Advertisement

ಪೋಷಣಾ ಅನುದಾನ ಯೋಜನೆ: ಕೇಂದ್ರ, ರಾಜ್ಯದಿಂದ ಅನುದಾನ ಬಿಡುಗಡೆಯಾಗಿಲ್ಲ

01:29 AM Mar 17, 2022 | Team Udayavani |

ಬೆಂಗಳೂರು: ಪೋಷಣಾ ಅನುದಾನ ಯೋಜನೆಗೆ 2021-22ನೇ ಸಾಲಿನಲ್ಲಿ 85 ಕೋಟಿ ರೂ. ನಿಗದಿಯಾಗಿದ್ದು, ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಇದಕ್ಕೆ ಯಾವುದೇ ಅನುದಾನ ಬಿಡುಗಡೆ ಆಗಿಲ್ಲ.ಇದನ್ನು ಸ್ವತಃ ಸರಕಾರವೇ ವಿಧಾನಪರಿಷತ್‌ ನಲ್ಲಿ ಲಿಖಿತ ರೂಪದಲ್ಲಿ ಸ್ಪಷ್ಟಪಡಿಸಿದೆ.

Advertisement

ಕಾಂಗ್ರೆಸ್‌ನ ಮಂಜುನಾಥ್‌ ಭಂಡಾರಿ ಅವರು ಪೋಷಣಾ ಅಭಿಯಾನ ಕಾರ್ಯಕ್ರಮದಡಿ ಮಂಜೂರಾದ, ಬಿಡುಗಡೆಯಾದ ಮತ್ತು ಬಾಕಿ ಇರುವ ಅನುದಾನ ಎಷ್ಟು ಎಂದು ಚುಕ್ಕೆಗುರುತಿಲ್ಲದ ಪ್ರಶ್ನೆ ಅಡಿ ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್‌, ಪೋಷಣಾ ಅಭಿಯಾನ ಯೋಜನೆ ಅಡಿ 2021-22ನೇ ಸಾಲಿನಲ್ಲಿ 85 ಕೋಟಿ ರೂ. ನಿಗದಿಯಾಗಿದ್ದು, ಇದರಲ್ಲಿ ರಾಜ್ಯದ ಪಾಲು ಶೇ. 40 ಹಾಗೂ ಕೇಂದ್ರದ್ದು ಶೇ. 60ರಷ್ಟು ಇರುತ್ತದೆ. ಆದರೆ, ಯಾವುದೇ ಅನುದಾನ ಬಿಡುಗಡೆ ಆಗಿಲ್ಲ ಎಂದು ಹೇಳಿದ್ದಾರೆ.

ಉದ್ದೇಶಿತ ಅಭಿಯಾನದ ಮುಖ್ಯ ಉದ್ದೇಶ ಮಕ್ಕಳಲ್ಲಿನ ಕುಂಠಿತ ಬೆಳವಣಿಗೆ ತಡೆಗಟ್ಟುವುದು, ಅಪೌಷ್ಟಿಕತೆ ತಡೆಗಟ್ಟುವುದು, ರಕ್ತಹೀನತೆಯ ಪ್ರಮಾಣವನ್ನು ಕಡಿಮೆಗೊಳಿಸುವುದು, 15-49 ವರ್ಷದ ಹೆಣ್ಣುಮಕ್ಕಳಲ್ಲಿ ಮತ್ತು ಮಹಿಳೆಯರಲ್ಲಿ ರಕ್ತಹೀನತೆ ತಡೆಗಟ್ಟುವುದು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಒಳಗೊಂಡಿದೆ. ಎಲ್ಲ ಅಂಗನವಾಡಿಗಳಲ್ಲಿ ಸಮುದಾಯ ಆಧಾರಿತ ಚಟುವಟಿಕೆಗಳನ್ನು ಪ್ರತಿ ತಿಂಗಳು ಮೊದಲ ಮತ್ತು ಮೂರನೇ ಶುಕ್ರವಾರ ನಡೆಸಲಾಗುತ್ತದೆ. ಇದರ ಮೂಲಕ ತಾಯಂದಿಯರಿಗೆ ಅರಿವು ಮೂಡಿಸಲಾಗುತ್ತದೆ. ವಿವಿಧ ಇಲಾಖೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ.

ಇದೇ ವೇಳೆ ಮಂಗಳವಾರ ವಿಧಾನಪರಿಷತ್‌ನಲ್ಲಿ ಹಣಕಾಸು ಇಲಾಖೆ ಮೇಲೆ ಮುಗಿಬಿದ್ದ ಮೇಲ್ಮನೆ ಸದಸ್ಯರು, ಈ ಇಲಾಖೆಗೆ ತುರ್ತು ಚಿಕಿತ್ಸೆ ಆವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟರು.

ಹಣಕಾಸು ಇಲಾಖೆಯೇ ಸಿಎಂ?
ಕಾಂಗ್ರೆಸ್‌ನ ಮಂಜುನಾಥ್‌ ಭಂಡಾರಿ ಮಾತನಾಡಿ, ಹಣಕಾಸು ಇಲಾಖೆಯ ಧೋರಣೆ ನೋಡಿದರೆ, ಈ ಸರಕಾರವನ್ನು ನಡೆಸುತ್ತಿದೆಯೇ ಎಂಬ ಅನುಮಾನ ಬರುತ್ತಿದೆ. ಒಂದು ವೇಳೆ ಹೌದಾದರೆ, ಮುಖ್ಯಮಂತ್ರಿಗಳಾÂಕೆ? ಶಾಸಕರು, ಪರಿಷತ್ತಿನ ಸದಸ್ಯರು ಯಾಕೆ? ಇದು ಜನಪ್ರತಿನಿಧಿಗಳಿಗೆ ಆದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗ್ರಾ.ಪಂ. ಸದಸ್ಯರ ಗೌರವಧನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸ್ವತಃ ಮುಖ್ಯಮಂತ್ರಿಗಳು ಕಳುಹಿಸಿದ ಪ್ರಸ್ತಾವನೆಯನ್ನೇ ಹಣಕಾಸು ಇಲಾಖೆ ತಿರಸ್ಕರಿಸುತ್ತದೆ. ಮುಖ್ಯಮಂತ್ರಿಗಳ ಸೂಚನೆಗೇ ಬೆಲೆ ಇಲ್ಲ. ಅವರನ್ನು ಕೇಳಿಯೇ ಎಲ್ಲವನ್ನೂ ಮಾಡುವುದಾದರೆ ನಾವೇಕೆ? ಹಲವು ವರ್ಷಗಳಿಂದ ಕೆಲವು ಅಧಿಕಾರಿಗಳು ಹಣಕಾಸು ಇಲಾಖೆಯಲ್ಲಿಯೇ ಬೀಡು ಬಿಟ್ಟಿದ್ದಾರೆ. ಮುಖ್ಯಮಂತ್ರಿಗಳು ಹಣಕಾಸು ಇಲಾಖೆಯನ್ನು ಅಧಿಕಾರಿಗಳ ಕೈಗಿಟ್ಟು ಕುಳಿತಿದ್ದಾರೆ. ಆದ್ದರಿಂದ ಉತ್ತಮವಾಗಿ ನಿರ್ವಹಣೆ ಮಾಡುವ ಸಾಮರ್ಥ್ಯ ಇರುವ ಮಂತ್ರಿಗಳಿಗೆ ವಹಿಸಬೇಕೆಂದು ಅವರು ಅಭಿಪ್ರಾಯಪಟ್ಟರು.

Advertisement
Advertisement

Udayavani is now on Telegram. Click here to join our channel and stay updated with the latest news.

Next