ಬೆಂಗಳೂರು: “ಓದುಗನಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕುವ ಕೃತಿಯೇ ಶ್ರೇಷ್ಠವಾದ ಕೃತಿ’ ಎಂದು ನಿರ್ದೇಶಕ ಪಿ.ಶೇಷಾದ್ರಿ ಅಭಿಪ್ರಾಯಪಟ್ಟರು. ಟೋಟಲ್ ಕನ್ನಡ ಪ್ರಕಾಶನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ “ಚಿಪ್ಪಿನಲ್ಲಿ ಮುತ್ತುಗಳು’ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಕನ್ನಡದಲ್ಲಿ ಸಾಕಷ್ಟು ಕೃತಿಗಳು ಬಿಡುಗಡೆಯಾಗುತ್ತಿವೆ. ಆದರೆ, ಜನರ ಸ್ಮರಣೆಯಲ್ಲಿ ಉಳಿಯುವ ಸಾಹಿತ್ಯ ತೀರ ಕಡಿಮೆ ಎಂದು ವಿಷಾದ ವ್ಯಕ್ತಪಡಿಸಿದರು.
ಇಂದಿನ ಯುವಕರು ನೆನಪಿನಲ್ಲಿ ಉಳಿಯುವಂತಹ ಕೃತಿಗಳನ್ನು ರಚನೆ ಮಾಡಬೇಕು. ಇದಕ್ಕೆ ಆಸಕ್ತಿ, ಉತ್ಸಾಹದ ಜತೆಗೆ ಹೆಚ್ಚು ಕೃತಿಗಳನ್ನು ಓದುವ ಅವಶ್ಯಕತೆಯೂ ಇದೆ. ಚಿಪ್ಪಿನಲ್ಲಿ ಮುತ್ತುಗಳು ಪುಸ್ತಕ ಮನೋರಂಜನೆಯ ಸಾಹಿತ್ಯದ ಜತೆಗೆ ಮನೋ ವಿಕಸನದ ಪುಸ್ತಕವೂ ಆಗಿದೆ ಎಂದರು. ಸಾಹಿತಿ ಪ್ರೊ.ಅಶ್ವತ್ಥ ನಾರಾಯಣ ಮಾತನಾಡಿ, ಕನ್ನಡ ಸಾಹಿತ್ಯದಲ್ಲಿ ಹಲವು ವಿಶೇಷ ಕೃತಿಗಳಿವೆ. ಆದರೆ, ಅನ್ಯ ಭಾಷೆಗೆ ಅನುವಾದವಾದ್ದು ಕಡಿಮೆ. ಕೆಲವು ಶೇಷ್ಠ ಸಾಹಿತಿಗಳ ಕೃತಿಗಳ ಮಾತ್ರ ಅನುವಾದವಾಗಿವೆ. ಅದರಲ್ಲೂ ಕೆಲವು ದೋಷಗಳಾಗಿವೆ ಎಂದರು.
ಕುವೆಂಪು ಅವರು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವಾಗ ಮಂತ್ರಾಕ್ಷತೆ ಎನ್ನುವ ಪುಸ್ತಕವನ್ನು ಬರೆದಿದ್ದರು. ಇದು ಅವರ ಮಹಾಕಾವ್ಯಗಳ ಮುಂದೆ ಮಂಕಾಗುತ್ತದೆ. ಇದನ್ನು ಕುವೆಂಪು ಅವರೇ ಬರೆದರೇ ಎನ್ನುವ ಅನುಮಾನ ಮೂಡುತ್ತದೆ. ಅದೇ ರೀತಿ ಕನ್ನಡದಲ್ಲಿ ಈಗ ಬರೆಯುತ್ತಿರುವ ಯುವಕರನ್ನು ಅವರ ಪ್ರಸಕ್ತ ಕೃತಿಗಳಿಂದ ತಿರಸ್ಕರಿಸಬಾರದು. ಕನ್ನಡದಲ್ಲಿನ ಹಲವು ಯುವ ಕವಿಗಳಿಗೆ ಉಜ್ವಲ ಭವಿಷ್ಯವಿದೆ ಎಂದರು.
ಲೇಖಕ ಡಾ.ರಾಘವೇಂದ್ರ ಎಫ್.ಎನ್ ಮಾತನಾಡಿ, ಎಲ್ಲರಿಗೂ ಜೀವನದಲ್ಲಿ ತಮ್ಮದೇ ಆದ ಆಸಕ್ತಿಗಳು ಇರುತ್ತವೆ. ಉದ್ಯೋಗದ ಒತ್ತಡದಲ್ಲಿ ನಮ್ಮ ಆಸಕ್ತಿಗಳನ್ನು ಕೊಲ್ಲಬಾರದು. ವೈದ್ಯಕೀಯ ಸೇವೆಯ ನಡುವೆ ಬಿಡುವಾದಾಗ ಬರೆಯುತ್ತಿದ್ದೇನೆ ಎಂದು ಹೇಳಿದರು.
ಮುಕ್ತ ವಿಮರ್ಶೆಗೆ ವೇದಿಕೆಯಾದ ಕಾರ್ಯಕ್ರಮ: ವಿಮರ್ಶೆ ಮತ್ತು ನವ ಸಾಹಿತ್ಯಗಳಿಗೆ ಪ್ರೋತ್ಸಾಹ ನೀಡುವ ಬಗ್ಗೆ ಕಾರ್ಯಕ್ರಮದಲ್ಲಿ ಮುಕ್ತ ಚರ್ಚೆಗೆ ನಿರ್ದೇಶಕ ಪಿ.ಶೇಷಾದ್ರಿ ಹಾಗೂ ಸಾಹಿತಿ ಪ್ರೊ.ಅಶ್ವತ್ಥ ನಾರಾಯಣ ಅವರು ನಾಂದಿ ಹಾಡಿದರು.”ನಾಮಕರಣಕ್ಕೆ ಬರುವ ಎಲ್ಲರೂ ಮಕ್ಕಳು ಚೆನ್ನಾಗಿದೆ ಎನ್ನುತ್ತಾರೆ. ಆದರೆ, ಕೃತಿಯ ವಿಮರ್ಶೆ ಮಾಡುವುದು ಭಿನ್ನ ಸಂಗತಿ. ಕೃತಿ ವಿಮರ್ಶೆ ವ್ಯಕ್ತಿ ನಿಷ್ಠೆಯಾಗಬಾರದು, ವಸ್ತು ನಿಷ್ಠವಾಗಿರಬೇಕು.
ವ್ಯಕ್ತಿ ನಿಷ್ಠೆಯಾದರೆ ಮೂಲ ಆಶಯವೇ ಕಮರುತ್ತದೆ. ಕನ್ನಡದಲ್ಲಿ ಕೆಲವು ವಿಮರ್ಶೆಗಳು ವಸ್ತು ನಿಷ್ಠತೆಯ ಮೇಲೆ ಬರೆಯಲಾಗುತ್ತಿದೆ’ ಎಂದು ವಿಷಾದ ವ್ಯಕ್ತಪಡಿಸಿದರು. ಪಿ.ಶೇಷಾದ್ರಿ ಮಾತನಾಡಿ, ಬೆಳೆಯುವ ಸಾಹಿತಿಗಳನ್ನು ತಿದ್ದಿ ಬೆಳಸಬೇಕು. ಆರಂಭದಲ್ಲಿ ಮೂದಲಿಸಬಾರದು. ಚಿಪ್ಪಿನಲ್ಲಿ ಮುತ್ತುಗಳು ಕೃತಿಯಲ್ಲಿನ ಎಲ್ಲ ಬರಹವೂ ಚೆನ್ನಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಇದು ಮನೋವಿಕಾಸನಕ್ಕೆ ಅವಕಾಶ ನೀಡುವ ಕೃತಿ ಎಂದರು.