Advertisement

“8 ಕಿ.ಮೀ. ನಡೆದೇ ಬಂದೆವು…’; ತಾಯ್ನಾಡು ತಲುಪಿದ ವಿದ್ಯಾರ್ಥಿಗಳ ಮಾತು

09:51 PM Feb 27, 2022 | Team Udayavani |

ನವದೆಹಲಿ: “ರೊಮ್ಯಾನಿಯಾ ಗಡಿಯನ್ನು ತಲುಪಲು 8 ಕಿ.ಮೀ. ನಡೆದುಕೊಂಡೇ ಬಂದೆವು. ಒಂದು ಬಾರಿ ಭಾರತದ ನೆಲಕ್ಕೆ ಕಾಲಿಟ್ಟರೆ ಸಾಕು ಎಂದು ಭಾವಿಸಿದ್ದೆವು. ವಿಮಾನ ಲ್ಯಾಂಡ್‌ ಆಗುತ್ತಿದ್ದಂತೆ ನಿರಾಳ ಭಾವ ಮೂಡಿತು…’

Advertisement

ಯುದ್ಧಪೀಡಿತ ದೇಶದಿಂದ ವಾಪಸಾದ ಭಾರತೀಯ ವಿದ್ಯಾರ್ಥಿಗಳು ಆಡಿರುವ ಮಾತುಗಳಿವು. ಉಕ್ರೇನ್‌ನಲ್ಲಿ ಜೀವಭಯದಿಂದ ಬಂಕರ್‌ಗಳಲ್ಲಿ ದಿನದೂಡುತ್ತಿದ್ದ ಹಲವು ಭಾರತೀಯರು ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿದ್ದಾರೆ. ತಾಯ್ನಾಡಿಗೆ ಮರಳಿದ ಸಮಾಧಾನವಿದ್ದರೂ, ಭವಿಷ್ಯದ ಬಗೆಗಿನ ಚಿಂತೆ ಅನೇಕರನ್ನು ಕಾಡುತ್ತಿದೆ. ಉಕ್ರೇನ್‌ನಲ್ಲಿ ಪರಿಸ್ಥಿತಿ ತಿಳಿಗೊಂಡರೆ ಸಾಕು, ನಮಗೆ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಬಹುದು ಎಂದು ಹಲವು ಹೇಳಿಕೊಂಡಿದ್ದಾರೆ.

ಇನ್ನು ಕೆಲವರು, ಉಕ್ರೇನ್‌ನಲ್ಲಿ ಇನ್ನೂ ಹಲವು ವಿದ್ಯಾರ್ಥಿಗಳು ಉಳಿದಿದ್ದು, ಅವರನ್ನು ಬೇಗನೆ ಕರೆತನ್ನಿ ಎಂದು ಕೋರಿಕೊಂಡಿದ್ದೂ ಕಂಡುಬಂತು.

ಉಕ್ರೇನ್‌ನಲ್ಲಿ ಅನೇಕರು ಜೀವ ಉಳಿಸಿಕೊಳ್ಳುವುದಕ್ಕಾಗಿ ವಲಸೆ ಹೋಗುತ್ತಿದ್ದಾರೆ. ಹೀಗಾಗಿ ಹೆದ್ದಾರಿಗಳಲ್ಲಿ ಮುಂದೆ ಸಾಗಲು ಸಾಧ್ಯವಾಗದಷ್ಟು ಟ್ರಾಫಿಕ್‌ ಜಾಮ್‌ ಇದೆ. ನಾನು ಮತ್ತು ನನ್ನ ಗೆಳೆಯರು ಉಕ್ರೇನ್‌-ರೊಮ್ಯಾನಿಯಾ ಗಡಿಯಲ್ಲಿ ಬರೋಬ್ಬರಿ 12 ಗಂಟೆಗಳ ಕಾಲ ಕಾಯಬೇಕಾಯಿತು. ಹಲವಾರು ಪ್ರಕ್ರಿಯೆಗಳನ್ನು ಪೂರೈಸಬೇಕಿದ್ದರಿಂದ ತಡವಾಯಿತು ಎಂದು ಕೇರಳದ ವಿಪಿನ್‌ ಹೇಳಿದ್ದಾರೆ.

ಶನಿವಾರದಿಂದ ಭಾರತ ಸರ್ಕಾರವು ತನ್ನ ನಾಗರಿಕರ ಸ್ಥಳಾಂತರ ಪ್ರಕ್ರಿಯೆ ಆರಂಭಿಸಿದ್ದು, 219 ಭಾರತೀಯರನ್ನು ಹೊತ್ತ ಮೊದಲ ವಿಮಾನ ಮುಂಬೈ ಏರ್‌ಪೋರ್ಟ್‌ಗೆ ಶನಿವಾರ ಬಂದಿತ್ತು. ಎರಡನೇ ವಿಮಾನ(250 ಮಂದಿ) ಭಾನುವಾರ ಬೆಳಗಿನ ಜಾವ 2.45ಕ್ಕೆ ದೆಹಲಿಯಲ್ಲಿ ಲ್ಯಾಂಡ್‌ ಆಗಿದೆ. ಭಾನುವಾರ ರಾತ್ರಿ ಮತ್ತೆರಡು ವಿಮಾನಗಳು ಬಂದಿಳಿದಿವೆ.

Advertisement

ರಕ್ಷಣಾ ವಿಮಾನ: ಗಂಟೆಗೆ 8 ಲಕ್ಷ ರೂ. ವೆಚ್ಚ
ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುತ್ತಿರುವ ಏರಿಂಡಿಯಾ ವಿಮಾನಕ್ಕೆ ಪ್ರತಿ ಗಂಟೆಗೆ ಆಗುತ್ತಿರುವ ಖರ್ಚು ಎಷ್ಟು ಗೊತ್ತೇ? 7ರಿಂದ 8 ಲಕ್ಷ ರೂ.! ಪ್ರತಿ ವಿಮಾನಕ್ಕೆ ಭಾರತದಿಂದ ಹೋಗಿ, ವಾಪಸ್‌ ಬರಲು ಒಟ್ಟಾರೆ 1.10 ಕೋಟಿ ರೂ. ವೆಚ್ಚವಾಗುತ್ತಿದೆ. ಸಿಬ್ಬಂದಿಗೆ ಕೊಡುವ ವೇತನ, ವೈಮಾನಿಕ ಇಂಧನ, ನೇವಿಗೇಷನ್‌, ಲ್ಯಾಂಡಿಂಗ್‌ ಮತ್ತು ಪಾರ್ಕಿಂಗ್‌ ಶುಲ್ಕವೂ ಇದರಲ್ಲಿ ಒಳಗೊಂಡಿದೆ. ಭಾರತ ಸರ್ಕಾರವೇ ಈ ವಿಮಾನಗಳನ್ನು ಬಾಡಿಗೆಗೆ ಪಡೆದು ಭಾರತೀಯರನ್ನು ಕರೆತರುತ್ತಿದೆ. ಒಂದು ಡ್ರೀಮ್‌ಲೈನರ್‌ ವಿಮಾನಕ್ಕೆ ಗಂಟೆಗೆ 5 ಟನ್‌ ಇಂಧನದ ಅವಶ್ಯಕತೆಯಿರುತ್ತದೆ.

ಭಾರತೀಯ ವಿದ್ಯಾರ್ಥಿಗಳ ಮೇಲೆ ಯೋಧರಿಂದ ಹಲ್ಲೆ?
ಸ್ವದೇಶಕ್ಕೆ ಮರಳುವ ಉದ್ದೇಶದಿಂದ ಉಕ್ರೇನ್‌ನ ನೆರೆದೇಶವಾದ ಪೋಲೆಂಡ್‌ನ‌ ಗಡಿಯತ್ತ ಕಿಲೋಮೀಟರ್‌ಗಟ್ಟಲೆ ನಡೆಯುತ್ತಿರುವ ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್‌ನ ಯೋಧರು ಹಾಗೂ ಪೊಲೀಸರು ಥಳಿಸಿರುವ ಆರೋಪಗಳು ಕೇಳಿಬಂದಿವೆ. ಮಲಯಾಳಿ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಹಲ್ಲೆಗಳಾಗಿವೆ ಎಂದು ಏಂಜೆಲ್‌ ಎಂಬ ಕೇರಳ ಮೂಲದ ವಿದ್ಯಾರ್ಥಿನಿ, ತಮ್ಮ ವಿಡಿಯೋ ಸಂದೇಶವೊಂದರಲ್ಲಿ ದೂರಿದ್ದಾರೆ.

“ಪೋಲೆಂಡ್‌ ಗಡಿಯತ್ತ ನಡೆದು ಬರುತ್ತಿರುವ ನಮ್ಮನ್ನು ಯೋಧರು, ಪೊಲೀಸರು ಹೊಡೆದಿದ್ದಾರೆ. ಪ್ರತಿರೋಧ ತೋರಿದ್ದಕ್ಕೆ ನನ್ನನ್ನು ರಸ್ತೆಗೆ ತಳ್ಳಿದ್ದಾರೆ. ನನ್ನ ಬೆಂಬಲಕ್ಕೆ ಬಂದ ನನ್ನ ಸಹಪಾಠಿಯನ್ನೂ ರಸ್ತೆಗೆ ತಳ್ಳಿದ್ದಾರೆ” ಎಂದು ವಿದ್ಯಾರ್ಥಿನಿ ವಿಡಿಯೋದಲ್ಲಿ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next