Advertisement

ಆರೋಗ್ಯ ಸಹಾಯಕಿ ನೇಮಕಕ್ಕೆ ಆಗ್ರಹ, ನಿರ್ಣಯ

02:50 AM Jul 11, 2017 | |

ನೆಲ್ಯಾಡಿ : ಗೋಳಿತ್ತೂಟ್ಟು ಗ್ರಾಮಕ್ಕೆ ಹಿರಿಯ ಆರೋಗ್ಯ ಸಹಾಯಕಿಯನ್ನು ನೇಮಕಗೊಳಿಸುವಂತೆ ಗೋಳಿತ್ತೂಟ್ಟು ಗ್ರಾ.ಪಂ. ಮಹಿಳಾ ಗ್ರಾಮಸಭೆಯಲ್ಲಿ ಒತ್ತಾಯಿಸಲಾಗಿದ್ದು  ಈ ಬಗ್ಗೆ  ಸಂಬಂಧಪಟ್ಟ ಇಲಾಖೆಗೆ ಮನವಿ ನೀಡಲು ನಿರ್ಣಯ ಕೈಗೊಳ್ಳಲಾಯಿತು.

Advertisement

ಸಭೆ ಗೋಳಿತ್ತೂಟ್ಟು ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಗ್ರಾ.ಪಂ.ಅಧ್ಯಕ್ಷೆ ಶಾಲಿನಿ ಶೇಖರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. 

ಸಭೆಯಲ್ಲಿ ಮಾತನಾಡಿದ ಆಶಾ ಕಾರ್ಯಕರ್ತೆ ಜಯಮಾಲಾ, ಗೋಳಿತ್ತೂಟ್ಟು ಗ್ರಾ.ಪಂ. ವ್ಯಾಪ್ತಿಗೆ ಸಂಬಂಧಪಟ್ಟಂತೆ ಆರೋಗ್ಯ ಕಾರ್ಯಕರ್ತೆ ಇಲ್ಲ. ಗೋಳಿತ್ತೂಟ್ಟು ಗ್ರಾ.ಪಂ.ವ್ಯಾಪ್ತಿಗೆ ಆರೋಗ್ಯ ಕಾರ್ಯಕರ್ತೆಯೊಬ್ಬರ ನೇಮಕ ಮಾಡಬೇಕೆಂದು ಹೇಳಿದರು. ಇದಕ್ಕೆ ಪೂರಕವಾಗಿ ಮಾತನಾಡಿದ ಅಧ್ಯಕ್ಷೆ ಶಾಲಿನಿ, ಉಪಾಧ್ಯಕ್ಷ ಪ್ರಸಾದ್‌ ಆರ್‌.ಕೆ. ಅವರು, ಗೋಳಿತ್ತೂಟ್ಟು ಗ್ರಾ.ಪಂ.ಗೆ ಸಂಬಂಧಪಟ್ಟ ಆರೋಗ್ಯ ಸಹಾಯಕಿ ವರ್ಗಾವಣೆಗೊಂಡು ಎರಡು ವರ್ಷಗಳು ಕಳೆದಿವೆ. ನೆಲ್ಯಾಡಿ ಗ್ರಾ.ಪಂ.ವ್ಯಾಪ್ತಿಗೆ ಒಳಪಟ್ಟ ಆರೋಗ್ಯ ಕಾರ್ಯಕರ್ತೆಯೇ ಗೋಳಿತ್ತೂಟ್ಟು ಗ್ರಾ.ಪಂ. ವ್ಯಾಪ್ತಿಯಲ್ಲೂ ಪ್ರಭಾರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ಆಶಾ ಕಾರ್ಯಕರ್ತೆಯರ ಮೇಲೆ ಹೊರೆ ಜಾಸ್ತಿಯಾಗಿದೆ. ಗ್ರಾಮಸಭೆ, ಸಾಮಾನ್ಯ ಸಭೆಗಳಲ್ಲೂ ನಿರ್ಣಯ ಕೈಗೊಂಡು ಆರೋಗ್ಯ ಸಹಾಯಕಿ ನೇಮಕಗೊಳಿಸುವಂತೆ ಕೇಳಿಕೊಳ್ಳಲಾಗಿದೆ. ಆದರೆ ಇನ್ನೂ ನೇಮಕವಾಗಿಲ್ಲ ಎಂದರು. 

ನಿರ್ಣಯ 
ಆಶಾ ಕಾರ್ಯಕರ್ತೆ ತುಲಾವತಿ ಮಾತನಾಡಿ, ಈಗಿರುವ ಆರೋಗ್ಯ ಕಾರ್ಯಕರ್ತೆಗೆ ಗೋಳಿತ್ತೂಟ್ಟು, ಆಲಂತಾಯ,  
ಕೊಣಾಲು, ನೆಲ್ಯಾಡಿ ಗ್ರಾಮಗಳಿವೆ. ಇದರಿಂದ ಗ್ರಾಮಸ್ಥರಿಗೆ  ತೊಂದರೆಯಾಗುತ್ತಿದೆ  ಎಂದರು. ಬಳಿಕ ಗೋಳಿತ್ತೂಟ್ಟು ಗ್ರಾ.ಪಂ.ವ್ಯಾಪ್ತಿಗೆ ಸಂಬಂಧಪಟ್ಟಂತೆ ಆರೋಗ್ಯ ಸಹಾಯಕಿಯೊಬ್ಬರನ್ನು ತುರ್ತಾಗಿ ನೇಮಕಗೊಳಿಸುವಂತೆ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಸ್ವತ್ಛತೆಗೆ ಆದ್ಯತೆ 
ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ.ಅಧ್ಯಕ್ಷೆ ಶಾಲಿನಿ ಶೇಖರ ಪೂಜಾರಿ ಮಾತನಾಡಿ, ಗ್ರಾಮಸ್ಥರು ಯಾವುದೇ ಸಮಸ್ಯೆಗಳಿದ್ದಲ್ಲಿ ನೇರವಾಗಿ ಗ್ರಾ.ಪಂ.ಕಚೇರಿಗೆ ಬಂದು ವಿಚಾರಿಸಿ ಬಗೆಹರಿಸಿಕೊಳ್ಳಬಹುದು. ಪ್ರತಿಯೊಬ್ಬರೂ ತಮ್ಮ ಮನೆಯ ಪರಿಸರದಲ್ಲಿ ಸ್ವತ್ಛತೆಗೆ ಆದ್ಯತೆ ನೀಡಬೇಕು.  ಇದನ್ನು ಕಾಪಾಡಿಕೊಂಡು ಬಂದಲ್ಲಿ ಮಲೇರಿಯಾ, ಡೆಂಗ್ಯೂ ಸೇರಿದಂತೆ ಯಾವುದೇ ರೋಗಗಳೂ ನಮಗೆ ಬರುವುದಿಲ್ಲ ಎಂದರು. ನರೇಗಾ ಯೋಜನೆಯಡಿ ಗೋಳಿತ್ತೂಟ್ಟಿನಲ್ಲಿ ಅಂಗನವಾಡಿ ಕೇಂದ್ರ ನಿರ್ಮಾಣಗೊಳ್ಳಲಿದೆ ಎಂದು ಅವರು ಹೇಳಿದರು. ಉಪಾಧ್ಯಕ್ಷ ಪ್ರಸಾದ್‌ ಕೆ.ಪಿ.ಮಾತನಾಡಿ, ಮಹಿಳೆಯರಿಗೆ ಸರಕಾರದಿಂದ ಹಲವು ಸವಲತ್ತುಗಳು ಸಿಗುತ್ತಿವೆ. ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದರು. 

Advertisement

ಅಂಗನವಾಡಿ ಮೇಲ್ವಿಚಾರಕಿ ಉಮಾವತಿ ಅವರು ಮಹಿಳಾ ಗ್ರಾಮಸಭೆಯ ಕುರಿತಂತೆ ಮಾಹಿತಿ ನೀಡಿದರು. ಪಿಡಿಒ ನಯನಕುಮಾರಿ ಉದ್ಯೋಗಖಾತ್ರಿ ಸೇರಿದಂತೆ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಬಿಎಲ್‌ಒ ಪ್ರಮೀಳಾ ಮತದಾರರ ಚೀಟಿಯಲ್ಲಿ ಹೆಸರು ನೋಂದಾವಣೆ ಕುರಿತಂತೆ ಮಾಹಿತಿ ನೀಡಿದರು.

ಗ್ರಾ.ಪಂ.ಸದಸ್ಯರಾದ ಗಾಯತ್ರಿರಾಜು, ಭವ್ಯಕುಮೇರು, ರೇಖಾ ಪಿ.ರೈ., ತುಳಸಿ, ವಾಣಿಶೆಟ್ಟಿ, ಪುರುಷೋತ್ತಮ, ಮುತ್ತಪ್ಪ ಗೌಡ, ಸುನೀತಾ ಅವರುಉಪಸ್ಥಿತರಿದ್ದರು. ಸಿಬಂದಿ ಬಾಬು ನಾಯ್ಕ ವಂದಿಸಿದರು. ಸಿಬಂದಿಗಳಾದ ಪುಷ್ಪಾ, ದಿನೇಶ್‌, ಯಶವಂತ ಅವರು ಸಹಕರಿಸಿದರು.

ಸ್ವತ್ಛತೆ, ದುರಸ್ತಿಗೆ ಬೇಡಿಕೆ
ಗೋಳಿತ್ತೂಟ್ಟು  ಜನತಾ ಕಾಲನಿ ವ್ಯಾಪ್ತಿಯಲ್ಲಿ ಆಡುಗಳನ್ನು ಬೇಕಾಬಿಟ್ಟಿ ಬಿಡಲಾಗುತ್ತಿರುವುದರಿಂದ ಜನರಿಗೆ ತೊಂದರೆಯಾಗುತ್ತಿದೆ. ಇಲ್ಲಿ  ಸ್ವತ್ಛತೆಗೆ ಆದ್ಯತೆ ಕೊಡುವಂತೆ ಹಾಗೂ ನೀರಿನ ಸಮಸ್ಯೆ ಪರಿಹರಿಸುವಂತೆ ಕಾಲನಿ ನಿವಾಸಿಗಳು ಆಗ್ರಹಿಸಿದರು. ಎಣ್ಣೆತ್ತೋಡಿಯಲ್ಲಿ ರಸ್ತೆ ದುರಸ್ತಿ, ಪೆರ್ಲ ದೇವಸ್ಥಾನದ ಸಮೀಪ ಕಾಲುದಾರಿ ದುರಸ್ತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮಹಿಳೆಯರು ಸಭೆಯಲ್ಲಿ ಮಂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next