ರಾಜ್ಯ ಸರ್ಕಾರ ತನ್ನ ಆರ್ಥಿಕ ಸಂಪನ್ಮೂಲದ ಇತಿಮಿತಿಯಲ್ಲಿಯೇ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಉತ್ತಮ ಬಜೆಟ್ ಮಂಡಿಸಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಆರೋಗ್ಯ ವ್ಯವಸ್ಥೆಯ ಬೆನ್ನೆಲು ಇದ್ದಂತೆ. ಇಂತಹ ಕೇಂದ್ರಗಳನ್ನು ತಂತ್ರಜ್ಞಾನ ಸಹಾಯದಿಂದ ಅಭಿವೃದ್ಧಿ ಪಡಿಸುತ್ತಿರುವುದು ಹಾಗೂ ಅಲ್ಲಿ ಟೆಲಿಮೆಡಿಸಿನ್ ವ್ಯವಸ್ಥೆ ಕಲ್ಪಿಸುತ್ತಿರುವುದು ಅತ್ಯುತ್ತಮ ನಡೆ ಆಗಿದೆ.
ಕಟ್ಟಡ ಕಾರ್ಮಿಕರು ಆರ್ಥಿಕವಾಗಿ ಹಿಂದುಳಿದಿ ರುತ್ತಾರೆ. ಅವರಿಗೆ ಯಾವುದೇ ಸೂಕ್ತ ಸೌಲಭ್ಯ ಸಿಗುವುದಿಲ್ಲ. ಅಂತಹ ಕಟ್ಟಡ ಕಾರ್ಮಿಕರ ಆರೋಗ್ಯ ಕಾಳಜಿಗೆ ಒಂದು ಹೆಜ್ಜೆ ಮುಂದಿಟ್ಟು ಉಚಿತ ಪ್ರಿಪೇಯ್ಡ ಕಾರ್ಡ್ ನೀಡುತ್ತಿರುವುದು ಲಕ್ಷಾಂತರ ಮಂದಿಗೆ ಅನುಕೂಲವಾಗಲಿದೆ. ಜೀವನ ಶೈಲಿ ಬದಲಾವಣೆಯಿಂದ ಹೃದ್ರೋಗ, ಮಧುಮೇಹ, ಕಿಡ್ನಿ ವೈಫಲ್ಯ ದಂತಹ ಕಾಯಿಲೆ ಹೆಚ್ಚುತ್ತಿವೆ. ಅಂತಹ ರೋಗಗಳಿಗೆ ತುತ್ತಾಗುತ್ತಿರುವ ರೋಗಿಗಳಿಗೆ ಪ್ರಸಕ್ತ ಬಜೆಟ್‌ನಲ್ಲಿ ಘೋಷಿಸಿರುವ ಕ್ಯಾತ್‌ಲ್ಯಾಬ್, ಡಯಾಲಿಸಿಸ್ ಕೇಂದ್ರಗಳು ನೆರವಾಗಲಿದೆ.
ಹೃದ್ರೋಗ ಹೆಚ್ಚು ಕಾಣಿಸಿಕೊಳ್ಳುತ್ತಿರುವ ಮಹಾನಗರಗಳಲ್ಲೊಂದಾದ ಬೆಂಗಳೂರಿನ 2 ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ಯಾತ್‌ಲ್ಯಾಬ್ ಮಾಡಲಾಗುತ್ತಿದೆ. ಜತೆಗೆ ಕಿಡ್ನಿ ಸಮಸ್ಯೆ ಯಿಂದ ಬಳಲುತ್ತಿರುವವರ ಡಯಾಲಿಸಿಸ್‌ಗೆ 5 ಜಿಲ್ಲೆಗಳಲ್ಲಿ ಆಧುನಿಕ ಪೆರಿಟೋನಿಯಲ್ ಡಯಾಲಿಸಿಸ್ ಸೇವೆ ಆರಂಭಿಸಲಾಗುತ್ತಿದೆ. ಈ ರೀತಿ ಆರೋಗ್ಯ ಯೋಜನೆಗಳ ವಿಸ್ತರಣೆ ಮುಂದಿನ ದಿನಗಳಲ್ಲಿ ಬಲಿಷ್ಠ ಆರೋಗ್ಯ ವ್ಯವಸ್ಥೆ ಸೃಷ್ಟಿಸಲಿದೆ. ಇಂತಹ ಯೋಜನೆಗಳನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಆಸ್ಪತ್ರೆಗಳಿಗೆ ಸರ್ಕಾರ ಮುಂದಾಗಬೇಕು.
ಉತ್ತರ ಕನ್ನಡ ಆರೋಗ್ಯ ಸೌಲಭ್ಯಗಳಲ್ಲಿ ಒಂದಿಷ್ಟು ಹಿಂದುಳಿದ ಜಿಲ್ಲೆ ಎಂದು ಬಿಂಬಿತ ವಾಗಿದೆ. ಸದ್ಯ ಬಜೆಟ್‌ನಲ್ಲಿ ಶಿರಸಿ ತಾಲೂಕಿನ ಸರ್ಕಾರಿ ಆಸ್ಪತ್ರೆಮೇಲ್ದರ್ಜೆಗೇರಿಸುತ್ತಿರುವುದರಿಂದ ಅಲ್ಲಿನ ಆರೋಗ್ಯ ವ್ಯವಸ್ಥೆ ಸುಧಾರಿ ಸಲಿದೆ. ಖಾಸಗಿ ಸಾರ್ವಜನಿಕ ಸಹಭಾಗಿತ್ವದ ಮೂಲಕ ಸಾರ್ವಜನಿಕ ಆರೋಗ್ಯ ಸಂಸ್ಥೆಗಳ ಉನ್ನತೀಕರಣ ಸ್ವಾಗತಾರ್ಹ. ಘೋಷಣೆ ಮಾಡಿರುವ ಕಾರ್ಯಕ್ರಮ ನಿಗದಿತ ಸಮಯದಲ್ಲಿ ಜಾರಿಗೊಳಿಸಲಿ.
ಆರ್ಥಿಕ ನೆರವು: ಇನ್ನು ಮಧ್ಯಮ ವರ್ಗದ ಕುಟುಂಬಗಳಿಗೆ ದೊಡ್ಡ ಪ್ರಮಾಣದ ಆರೋಗ್ಯ ಭರವಸೆ ನೀಡುವ ನಿಟ್ಟಿನಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯನ್ನು ಏಕ ರೀತಿಯ ಆರ್ಥಿಕ ನೆರವು (ಎಲ್ಲಾ ಕುಟುಂಬಗಳಿಗೂ 5 ಲಕ್ಷ ರೂ. ಆರೋಗ್ಯ ಸುರಕ್ಷೆ) ಜಾರಿಗೆ ರಾಜ್ಯ ಸರ್ಕಾರ ಚಿಂತನೆ ನಡೆಸಬೇಕಿದೆ. ಒಟ್ಟಾರೆ ಆರೋಗ್ಯ ವಲಯಕ್ಕೆ ಈ ಬಜೆಟ್‌ನಲ್ಲಿ ಆದ್ಯತೆ ನೀಡಿದ್ದು, 10ಕ್ಕೆ 7 ಅಂಕ ನೀಡಬಹುದು.
* ಸುದರ್ಶನ್ ಬಲ್ಲಾಳ, ಆರೋಗ್ಯ ತಜ್ಞರು