ಬೆಂಗಳೂರು: “ಕುಟುಂಬ ರಾಜಕಾರಣ’ದ ಹೆಸರಲ್ಲಿ ಜೆಡಿಎಸ್ ಪಕ್ಷ ಮುಂದಿಟ್ಟುಕೊಂಡು ನಮ್ಮ ಕುಟುಂಬದ ತಂಟೆಗೆ ಬಂದರೆ ಸುಮ್ಮನಿರಲ್ಲ ಎಂದು ಬಿಜೆಪಿಗೆ ಎಚ್ಚರಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸ್ವತಃ ಬಿಜೆಪಿಯೇ ಕುಟುಂಬ ರಾಜಕಾರಣದಲ್ಲಿ ತೊಯ್ದಾಡುತ್ತಿದೆ ಎಂದು ಹೇಳಿದ್ದಾರೆ.
ಜೆಡಿಎಸ್ ಕುಟುಂಬ ರಾಜಕರಣ ಮಾಡುತ್ತಿದೆ. ಅದು ದೇವೇಗೌಡರ ಕುಟುಂಬಕ್ಕೆ ಮಾತ್ರ ಸೀಮಿತವಾಗಿದೆ ಎಂಬ ಬಿಜೆಪಿ ಟ್ವಿಟ್‌ಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ ಅವರು, ನಿರ್ದಿಷ್ಟವಾಗಿ ಇಂಥವರೇ ರಾಜಕೀಯ ಬರಬೇಕು ಎಂದು ಸಂವಿಧಾನದಲ್ಲಿ ಗೆರೆ ಎಳೆದಿಲ್ಲ. ಸ್ವತಃ ಬಿಜೆಪಿ ಕುಟುಂಬ ರಾಜಕಾರಣದಲ್ಲಿ ತೊಯ್ದಾಡುತ್ತಿದೆ. ತನ್ನ ಹುಳುಕನ್ನು ಮರೆಮಾಚಲು ಜೆಡಿಎಸ್ ಮೇಲೆ ಕೆಸರು ಎರಚುತ್ತಿದೆ ಎಂದು ತಿರುಗೇಟು ನೀಡಿದರು.
ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಇಲ್ಲವೇ? ನಾವೂ ಒಂದು ಪಟ್ಟಿ ಕೊಟ್ಟಿದ್ದೇವೆ. ಇನ್ನು ಬೇಕಾದಷ್ಟು ಪಟ್ಟಿಗಳಿವೆ. ಹೇಳುತ್ತಾ ಹೋದ್ದರೆ ಅದು ಮುಗಿಯದ ಕಥೆ ಆಗುತ್ತದೆ. ಕುಟುಂಬ ರಾಜಕಾರಣದ ನೆಪದಲ್ಲಿ ಸುಮ್ಮನೆ ನಮ್ಮ ಕುಟುಂಬದ ತಂಟೆಗೆ ಬರುವುದು ಬೇಡ ಎಂದು ಬಿಜೆಪಿಗೆ ಎಚ್ಚರಿಕೆ ನೀಡಿದರು.
ದೇವೇಗೌಡರು ಸುದೀರ್ಘ ಅವಧಿಯಲ್ಲಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ ನಿಜ. ನಾಳೆ ಯಾರಾದರೂ ಬಂದರೂ ಅವರಿಗೆ ಆ ಪದವಿ ಬಿಟ್ಟುಕೊಡಲು ಅವರು ಸಿದ್ಧರಿದ್ದಾರೆ. ನಮ್ಮದು ಪ್ರಾದೇಶಿಕ ಪಕ್ಷ. ನಮ್ಮ ವೈಯಕ್ತಿಕ ವರ್ಚಸ್ಸಿನ ಲ್ಲೇ ಪಕ್ಷ ನಡೆಯಬೇಕು ಎಂದ ಅವರು; ದೇವೇಗೌಡರ ಕಾಲದಲ್ಲಿ ಬಿಟ್ ಕಾಯಿನ್ ಹಗರಣ ನಡೆದಿತ್ತಾ? ಹೋಗಲಿ, ನಾನು ಸಿಎಂ ಆಗಿದ್ದಾಗ ಯಾವುದಾದರೂ ಹಗರಣ ಆಗಿತ್ತಾ? ಅದ್ಯಾವುದೋ 150 ಕೋಟಿ ರೂಪಾಯಿ ಆರೋಪ ಹೊರಿಸಿದ್ದರು. ಆ ಸುಳ್ಳು ಆರೋಪ ಎಲ್ಲಿಗೆ ಹೋಯಿತು ಎನ್ನುವುದು ರಾಜ್ಯದ ಜನರಿಗೆ ಗೊತ್ತಿದೆ ಎಂದು ಬಿಜೆಪಿಗೆ ಅವರು ತಿರುಗೇಟು ಕೊಟ್ಟರು.
ಇದನ್ನೂ ಓದಿ:ಅಂತೂ ಚಾಮರಾಜನಗರ ಜಿಲ್ಲಾಧಿಕಾರಿ ಡಾ. ರವಿ ವರ್ಗಾವಣೆ
ಬಿಜೆಪಿಯವರು ಎಂಥಾ ಹೀನ ರಾಜಕೀಯ ಮಾಡುತ್ತಿದ್ದಾರೆ ಎನ್ನುವುದು ದೇಶಕ್ಕೆ ಗೊತ್ತಿದೆ. ಶಾಸಕರನ್ನು ಖರೀದಿ ಮಾಡಿ ಚುನಾವಣೆ ಮತ್ತು ರಾಜಕೀಯ ವ್ಯವಸ್ಥೆಯನ್ನು ಹದಗೆಡಿಸುತ್ತಿದ್ದಾರೆ. ಇವತ್ತು ಆಪರೇಷನ್ ಕಮಲ ಇಡೀ ದೇಶವೆಲ್ಲಾ ಹಬ್ಬುತ್ತಿದೆ. ಇದು ಒಳ್ಳೆಯ ರಾಜಕಾರಣವಾ? ಎಂದು ಮಾಜಿ ಮುಖ್ಯಮಂತ್ರಿಗಳು ಪ್ರಶ್ನಿಸಿದರು.