ಹನೂರು: ಬೆಳಕಿನ ಹಬ್ಬ ದೀಪಾವಳಿ ವೇಳೆ ಪಟಾಕಿ ಸಿಡಿತದಿಂದ ಹೆಚ್ಚಿನ ಪ್ರಮಾಣದಲ್ಲಿ ಶಬ್ದ, ವಾಯು ಮಾಲಿನ್ಯ ಉಂಟಾಗುತ್ತಿದ್ದು, ಇದನ್ನು ತಡೆಗಟ್ಟು ನಿಟ್ಟಿನಲ್ಲಿ ಕಡಿಮೆ ಪ್ರಮಾಣದ ಹೊಗೆ ಮತ್ತು ಮಾಲಿನ್ಯತೆಯ ಪ್ರಮಾಣವನ್ನು ತಗ್ಗಿಸುವ ಹಸಿರು ಪಟಾಕಿಗಳನ್ನು ಸಿದ್ಧಗೊಳಿಸಲಾಗಿದೆ. ಆದರೆ, ಇನ್ನೂ ಸಹ ಈ ಪಟಾಕಿಗಳು ಮಾರುಕಟ್ಟೆಗೆ ಬಂದಿಲ್ಲ. ಆದ್ದರಿಂದ ಇದರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಇಲ್ಲದಂತಾಗಿದೆ.
ಏನಿದು ಹಸಿರು ಪಟಾಕಿ?: ದೀಪಾವಳಿ ವೇಳೆ ಪ್ರತಿ ಮನೆಯಲ್ಲಿಯೂ ಹಬ್ಬ ಆಚರಣೆ ಮಾಡುವುದು ಸಂಪ್ರದಾಯ. ಆದರೆ, ಈ ವೇಳೆ ಪಟಾಕಿ ಸಿಡಿಸುವುದರಿಂದ ವಾಯು ಮತ್ತು ಶಬ್ಧಮಾಲಿನ್ಯ ಉಂಟಾಗುತ್ತದೆ. ಇದರಿಂದ ಪರಿಸರದ ಮೇಲೆ ಪರಿಣಾಮ ಉಂಟಾಗುತ್ತದೆ. ಈ ಹಿನ್ನೆಲೆ ಮಾಲಿನ್ಯಕ್ಕೆ ಕಡಿವಾಣಕ್ಕೆ ಸುಪ್ರೀಂಕೋರ್ಟ್ ಪರಿಸರ ಸ್ನೇಹಿ ಹಸಿರು ಪಟಾಕಿಗಳನ್ನು ತಯಾರಿಸಿ, ಮಾರುಕಟ್ಟೆಗೆ ಬಿಡುವಂತೆ ಸೂಚನೆ ನೀಡಿತ್ತು.
ಈ ರೀತಿಯ ಪಟಾಕಿ ಬಳಕೆ ಮಾಡುವುದರಿಂದ ಸಾಮಾನ್ಯ ಪಟಾಕಿಗಿಂತ ಶೇ.40ರಷ್ಟು ಮಾಲಿನ್ಯ ಪ್ರಮಾಣ ತಗ್ಗಲಿದೆ ಎಂದು ಸಂಶೋಧಕರು ವರದಿ ನೀಡಿದ್ದಾರೆ. ಆದರೆ, ಈ ಹಸಿರು ಪಟಾಕಿ ಉತ್ಪಾದನೆ ಇನ್ನೂ ಸಹ ಪ್ರಾಥಮಿಕ ಹಂತದಲ್ಲಿಯೇ ಇದ್ದು, ದೇಶದ ಪ್ರಮುಖ ನಗರಗಳ ಮಾರುಟ್ಟೆಯಲ್ಲಷ್ಟೇ ಲಭ್ಯವಾಗುತ್ತಿದೆ. ಇನ್ನೂ ಸಹ ಜಿಲ್ಲಾ ಅಥವಾ ತಾಲೂಕು ಮಟ್ಟದ ಮಾರುಕಟ್ಟೆಗಳಿಗೆ ಬಂದಿಲ್ಲ.
ಅಧಿಕಾರಿಗಳು, ಸಾರ್ವಜನಿಕರಿಗೆ ಅರಿವಿಲ್ಲ: ಪರಿಸರ ಸ್ನೇಹಿ ಹಸಿರು ಪಟಾಕಿಯ ಬಗ್ಗೆ ದೇಶದ ಮಹಾನಗರಗಳಲ್ಲಿ ಮಾತ್ರ ಅರಿವು ಮೂಡಿಸುವ ಕೆಲಸವಾಗುತ್ತಿದೆ. ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಈ ಬಗ್ಗೆ ಸರ್ಕಾರಿ ಇಲಾಖೆಗಳ ಅಧಿಕಾರಿಗಳಿಗೆ ಮಾಹಿತಿಯಿಲ್ಲ. ಇನ್ನೂ ಸಾರ್ವಜನಿಕರಿಗೆ ಈ ಬಗ್ಗೆ ಕನಿಷ್ಠ ಮಾಹಿತಿಯೂ ಇಲ್ಲ. ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಕೈಗೊಳ್ಳುತ್ತಿರುವ ಆಂದೋಲನ, ಜಾಗೃತಿ ಕಾರ್ಯಕ್ರಮಗಳು ಸಾರ್ವಜನಿಕರಿಗೆ ತಲುಪದೇ ಇರುವುದು ವಿಪರ್ಯಾಸವಾಗಿದೆ.
ಪಟ್ಟಣದಲ್ಲಿ ಮೂರು ಮಳಿಗೆಗಳು: ಈ ಬಾರಿಯ ದೀಪಾವಳಿಗೆ ಹನೂರು ಪಟ್ಟಣದಲ್ಲಿ 3 ಮಾರಾಟ ಮಳಿಗೆಗಳನ್ನು ತೆರೆಯಲಾಗಿದೆ. ಈಗಾಗಲೇ ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳಿಂದ ಅಗತ್ಯ ಪರವಾನಗಿ ಪಡೆದು ವ್ಯಾಪಾರ ವಹಿವಾಟು ಆರಂಭಿಸಲಾಗಿದೆ. ಆದರೆ, ಮಳಿಗೆದಾರರ ಪ್ರಕಾರ ಪಟಾಕಿ ವ್ಯಾಪಾರ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದ್ದು, ಪಟಾಕಿ ಖರೀದಿಸುವವರ ಸಂಖ್ಯೆ ಕಡಿಮೆಯಿದೆ. ಅಲ್ಲದೆ, ಹನೂರು ಭಾಗವು ತಮಿಳುನಾಡಿನ ಗಡಿಭಾಗವಾದ್ದರಿಂದ ಪ್ರತಿದಿನ ವ್ಯಾಪಾರ ವಹಿವಾಟಿಗಾಗಿ ನೆರೆಯ ತಮಿಳುನಾಡಿಗೆ ತೆರಳುವವರು ನೇರವಾಗಿ ತಮಿಳುನಾಡಿನಿಂದಲೇ ಖರೀದಿಸಿದರೆ ಬೆಲೆ ಕಡಿಮೆಯಾಗುತ್ತದೆ ಎಂದು ಅಲ್ಲಿಂದಲೇ ಖರೀದಿಸಿ ತರುತ್ತಿದ್ದಾರೆ. ಇದರಿಂದ ಇಲ್ಲಿನ ವ್ಯಾಪಾರಿಗಳಿಗೂ ಸಹ ತೊಂದರೆಯಾಗುತ್ತಿದೆ ಎಂದು ಕೇಳಿ ಬರುತ್ತಿದೆ.
ಹಸಿರು ಪಟಾಕಿ ಬಳಕೆಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ತಾಲೂಕು ಆಡಳಿತದಿಂದ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ನಮಗೆ ಯಾವುದೇ ಸೂಚನೆಗಳೂ ಬಂದಿಲ್ಲ. ಆದರೆ, ಜಿಲ್ಲಾಧಿಕಾರಿಗಳು ಪತ್ರಿಕಾ ಪ್ರಕಟಣೆಗಳನ್ನು ಹೊರಡಿಸಿದ್ದು, ಸಾರ್ವಜನಿಕರಲ್ಲಿ ಅರಿವು ಮೂಡಿಸಿದ್ದಾರೆ.
-ಬಿ.ಪಿ.ಮಾದೇಶ್, ರಾಜಸ್ವ ನಿರೀಕ್ಷಕ
ಕಳೆದ 4 ವರ್ಷಗಳಿಂದ ಹನೂರಲ್ಲಿ ಪಟಾಕಿ ಸಂಬಂಧಿಸಿದ ಯಾವುದೇ ಅನಾಹುತ ಸಂಭವಿಸಿಲ್ಲ. ಆದರೂ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಕೇಂದ್ರಸ್ಥಾನದಿಂದ ಹೊರ ಹೋಗದಂತೆ ಜಿಲ್ಲಾ ಆರೋಗ್ಯಾಧಿಕಾರಿಗಳು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆ ಎಲ್ಲರೂ ಸನ್ನದ್ಧವಾಗಿದ್ದು, ಯಾವುದೇ ಅವಘಡಗಳು ಸಂಭವಿಸದೆ ಇರಲಿ. ಒಂದೊಮ್ಮೆ ಯಾವುದಾದರೂ ಅವಘಡ ಸಂಭವಿಸಿದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಉಪವಿಭಾಗ ಆಸ್ಪತ್ರೆಗೆ ರವಾನಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
-ಪುಷ್ಪರಾಣಿ, ವೈದ್ಯಾಧಿಕಾರಿ, ಹನೂರು
ವರ್ಷದಿಂದ ವರ್ಷಕ್ಕೆ ಪಟಾಕಿ ವ್ಯಾಪಾರ ಕಡಿಮೆಯಾಗುತ್ತಿದೆ. ಕಳೆದ 2 ವರ್ಷಗಳ ಹಿಂದೆ ಉತ್ತಮ ವ್ಯಾಪಾರ ನಡೆದಿತ್ತು. ಆದರೆ, ಕಳೆದ ವರ್ಷ ವ್ಯಾಪಾರ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡು ಪಟ್ಟಣದ 3 ಅಂಗಡಿಯಿಂದ ಸುಮಾರು 14 ಲಕ್ಷ ವಹಿವಾಟು ಮಾತ್ರ ನಡೆದಿತ್ತು. ಆದರೆ, ಈ ವರ್ಷ ಇನ್ನೂ ಇಳಿಮುಖವಾಗುವ ಸಾಧ್ಯತೆಯಿದೆ.
-ರಾಜು, ಪಟಾಕಿ ವ್ಯಾಪಾರಿ, ಹನೂರು
* ವಿನೋದ್ ಎನ್ ಗೌಡ