Advertisement

ಹೃದಯ ಶ್ರೀಮಂತಿಕೆಯ ಜಿಲ್ಲೆ  ದ.ಕನ್ನಡ: ಡಾ|ರವಿ

09:48 AM Nov 23, 2017 | Team Udayavani |

ಮಹಾನಗರ: ದಕ್ಷಿಣ ಕನ್ನಡ ಹೃದಯ ಶ್ರೀಮಂತಿಕೆಗೆ ಹೆಸರಾದ ಜಿಲ್ಲೆ.ಇಲ್ಲಿನವರಲ್ಲಿ ದಾನ ಎಂದರೆ ಜಿಜ್ಞಾಸೆ ಇಲ್ಲ.
ತಮಗೆ ಸರ್ವಸ್ವವನ್ನೂ ನೀಡಿದ ಸಮಾಜಕ್ಕೆ ಸಹಾಯ ಮಾಡುವ ಗುಣವನ್ನು ಎಲ್ಲರೂ ಮೈಗೂಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಎಂ.ಆರ್‌. ರವಿ ಹೇಳಿದರು.

Advertisement

ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಬುಧವಾರ ಜರಗಿದ ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಗಳೂರು ವಕೀಲರ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಸಹಯೋಗದಲ್ಲಿ ನ್ಯಾಯಾಧೀಶರು ಮತ್ತು ನ್ಯಾಯವಾದಿಗಳಿಗೆ ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮತ್ತು ನೇತ್ರದಾನದ ನೋಂದಣಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮಲ್ಲಿರುವ ಹಿಂಜರಿಕೆ, ಕೀಳರಿಮೆಗಳು ವ್ಯಕ್ತಿಗಳನ್ನು ಸಮಾಜದ ಮುಖ್ಯವಾಹಿನಿಗೆ ಬರಲು ತಡೆಯುತ್ತದೆ. ಎಂದಿಗೂ ಒಳ್ಳೆಯದನ್ನು ಎದೆ ತಟ್ಟಿ ಹೇಳಬೇಕು. ಒಳ್ಳೆಯ ಕೆಲಸಗಳು ಆತ್ಮಸಾಕ್ಷಿಗಾಗಿ ಮಾಡಬೇಕೇ ವಿನಾ ಹಿಂಜರಿಕೆ ಇರಬಾರದು. ನಾವಿಂದು ಆಕರ್ಷಣೆ ಮತ್ತು ಒತ್ತಡ ನಡುವೆ ಬದುಕುತ್ತಿದ್ದೇವೆ. ವಿದ್ಯೆ ನಮ್ಮಲ್ಲಿ ವಿನಯ ಕಲಿಸಬೇಕೇ ಹೊರತು ಅಹಂ ಬೆಳೆಸಬಾರದು ಎಂದರು.

ನೇತ್ರದಾನ ಅಗತ್ಯ
ಜಿಲ್ಲಾ ಕುಷ್ಠರೋಗ ನಿವಾರಣ ಮತ್ತು ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ| ರತ್ನಾಕರ್‌ ಮಾತನಾಡಿ, ನೇತ್ರದಾನ ಎಂದರೆ, ಬದುಕಿದ್ದಾಗ ಸಹಿ ಮಾಡಿ ಮರಣ ಹೊಂದಿದ 6 ಗಂಟೆಗಳೊಳಗಾಗಿ ಕಣ್ಣನ್ನು ದಾನ ಮಾಡುವುದಾಗಿದೆ. ಕೋಮಾ ಸ್ಥಿತಿಯಲ್ಲಿದ್ದವರು ಮನೆಯವರ ಲಿಖೀತ ಹೇಳಿಕೆ ಮೇರೆಗೆ ಕಣ್ಣು ದಾನ ಮಾಡ ಬಹುದು. ದೇಶದಲ್ಲಿ ಸುಮಾರು 30 ಸಾವಿರ ಮಂದಿ ಕುರುಡರಿದ್ದು, ವರ್ಷದಲ್ಲಿ 10 ಸಾವಿರ ಕಣ್ಣಿನ ಶಸ್ತ್ರಚಿಕಿತ್ಸೆಗಳಾಗುತ್ತಿವೆ ಎಂದರು.

ಕೆ.ಎಸ್‌. ಹೆಗ್ಡೆ ಕಾಲೇಜು ಮನೋರೋಗ ವಿಭಾಗದ ಡಾ| ಶ್ರೀನಿವಾಸ ಭಟ್‌ ಮಾತನಾಡಿ, ದಿನನಿತ್ಯದ ಜೀವನದಲ್ಲಿ ಸಮತೋಲನ ಕಂಡುಕೊಳ್ಳಲು ಸಾಧ್ಯವಾಗದಿದ್ದಾಗ ಮಾನಸಿಕ ಸಮಸ್ಯೆಗಳು ಎದುರಾಗುತ್ತವೆ. ಐವರಲ್ಲಿ ಒಬ್ಬರಿಗೆ ಕೆಲಸ ಮಾಡುವ ಜಾಗದಲ್ಲಿ ಮಾನಸಿಕ ಸಮಸ್ಯೆ ಉಂಟಾಗುತ್ತದೆ ಎಂದು ವಿವರಿಸಿದರು.

Advertisement

ನ್ಯಾಯವಾದಿಗಳು ಮತ್ತು ನ್ಯಾಯಾಧೀಶರು ನೇತ್ರದಾನಕ್ಕೆ ಸಹಿ ಮಾಡಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾ ಧೀಶ ಕೆ.ಎಸ್‌. ಬೀಳಗಿ, ವಕೀಲರ ಸಂಘದ ಅಧ್ಯಕ್ಷ ಎಂ.ಆರ್‌. ಬಲ್ಲಾಳ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next