ದಾವಣಗೆರೆ: ನಮ್ಮಲ್ಲಿನ ಅಜ್ಞಾನ ದೂರ ಮಾಡುವ ಮೂಲಕ ಜೀವನದ ಮಾರ್ಗದರ್ಶನ ನೀಡುವ ಗುರುವಿಗೆ ಹೆಚ್ಚಿನ ಗೌರವ ನೀಡಬೇಕು ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ತಿಳಿಸಿದರು.
ಭಾನುವಾರ ಶ್ರೀ ಶಿವಯೋಗಿ ಮಂದಿರದಲ್ಲಿ ಶರಣ ಸಂಗಮ ಮತ್ತು ಉಪನ್ಯಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಗು.. ಎಂದರೆ ಅಜ್ಞಾನ, ರು… ಎಂದರೆ ಹೊಡೆದೋಡಿಸುವುರು. ನಮ್ಮಲ್ಲಿನ ಅಜ್ಞಾನವ ಹೊಡೆದೋಡಿಸುವರು ನಿಜವಾದ ಗುರು ಎಂದರು.
ನಮ್ಮ ಬದುಕಿನ ಮಾರ್ಗದರ್ಶನ ನೀಡುವ ಗುರುವಿಗೆ ಮನ್ನಣೆ ನೀಡಬೇಕು. ಗೌರವದಿಂದ ಕಾಣಬೇಕು. ನಮಗೆ ವಿದ್ಯೆ, ಅನ್ನ, ಆಶ್ರಯ ನೀಡುವ ಗುರುಗಳಿಗೆ ತಿರುಗಿ ಬೀಳುವುದು ಯಾವ ಕಾರಣಕ್ಕೂ ಸರಿಯಲ್ಲ. ಆ ರೀತಿ ಮಾಡಿದರೆ ನಮ್ಮ ಜೀವನವೇ ವ್ಯರ್ಥ ಎಂಬುದನ್ನ ಪ್ರತಿಯೊಬ್ಬರು ಅರಿಯಬೇಕು ಎಂದು ತಾಕೀತು ಮಾಡಿದರು.
ಗುರುವಿನಿಂದ ಏನೆಲ್ಲಾ ಕಲಿತರೂ ಇಂದಿನ ವಾತಾವರಣದಲ್ಲಿ ಗುರುವನರಿವ, ಗೌರವ ನೀಡುವ ಹೃದಯ ಕಾಣೆಯಾಗುತ್ತಿವೆ. ನಮಗೆ ಶಿಕ್ಷಣ ಪಡೆಯುವುದಕ್ಕೆ ತಂದೆ-ತಾಯಿ ಶ್ರಮಿಸುವರು. ವಿದ್ಯೆ ಕಲಿತು, ಒಳ್ಳೆಉ ಕೆಲಸಕ್ಕೆ ಸೇರಿದ ನಂತರ ಅದೇ ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸುವುದು ನಿಜಕ್ಕೂ ವಿಷಾದನೀಯ. ಆ ರೀತಿ ಮಾಡಿದರೆ ಕಲಿತಂತಹ ಶಿಕ್ಷಣಕ್ಕೆ ಗೌರವವೇ ಇಲ್ಲದಂತಾಗುತ್ತದೆ ಎಂದು ತಿಳಿಸಿದರು.
ಮಹಾನ್ ದಾರ್ಶನಿಕ ಬಸವಣ್ಣನವರು ತಮ್ಮ ಧರ್ಮಗುರುಗಳಾದ ಹರಳಯ್ಯ ಮತ್ತು ಮಧುರಸರ ಮಕ್ಕಳ ಮದುವೆ ಮಾಡಿಸುವ ಮೂಲಕ ಜಾತ್ಯತೀತ, ಸಮಾನತೆಯ, ಕಲ್ಯಾಣ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಗುರುವಿಗೆ ಅತಿ ಹೆಚ್ಚಿನ ಮಹತ್ವ ನೀಡಿದರು. ನಾವು ಲಿಂಗಾಯತ
ಧರ್ಮಕ್ಕೆ ಸ್ವಾತಂತ್ರ ಧರ್ಮದ ಸ್ಥಾನಮಾನಕ್ಕೆ ತನು, ಮನ, ಧನದ ಹೋರಾಟ ನಡೆಸಬೇಕು ಎಂದು ತಿಳಿಸಿದರು.
ಮಾಜಿ ಶಾಸಕ ಮೋತಿ ವೀರಣ್ಣ, ನಿವೃತ್ತ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರವಿನಾರಾಯಣ್ ಇತರರು ಇದ್ದರು. ಎವಿಕೆ ಕಾಲೇಜಿನ ಕನ್ನಡ ಉಪನ್ಯಾಸಕಿ ಗೀತಾ ಬಸವರಾಜ್, ಗುರುವನರಿವ ಹೃದಯ ದೊಡ್ಡದು… ವಿಷಯ ಕುರಿತು ಉಪನ್ಯಾಸ ನೀಡಿದರು.