Advertisement

ಮಠವನ್ನು ಸಮಾಜಮುಖಿಯನ್ನಾಗಿಸಿದ ಮಹಾನ್‌ ಸ್ವಾಮೀಜಿ

08:15 AM Mar 01, 2018 | |

ಚೆನ್ನೈ: ಕಂಚಿ ಕಾಮಕೋಟಿ ಮಠವನ್ನು ಕೇವಲ ಧಾರ್ಮಿಕ ಕೇಂದ್ರವಾಗಿರಿಸದೇ ಅದನ್ನು ಸಮಾಜ ಮುಖೀಯಾಗಿಸಿದ್ದು ಜಯೇಂದ್ರ ಸರಸ್ವತಿ ಶ್ರೀಗಳ ಹೆಗ್ಗಳಿಕೆ. ಪೀಠಾಧ್ಯಕ್ಷರಾಗಿ, ತಮ್ಮ ಅಧಿಕಾರಾವಧಿಯಲ್ಲಿ ಬಡವರ ಹಾಗೂ ಬುಡಕಟ್ಟು ಜನಾಂಗದ ಅಭಿವೃದ್ಧಿಗಾಗಿ ಹಲವಾರು ಸಂಸ್ಥೆಗಳನ್ನು ಹುಟ್ಟುಹಾಕಿದ ಅವರು, ಹಿಂದುಳಿದವರನ್ನು ಮುಖ್ಯ ವಾಹಿನಿಗೆ ತರಲು ಸಾಕಷ್ಟು ಶ್ರಮಿಸಿದರು. ಇವರ ಆಶ ಯದ ಮೇರೆಗೆ, ಮಠದ ವತಿಯಿಂದ ಶಾಲೆ, ಕಾಲೇಜು ಗಳು, ಆಸ್ಪತ್ರೆಗಳು ಆರಂಭವಾಗಿ, ಆರ್ಥಿಕವಾಗಿ ಹಿಂದುಳಿದವರ ಮಕ್ಕಳಿಗೆ ಶಿಕ್ಷಣ ನೀಡಿದರು. 

Advertisement

 ಜನರ ಕಷ್ಟ ಕಾರ್ಪಣ್ಯಗಳನ್ನು ಆಲಿಸುವ ಉದ್ದೇಶದಿಂದ ತಾವೇ ನೇರವಾಗಿ ಜನತಾ ದರ್ಶನ ಆರಂಭಿಸಿದ ಹೆಗ್ಗಳಿಕೆ ಇವರದ್ದು. ಈ ಮೂಲಕ, ಮಠಾಧಿಪತಿಯೆಂದರೆ, ಮಠದ ಒಳಗೆಲ್ಲೋ ಪೂಜೆ, ಪುನಸ್ಕಾರ ಮಾಡಿಕೊಂಡು ಜನರಿಂದ ದೂರ ಉಳಿಯುವಂಥವರು ಎಂಬ ಮಾತನ್ನು ಸುಳ್ಳಾಗಿಸಿದರು. ಜನರೊಂದಿಗೆ ನೇರವಾಗಿ ಮಾತುಕತೆ ನಡೆಸಿ, ಅವರ ಕುಂದುಕೊರತೆಗಳನ್ನು ಆಲಿಸಿ, ಮಠದಿಂದ ಆಗಬಹುದಾದ ಸಹಾಯ ಕಲ್ಪಿಸಲಾರಂಭಿಸಿದರು. 

“ಧರ್ಮ ಜಾಗೃತಿ’ ವಿಚಾರದಲ್ಲಿ ಕಂಚಿ ಶ್ರೀಗಳ ಸೇವೆ ಚಿರಸ್ಮರಣೀಯ. ಕಿರಿಯ ಶ್ರೀಗಳಿದ್ದಾಗಲೇ ಮಠದ ಪೀಠಾಧ್ಯಕ್ಷರಾಗಿದ್ದ ಚಂದ್ರಶೇಖರೇಂದ್ರ ಸರಸ್ವತಿ ಶ್ರೀಗಳ ಜತೆಗೆ, “ಮಹಾ ಪರಿಯಾವ’ ಯಾತ್ರೆ ನಡೆಸಿ, ಆ ಮೂಲಕ  ದೇಶದ ಉದ್ದಗಲಕ್ಕೂ ಸಂಚರಿಸಿ, ಹಿಂದೂ ಧರ್ಮವನ್ನು ಜಾಗೃತಗೊಳಿಸುವ ಕೆಲಸ ಮಾಡಿದ್ದರು. ತಾವು ಪೀಠಾಧ್ಯಕ್ಷರಾದ ನಂತರವೂ, ಇಂಥ ಹಲವಾರು ಜಾಗೃತ ಕಾರ್ಯಕ್ರಮಗಳನ್ನು ಮಾಡಿ, ಜನತಾ ದರ್ಶನದ ಮೂಲಕ ಹಲವಾರು ಕುಗ್ರಾಮಗಳಿಗೂ ಮಠದ ನೆರವು ದೊರೆಯುವಂತೆ ನೋಡಿಕೊಂಡರು. ಅಯೋಧ್ಯೆ ಸಮಸ್ಯೆ ನಿವಾರಣೆಗೆ, ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ), ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ನಾಯಕರ ನಡುವೆ ಒಮ್ಮತದ ಅಭಿಪ್ರಾಯ ರೂಪಿಸಲು ಸಾಕಷ್ಟು ಶ್ರಮ ವಹಿಸಿದ್ದರು. 

ಪರೋಕ್ಷವಾಗಿ ಹಿಂದುತ್ವ ಜಾಗೃತವಾಗುವಂತೆ ನೋಡಿಕೊಂಡರು. ಅಯೋಧ್ಯೆ ಸಮಸ್ಯೆ ಪರಿಹಾರಕ್ಕೆ ಶ್ರೀಗಳು ಕೈ ಜೋಡಿಸಿದ್ದರು. 
ಶ್ರೀ ತಂತ್ರಂ ವಿದ್ಯಾಪೀಠ ವತಿಯಂದ ಆಸಕ್ತರಿಗೆ ಪೌರೋಹಿತ್ಯದ ಅರ್ಹತೆ ಪಡೆಯಲು ನೆರವಾದರು. ಈ ವಿದ್ಯಾಸಂಸ್ಥೆಯಲ್ಲಿ, ಯಾವುದೇ ಜಾತಿ, ಧರ್ಮದ ಬೇಧವಿಲ್ಲದೆ ಆಸಕ್ತರು ವೇದಾಧ್ಯಯನ ಮಾಡಲು ಸಾಧ್ಯವಾಯಿತು.  ಕೇರಳದಲ್ಲಿರುವ ಹಲವಾರು ದೇಗುಲಗಳಲ್ಲಿ ತಂತ್ರಂ ವಿದ್ಯಾಪೀಠದಿಂದ ಪ್ರಮಾಣ ಪತ್ರ ಪಡೆದ ಪುರೋಹಿತರನ್ನು ಕಾಣಬಹುದು. 

Advertisement

Udayavani is now on Telegram. Click here to join our channel and stay updated with the latest news.

Next