸ ವರ್ಷದ ಆರಂಭದಲ್ಲಿ ಕೋರ್ಟ್‌ ಕಲಾಪಗಳೆಲ್ಲವೂ ಪುತ್ತೂರು ನಗರದ ಕೇಂದ್ರ ಸ್ಥಾನದಿಂದ ಆರು ಕಿ.ಮೀ. ದೂರದಲ್ಲಿರುವ ಆನೆಮಜಲಿನಲ್ಲಿ ನಡೆಯಲಿದೆ.

Advertisement

ಐವತ್ತೂಂದು ಕೋ.ರೂ.ವೆಚ್ಚದಲ್ಲಿ ಆನೆಮಜಲಿನಲ್ಲಿ ನಿರ್ಮಾಣ ಗೊಳ್ಳುತ್ತಿರುವ ನಾಲ್ಕು ಮಹಡಿಯ ನ್ಯಾಯಾಲಯ ಸಂಕೀರ್ಣದ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ಎರಡು ಹಂತದಲ್ಲಿ ನಡೆದ ಕಾಮಗಾರಿಯ ಪೈಕಿ ಕೊನೆಯ ಹಂತದ ಕಾಮಗಾರಿ ಲೋಕೋ ಪಯೋಗಿ ಇಲಾಖೆಯ ಉಸ್ತುವಾರಿಯಲ್ಲಿ ಪ್ರಗತಿಯಲ್ಲಿದೆ. ಶೇ.95 ರಷ್ಟು ಪೂರ್ಣಗೊಂಡಿದ್ದು ಅಂತಿಮ ಹಂತದ ಕೆಲಸ ಸಾಗುತ್ತಿದೆ.

ಮೊದಲ ಹಂತ ಮುಕ್ತಾಯ
ಪುತ್ತೂರು-ಉಪ್ಪಿನಂಗಡಿ ಸಂಪರ್ಕ ರಸ್ತೆಯಿಂದ ಕವಲೊಡೆದಿರುವ ಆನೆಮಜಲಿನಲ್ಲಿ ಈ ಕಟ್ಟಡ ನಿರ್ಮಾಣ ಹಂತದಲ್ಲಿದೆ. ರಸ್ತೆಯಿಂದ ಸುಮಾರು 300 ಮೀ.ನಷ್ಟು ದೂರದಲ್ಲಿದೆ. ಒಟ್ಟು 51 ಕೋ.ರೂ.ವೆಚ್ಚದ ಕಾಮಗಾರಿಯನ್ನು ಎರಡು ಹಂತದಲ್ಲಿ ಕೈಗೆತ್ತಿಕೊಂಡು 2018 ನ. 10 ರಂದು ಮೊದಲ ಹಂತದ 25 ಕೋ. ರೂ. ವೆಚ್ಚದ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಯಿತು. ಟೆಂಡರ್‌ ವಿಳಂಬವಾದ ಕಾರಣ ಕಾಮಗಾರಿ ಪ್ರಾರಂಭ ಪ್ರಕ್ರಿಯೆ ತಡವಾಗಿ ಕರಾರಿನ ಪ್ರಕಾರ 2019 ಮೇ 11 ರಂದು ಕಾಮಗಾರಿ ಪ್ರಾರಂಭಗೊಂಡಿತ್ತು. ಎರಡು ವರ್ಷ ಕಾಮಗಾರಿ ನಡೆದು 2021 ರಲ್ಲಿ ಪೂರ್ಣಗೊಂಡಿತ್ತು. ಮೊದಲ ಹಂತದಲ್ಲಿ ನ್ಯಾಯಾಲಯ ಕಟ್ಟಡದ ಮೊದಲ ಎರಡು ಅಂತಸ್ತು ಹಾಗೂ ವಕೀಲರ ಸಂಘ, ಜಿಲ್ಲಾ ನ್ಯಾಯಾಂಗ ಇಲಾಖೆಯ ಸಹಭಾಗಿತ್ವದಲ್ಲಿ 3 ಕೋ.ರೂ.ವೆಚ್ಚದಲ್ಲಿ ನ್ಯಾಯಾಲಯ ಕಟ್ಟಡದ ಪಕ್ಕದಲ್ಲೇ ನಾಲ್ಕು ಅಂತಸ್ತಿನ ವಕೀಲರ ಸಂಘದ ಕಚೇರಿ ಕಟ್ಟಡ ನಿರ್ಮಿಸಲಾಯಿತು. 2021 ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಅಬ್ದುಲ್‌ ನಜೀರ್‌ ಅವರು ಪ್ರಥಮ ಹಂತದ ಕಾಮಗಾರಿ, ವಕೀಲರ ಭವನ ಉದ್ಘಾಟನೆ ಹಾಗೂ 2 ನೇ ಹಂತದ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದರು.

ಎರಡನೆ ಹಂತ
2021 ರಲ್ಲಿ ಒಟ್ಟು 4 ಮಹಡಿಯ ನ್ಯಾಯಾಲಯ ಸಂಕೀರ್ಣದ ಉಳಿದ ಎರಡು ಅಂತಸ್ತು ಹಾಗೂ ನ್ಯಾಯಾಧೀಶರ ವಸತಿಗೃಹಗಳ ನಿರ್ಮಾಣದ 26 ಕೋ.ರೂ.ವೆಚ್ಚದ ಕಾಮಗಾರಿ ಪ್ರಾರಂಭಿಸಲಾಯಿತು. ಸುಸಜ್ಜಿತ ಸಂಪರ್ಕ ರಸ್ತೆ ನಿರ್ಮಾಣಕ್ಕೂ ಚಾಲನೆ ನೀಡಲಾಯಿತು. ಮೂರು ವರ್ಷದಿಂದ ನಡೆಯುತ್ತಿರುವ ಈ ಕಾಮಗಾರಿ ಇದೀಗ ಅಂತಿಮ ಹಂತಕ್ಕೆ ಬಂದಿದ್ದು ರಸ್ತೆ ನಿರ್ಮಾಣ ಕೆಲಸ ಪ್ರಗತಿಯಲ್ಲಿದೆ. ಕಟ್ಟಡಕ್ಕೆ ಬಣ್ಣ ಬಳಿಯುವ ಕಾರ್ಯ, ಚರಂಡಿ ನಿರ್ಮಾಣ ಸೇರಿದಂತೆ ಅಂತಿಮ ಹಂತದ ಕೆಲಸಗಳು ನಡೆಯುತ್ತಿದೆ. ಈ ಕಾಮಗಾರಿ ಪೂರ್ಣಕ್ಕೆ 2024 ಡಿಸೆಂಬರ್‌ ತಿಂಗಳ ತನಕ ಕಾಲಾವಕಾಶ ಇದೆ.

Advertisement

ಬ್ರಿಟಿಷ್‌ ಕಾಲದ ಕಟ್ಟಡ
ಕೋರ್ಟ್‌ ರಸ್ತೆ ಪುತ್ತೂರಿನ ಹೆಗ್ಗುರುತು. ಈ ಹೆಸರು ಹತ್ತೂರಿನಲ್ಲಿಯು ಜನಜನಿತ. ಮಿನಿ ವಿಧಾನಸೌಧ ಸಮೀಪ ಬ್ರಿಟಿಷ್‌ ಕಾಲದ ನ್ಯಾಯಾಲಯ ಕಟ್ಟಡದಲ್ಲಿ ಕೆಲವು ಕೋರ್ಟ್‌ ಕಲಾಪಗಳು ಇಂದಿಗೂ ನಡೆಯುತ್ತಿದೆ. ಅದು ಬ್ರಿಟಿಷರ ಕಾಲದ ಪ್ರವಾಸಿ ಮಂದಿರವಾಗಿತ್ತು ಅನ್ನುತ್ತಿದೆ ಇತಿಹಾಸ. ಇನ್ನೊಂದೆಡೆ ನಗರಸಭೆಗೆ ತಾಗಿಕೊಂಡಿರುವ ನ್ಯಾಯಾಲಯದ ಕಟ್ಟಡ ಅನಂತರ ನಿರ್ಮಾಣ ಆದದ್ದು. ಬಹುತೇಕ ಕೋರ್ಟ್‌ ಕಲಾಪಗಳು ಇಲ್ಲಿಯೇ ನಡೆಯುತ್ತಿದೆ. ಆನೆಮಜಲಿನಲ್ಲಿ ಕಟ್ಟಡ ಲೋಕಾರ್ಪಣೆ ಆದ ಬಳಿಕ ಈ ಎರಡು ಕಟ್ಟದಲ್ಲಿ ನಡೆಯುವ ಕಲಾಪಗಳು ಅಲ್ಲಿಗೆ ಸ್ಥಳಾಂತರಗೊಳ್ಳಲಿದೆ.

ಮಾದರಿ ಕೋರ್ಟ್‌ ಕಟ್ಟಡ
ನಾನು ಶಾಸಕನಾಗಿದ್ದ ಅವಧಿಯಲ್ಲಿ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಅನುದಾನ ಮಂಜೂರಾಗಿತ್ತು. ಆ ಅವಧಿಯಲ್ಲಿಯೇ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡು ಎರಡನೆ ಹಂತದ ಕಾಮಗಾರಿಗೂ ಚಾಲನೆ ನೀಡಲಾಗಿತ್ತು. ಜಿಲ್ಲೆಯಲ್ಲಿ ಮಾದರಿ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಅಂದಿನ ಸರಕಾರ ಅನುದಾನ ನೀಡಿತ್ತು.
-ಸಂಜೀವ ಮಠಂದೂರು, ಮಾಜಿ ಶಾಸಕ, ಪುತ್ತೂರು

ಇದೀಗ ಎರಡನೆ ಹಂತದ ಕಾಮಗಾರಿ ಶೇ.95 ರಷ್ಟು ಪೂರ್ಣಗೊಂಡಿದೆ. ಎರಡನೇ ಹಂತದ ಕಾಮಗಾರಿ ಪೂರ್ಣಕ್ಕೆ ಡಿಸೆಂಬರ್‌ ಕೊನೆ ತನಕ ಕಾಲಾವಕಾಶ ಇದೆ.
– ಕಾನಿಷ್ಕಚಂದ್ರ, ಸಹಾಯಕ ಎಂಜಿನಿಯರ್‌ ಲೋಕೋಪಯೋಗಿ ಇಲಾಖೆ ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next