Advertisement

ಪೊಲೀಸರ ಮೇಲೆ ಹಲ್ಲೆ ನಡೆಸಿದವನಿಗೆ ಗುಂಡೇಟು

11:38 AM Jun 23, 2018 | Team Udayavani |

ಕೆ.ಆರ್‌.ಪುರ: ರೌಡಿಶೀಟರ್‌ನನ್ನು ಹತ್ಯೆಗೈದು ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಲು ಹೋದ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ ಒಬ್ಬನಿಗೆ ಗುಂಡಿನ ರುಚಿ ತೋರಿಸಿದ ಪೊಲೀಸರು, ಒಟ್ಟು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಸೀಗೇಹಳ್ಳಿ ಚರಣ್‌ರಾಜ್‌ (34) ಪೊಲೀಸರ ಮೇಲೆ ಹಲ್ಲೆ ನಡೆಸಿ ಗುಂಡೇಟಿನಿಂದ ಗಾಯಗೊಂಡು ಬಂಧಿತನಾದ ಆರೋಪಿ.

Advertisement

ಇದೇ ವೇಳೆ ಚರಣ್‌ರಾಜ್‌ ಕೃತ್ಯಕ್ಕೆ ಸಹಾಯ ಮಾಡಿದ ರಘು ಮತ್ತು ಮುರಳಿ ಎಂಬುವರನ್ನೂ ಬಂಧಿಸಲಾಗಿದೆ. ಚರಣ್‌ರಾಜ್‌ ನಡೆಸಿದ ಹಲ್ಲೆಯಿಂದ ಕೆ.ಆರ್‌.ಪುರ ಠಾಣೆ ಎಎಸ್‌ಐ ನಾರಾಯಣಸ್ವಾಮಿ ಅವರಿಗೆ ಗಾಯವಾಗಿದೆ. ಪೊಲೀಸರು ಹಾರಿಸಿದ ಗುಂಡು ಆರೋಪಿಯ ಎಡಗಾಲಿಗೆ ಬಿದ್ದಿದ್ದು, ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ರೌಡಿಶೀಟರ್‌ ಮಂಜುನಾಥ್‌ ಅಲಿಯಾಸ್‌ ವಾಟರ್‌ ಮಂಜ ಎಂಬಾತ ಆರೋಪಿ ಚರಣ್‌ರಾಜ್‌ ಬಳಿ ಅಯ್ಯಪ್ಪ ನಗರದಲ್ಲಿ 15 ಲಕ್ಷ ರೂ. ಮೌಲ್ಯದ ನಿವೇಶನ ಖರೀದಿಸಿದ್ದ. ಆದರೆ, 15 ಲಕ್ಷ ರೂ. ಪೈಕಿ ಅರ್ಧ ಹಣ ಮಾತ್ರ ನೀಡಿದ್ದ ಮಂಜ, ಉಳಿದ ಹಣ ನೀಡದೆ ನಿವೇಶನದಲ್ಲಿ ಮನೆ ನಿರ್ಮಿಸಿಕೊಂಡಿದ್ದ.

ಈ ಮಧ್ಯೆ ನಿವೇಶನವನ್ನು ತನ್ನ ಹೆಸರಿಗೆ ನೋಂದಣಿ ಮಾಡಿಸುವಂತೆ ಚರಣ್‌ರಾಜ್‌ನನ್ನು ಮಂಜ ಕೇಳಿದ್ದು, ಬಾಕಿ ಹಣ ಪಾವತಿಸಿದರೆ ಮಾತ್ರ ನೋಂದಣಿ ಮಾಡಿಸುವುದಾಗಿ ಚರಣ್‌ರಾಜ್‌ ಪ್ರತಿಕ್ರಿಯಿಸಿದ್ದ. ಆದರೆ, ನಿವೇಶನಕ್ಕೆ ಸೂಕ್ತ ದಾಖಲೆಗಳಿಲ್ಲ ಎಂದು ಹೇಳಿ ಮಂಜ ಹಣ ನೀಡಲು ನಿರಾಕರಿಸಿದ್ದ. ಇದೇ ವಿಚಾರಕ್ಕೆ ಮಂಜ ಮತ್ತು ಚರಣ್‌ರಾಜ್‌ ನಡುವೆ ಜಗಳ ನಡೆದಿತ್ತು. 

ಇದರಿಂದ ಆಕ್ರೋಶಗೊಂಡಿದ್ದ ಚರಣ್‌ರಾಜ್‌ ತನ್ನ ಸಹಚರರೊಂದಿಗೆ ಸೇರಿ ಗುರುವಾರ ಹಳೇ ಮದ್ರಾಸ್‌ ರಸ್ತೆಯ ಮೇಡಹಳ್ಳಿ ಬಳಿ ರೌಡಿಶೀಟರ್‌ ಮಂಜುನಾಥ ಅಲಿಯಾಸ್‌ ವಾಟರ್‌ ಮಂಜನನ್ನು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಡಿಸಿಪಿ ಅಬ್ದುಲ್‌ ಅಹ್ಮದ್‌ ವಿಶೇಷ ತಂಡ ರಚಿಸಿದ್ದರು.

Advertisement

ತಲೆಮರೆಸಿಕೊಂಡಿದ್ದ ಆರೋಪಿ ಚರಣ್‌ರಾಜ್‌ ಶುಕ್ರವಾರ ನಸುಕಿನ 5 ಗಂಟೆ ಸುಮಾರಿಗೆ ಕಾಡುಗೋಡಿಯ ಕುಂಬೇನ ಅಗ್ರಹಾರ ಬಳಿ ದ್ವಿಚಕ್ರ ವಾಹದಲ್ಲಿ ತೆರಳುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಕೆ.ಆರ್‌.ಪುರ ಠಾಣೆ ಇನ್ಸ್‌ಪೆಕ್ಟರ್‌ ಜಯರಾಜ್‌ ಮತ್ತು ಸಿಬ್ಬಂದಿ ಆರೋಪಿಯನ್ನು ಬೆನ್ನಟ್ಟಿ ಬೆಳೂ¤ರು ಬಳಿ ದ್ವಿಚಕ್ರ ವಾಹನ ಅಡ್ಡಗಟ್ಟಿದರು.

ಈ ವೇಳೆ ಚರಣ್‌ರಾಜ್‌ ಬೈಕ್‌ ಬಿಟ್ಟು ಓಡಿಹೋಗಲು ಯತ್ನಿಸಿದಾಗ ಎಎಸ್‌ಐ ನಾರಾಯಣಸ್ವಾಮಿ ಆತನನ್ನು ಹಿಡಿಯಲು ಮುಂದಾದರು. ತಕ್ಷಣ ತನ್ನಲ್ಲಿದ್ದ ಮಾರಕಾಸ್ತ್ರದಿಂದ ನಾರಾಯಣಸ್ವಾಮಿ ಮೇಲೆ ಹಲ್ಲೆ ನಡೆಸಿ ಮತ್ತೆ ಓಡಲು ಮುಂದಾದ. ಶರಣಾಗುವಂತೆ ಎಚ್ಚರಿಸಿದರೂ ಕೇಳದೆ ಆತ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಇನ್ಸ್‌ಪೆಕ್ಟರ್‌ ಮೇಲೂ ಹಲ್ಲೆಗೆ ಮುಂದಾದ.

ಆಗ ಪ್ರಾಣರಕ್ಷಣೆಗಾಗಿ ಇನ್ಸ್‌ಪೆಕ್ಟರ್‌ ಜಯರಾಜ್‌ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಇದರಿಂದ ಕುಸಿದು ಬಿದ್ದ ಆರೋಪಿಯನ್ನು ಬಂಧಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು. ಬಂಧಿತ ಚರಣ್‌ರಾಜ್‌ ವಿರುದ್ಧ ಯಾವುದೇ ಅಪರಾಧ ಪ್ರಕರಣಗಳಿಲ್ಲ. ಆತನ ಸಹೋದರ ಕಳೆದ ಬಾರಿ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದ ಎಂದು ಅವರು ಮಾಹಿತಿ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next