ನಾನು ಆಗ ಧಾರವಾಡದ ಕರ್ನಾಟಕ ವಿವಿಯಲ್ಲಿ ಎಂಎ ಪರೀಕ್ಷೆ ತೆಗೆದುಕೊಂಡಿದ್ದೆ. ಪರೀಕ್ಷೆ ಬರೆಯಲು, ನಾನು ಕೆಲಸ ಮಾಡುತ್ತಿದ್ದ ಸ್ಥಳದಿಂದ ಪ್ರತಿನಿತ್ಯ ಓಡಾಡುತ್ತಿದ್ದೆ. ಹೀಗಿರುವಾಗ, ಮೂರನೇ ಪತ್ರಿಕೆ ಇದ್ದ ದಿನ ಆವತ್ತು ಹಾವೇರಿ ಜಿಲ್ಲೆಯಾದ್ಯಂತ ರಸಗೊಬ್ಬರಕ್ಕಾಗಿ ರೈತರು ಹೋರಾಟವನ್ನು ಮಾಡುತ್ತಿದ್ದರು.ನಾನು ಪ್ರಯಾಣಿಸುತ್ತಿದ್ದ ಬಸ್ ಶಿಗ್ಗಾವಿಯನ್ನು ಆಗತಾನೇ ತಲುಪಿತ್ತು. ನೂರಾರು ವಾಹನಗಳು ಟ್ರಾಫಿಕ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದವು. ಇನ್ನೂ ನಿಧಾನ ಆಗಬಹುದು ಅಂತ ನಾನು, ವಾಹನಗಳು ಎಷ್ಟು ದೂರದವರೆಗೆ ನಿಂತಿವೆ? ಟ್ರಾಫಿಕ್ ಕ್ಲಿಯರ್ ಆಗಲು ಎಷ್ಟು ಸಮಯವಾಗಬಹುದೆಂದು ತಿಳಿಯಲು ಬಸ್‌ನಿಂದ ಕೆಳಗೆ ಇಳಿದೆ. ಹತ್ತು ನಿಮಿಷಗಳಲ್ಲಿ ಟ್ರಾಫಿಕ್ ಕ್ಲಿಯರ್ ಆಯ್ತು. ವಾಪಸ್ ಓಡಿ ಬಂದು ನಮ್ಮ ಬಸ್ ಎಲ್ಲಿ ಅಂತ ನೋಡ್ತೀನಿ, ಕಾಣ್ತಾನೇ ಇಲ್ಲ. ಮೈ ಬೆವರ ತೊಡಗಿತು. ಬಸ್ ನಂಬರ್ ಬೇರೆ ಬರೆದು ಕೊಂಡಿಲ್ಲ. ಏನು ಮಾಡುವುದು? ಸಿಕ್ಕ ಸಿಕ್ಕವರನ್ನು ಕೇಳಿದೆ. ಬಸ್ಟ್ಯಾಂಡಿಗೆ ಬೇಗ ಹೋಗಿ, ಸಿಗಬಹುದು ಎಂದರು. ಆಟೋದಲ್ಲಿ ಬಸ್ಟ್ಯಾಂಡಿಗೆ ಹೋದರೆ, ಅಲ್ಲಿ ಈಗ ತಾನೇ ಹೊರಟು ಹೋಯ್ತು ಎಂಬ ಉತ್ತರ ಸಿಕ್ಕಿತು. ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ, ಮತ್ತೂಂದು ಬಸ್ ಹತ್ತಿದೆ. ನಿರ್ವಾಹಕನಿಗೆ ನಡೆದ ಘಟನೆಯನ್ನು ತಿಳಿಸಿದೆ. ಡ್ರೈವರ್ ಬಳಿ ನಡೆದು ವೇಗವಾಗಿ ಬಸ್ ಓಡಿಸಲು ವಿನಂತಿಸಿದೆ. ನನ್ನ ಮನವಿಗೆ ಬೆಲೆ ಕೊಟ್ಟ ಡ್ರೈವರ್ ಅಣ್ಣ ವೇಗವಾಗಿ ಬಸ್‌ನ ಓಡಿಸಿ, ಹುಬ್ಬಳ್ಳಿಯ ಹಳೆ ಬಸ್ಟಾಂಡ್‌ಗೆ ತಲುಪಿಸಿದರು. ಲಗುಬಗನೇ ಕೆಳಗಿಳಿದು ಮೊದಲು ಹತ್ತಿದ್ದ ಬಸ್ ಅನ್ನು ಹುಡುಕಾಡಿದೆ. ಕೆಲವೇ ನಿಮಿಷಗಳ ಹಿಂದೆ ನಿರ್ಗಮಿಸಿತು ಅಂದರು. ಬರಸಿಡಿಲು ಬಡಿದಂತಾಯಿತು. ಅದೇ ಸಮಯದಲಿ, ಒಬ್ಬ ಮಹಿಳಾ ಪೊಲೀಸ್ ಪೇದೆಯ ಕೈಯಲ್ಲಿ ನನ್ನ ಬ್ಯಾಗ… ಕಾಣಿಸಿತು.
ಹೋದ ಜೀವ ಮರಳಿ ಬಂದಂತಾಗಿ ಓಡೋಡಿ ಹೋಗಿ,’ಮೇಡಮ್ ಇದು ನನ್ನ ಬ್ಯಾಗ… ಅಂದೆ. “ಹೌದಾ!ಕೆಲವು ನಿಮಿಷಗಳ ಹಿಂದೆ,ಒಬ್ಬ ಪ್ರಯಾಣಿಕ ಇದನ್ನು ಕೊಟ್ಟು,ಸಂಬಂಧಿಸಿದವರಿಗೆ ಕೊಡಿ ಎಂದು ಹೇಳಿ ಹೋದ’ ಅಂದರು.
ಬ್ಯಾಗಿನೊಳಗಿರುವ ಆಧಾರ್ ಕಾರ್ಡ್,ಬ್ಯಾಂಕ್ ಪಾಸ್‌ಬುಕ್,ಹಾಲ… ಟಿಕೆಟ್, 2 ಸಾವಿರ ರೂ.ಬಗ್ಗೆ ಮಾಹಿತಿ ಹೇಳಿದೆ. ಖಚಿತಪಡಿಸಿಕೊಂಡು, ನನ್ನ ಕೈ ಗೆ ಬ್ಯಾಗ್ ನೀಡಿದರು. ಬ್ಯಾಗ್ ಸಿಕ್ಕ ಖುಷಿಗಿಂತ “ಆಪದಾºಂಧವ’ನಾಗಿ ನನ್ನ ಬ್ಯಾಗನ್ನು ಹಿಂತಿರುಗಿಸಿದ ಆ ವ್ಯಕ್ತಿಗೆ ದೊಡ್ಡ ನಮಸ್ಕಾರ ಹಾಕಿದೆ. ಈಗಲೂ ಅವರ ನೆರವನ್ನು ನೆನಪಿಸಿಕೊಳ್ಳುತ್ತೇನೆ.
ಮಲ್ಲಪ್ಪ ಫ. ಕರೇಣ್ಣನವರ