ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಸಂಪೂರ್ಣ ಸತ್ಯವನ್ನು ಹೊರಗೆಳೆಯಿರಿ. ತಂತ್ರಜ್ಞಾನದ ಸಾಧ್ಯತೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಆರೋಪಿಗಳನ್ನು ಹೆಡೆಮುರಿಕಟ್ಟಿ ಎಂದು ಸಿಎಂ ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಮೈಯೆಲ್ಲ ಕಣ್ಣಾಗಿ ಕರ್ತವ್ಯ ನಿರ್ವಹಿಸಿ ಎಂದು ಸೂಚನೆ ನೀಡಿದ್ದಾರೆ.
ಘಟನೆಗೆ ಸಂಬಂಧಪಟ್ಟಂತೆ ಗೃಹ ಸಚಿವರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಜತೆಗೆ ಸಭೆ ನಡೆಸಿದ ಅವರು ತನಿಖೆಯ ಇದುವರೆಗಿನ ಪ್ರಗತಿ ಬಗ್ಗೆ ಮಾಹಿತಿ ಪಡೆದುಕೊಂಡರು. ಪೊಲೀಸರು ಇಂಥ ಘಟನೆ ನಡೆದಾಗ ಮಾತ್ರ ಎಚ್ಚರಿಕೆ ವಹಿಸಿ ಅನಂತರ ಮೈ ಮರೆಯಬಾರದು. ಸಮಾಜ ದ್ರೋಹಿಗಳ ಬಗ್ಗೆ ಯಾವುದೇ ಸಹಾನುಭೂತಿ ಇಲ್ಲದೆ ಕ್ರಮ ಜರಗಿಸಿ ಎಂದು ಸೂಚನೆ ನೀಡಿದರು.
ಜನನಿಬಿಡ ಸ್ಥಳಗಳನ್ನು ಗುರುತಿಸಿ ಅಂಥ ಪ್ರದೇಶಗಳಲ್ಲಿ ಪೊಲೀಸ್ ಗಸ್ತು ಹೆಚ್ಚಿಸಿ, ಜನರಿಗೆ ರಕ್ಷಣೆ ಒದಗಿಸಬೇಕು. ತನಿಖೆ ಚುರುಕುಗೊಳಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಜನರ ದಾರಿ ತಪ್ಪಿಸುವ ಕೆಲಸವನ್ನು ಮಟ್ಟ ಹಾಕಬೇಕು. ಈ ಬಗ್ಗೆ ಪೊಲೀಸ್ ಇಲಾಖೆ ಜತೆಗೆ ಪ್ರತ್ಯೇಕ ಸಭೆ ಕರೆಯೋಣ. ಸಮಯ ಸಂದರ್ಭಕ್ಕೆ ತಕ್ಕಂತೆ ನಾವೂ ಬದಲಾಗಬೇಕು. ತ್ವರಿತಗತಿಯಲ್ಲಿ ಕೆಲಸ ಮಾಡಬೇಕು. ಅಗತ್ಯ ಬಿದ್ದರೆ ಅಂತಾರಾಜ್ಯ ಪೊಲೀಸರ ಸಹಕಾರ ಪಡೆಯಲು ಯಾವುದೇ ಅಳುಕು ಬೇಡ. ಗುಪ್ತಚರ ಇಲಾಖೆ ಹೆಚ್ಚು ಜಾಗೃತವಾಗಿರಬೇಕು ಎಂದು ಕಿವಿಮಾತು ಹೇಳಿದರು.
ಸಭೆಯಲ್ಲಿ ಗೃಹ ಸಚಿವ ಡಾ| ಜಿ. ಪರಮೇಶ್ವರ್, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಕಾರ್ಯದರ್ಶಿ ಡಾ| ತ್ರಿಲೋಕ್‌ಚಂದ್ರ, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಉಮಾಶಂಕರ್, ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಪೊಲೀಸ್ ಆಯುಕ್ತ ಬಿ. ದಯಾನಂದ್ ಇತರರಿದ್ದರು.
ಸಿಎಂಗೆ ವಿವರಿಸಿದ ಅಧಿಕಾರಿಗಳು
ಸಭೆ ಮುಗಿದ ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳು ಸಿಎಂ ಕಚೇರಿಯ ಸಿಬಂದಿಯನ್ನು ಹೊರಗೆ ಕಳುಹಿಸಿ ಘಟನೆ ಬಗ್ಗೆ ವಿವರಿಸಿದ್ದಾರೆ. ಸಭೆಯಲ್ಲಿ ಅಧಿಕಾರಿಗಳು ಆತ್ಮವಿಶ್ವಾಸದಿಂದಿದ್ದರು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹತ್ವದ ಸುಳಿವು ಲಭಿಸಿದೆ ಎಂದು ಹೇಳಲಾಗುತ್ತಿದೆ. ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಒತ್ತಡಕ್ಕೆ ಮಣಿದು ಗಡಿಬಿಡಿಯಲ್ಲಿ ತನಿಖೆ ನಡೆಸುವುದು ಬೇಡ. ಎಲ್ಲ ಸತ್ಯಾಂಶಗಳು ಹೊರಗೆ ಬರಲಿ ಎಂದು ಸಿಎಂ ಸಿದ್ದರಾಮಯ್ಯ ನಿರ್ದೇಶನ ನೀಡಿದ್ದಾರೆ.