ಬಾಗಲಕೋಟೆ: ಸಿದ್ದರಾಮಯ್ಯ ಅವರಿಗೆ ಯಾರೂ ಸರಿಸಾಟಿ ಇಲ್ಲ. ಅವರ ಸರ್ಕಾರದಲ್ಲಿ ಸಾಮಾಜಿಕ ನ್ಯಾಯವಿತ್ತು. ಎಲ್ಲ ಸಮುದಾಯದವರೂ ಸಚಿವರಾಗಿ ದ್ದರು. ಮೈತ್ರಿ ಸರ್ಕಾರ ಬೀಳಲು ಸಿದ್ದರಾಮಯ್ಯ ಕಾರಣವೆಂದು ಕುಮಾರಸ್ವಾಮಿ-ದೇವೇಗೌಡರು ಆರೋಪಿಸುತ್ತಿದ್ದಾರೆ. ದೇವೇಗೌಡರ ಕುಟುಂಬ ಮತ್ತೂಮ್ಮೆ ಹುಟ್ಟಿ ಬಂದ್ರೂ ಸಿದ್ದರಾಮಯ್ಯನವರ ಹೆಸರು ಕೆಡಿಸಲು ಸಾಧ್ಯವಿಲ್ಲ ಎಂದು ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.
ನೆರೆ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ ವಿತರಿಸಲು ಆಗಮಿಸಿದ್ದ ಅವರು ಮುಧೋಳ ದಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿ, ಸಿದ್ದರಾಮಯ್ಯ ಮತ್ತೂಮ್ಮೆ ಈ ರಾಜ್ಯದ ಮುಖ್ಯಮಂತ್ರಿಯಾ ದರೆ ಬಹಳ ಖುಷಿ. ಅವರ ಸಚಿವ ಸಂಪುಟ ಬಸವಣ್ಣನವರ ಅನುಭವ ಮಂಟಪದಂತಿತ್ತು ಎಂದರು. ದೇವೇಗೌಡರಿಗೆ ಅರೆ ವಯಸ್ಸು. 80 ವರ್ಷ ಆಗಿದೆ. ಮಾಜಿ ಪ್ರಧಾನಿ ಆಗಿರುವ ಹಿನ್ನೆಲೆಯಲ್ಲಿ ಅವರ ಬಗ್ಗೆ ಗೌರವವಿದೆ. ವಯಸ್ಸಾದ ಮೇಲೆ ಮಕ್ಕಳು ಆಡಿದಂತೆ ಆಡ್ತಾರೆ ಎನ್ನುತ್ತಾರೆ. ಹೀಗಾಗಿ, ದೇವೇಗೌಡರೂ ಈಗ ಮಕ್ಕಳಂತಾಗಿದ್ದಾರೆ. ಮಕ್ಕಳು ಯಾವ ರೀತಿ ಆಡ್ತಾರೆ ಎಂಬುದು ಗೊತ್ತಲ್ಲ ಎಂದರು.
ಡಿಕೆಶಿ ಅರ್ಥ ಮಾಡಿಕೊಳ್ಬೇಕು: ಕಾರು-ಮನೆ ಬೇಕಾದ ವರು ವಿರೋಧ ಪಕ್ಷದ ನಾಯಕರಾಗಲಿ ಎಂಬ ಡಿ.ಕೆ.ಶಿವಕುಮಾರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ಈ ಹೇಳಿಕೆಯನ್ನು ನಾನು ಗಮನಿಸಿಲ್ಲ. ಸಿದ್ದರಾಮಯ್ಯ ಉದ್ದೇಶಿಸಿಯೇ ಆ ರೀತಿ ಹೇಳಿಕೆ ನೀಡಿದ್ದರೆ ಸರಿಯಲ್ಲ. ಒಬ್ಬ ಪ್ರಬುದ್ಧ ರಾಜಕಾರಣಿ ಆಗಿ ಶಿವಕುಮಾರ ಅವರೇ ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.
ಕುರುಬ ಸಮಾಜಕ್ಕೆ ಡಿಸಿಎಂ ಸ್ಥಾನ: ಬಿಜೆಪಿ ಸರ್ಕಾರದಲ್ಲಿ ಕುರುಬ ಸಮಾಜಕ್ಕೆ ಡಿಸಿಎಂ ಸ್ಥಾನ ಕೊಡಬೇಕಿತ್ತು. ಹಿಂದುಳಿದ ವರ್ಗದವರಿಗೆ ಡಿಸಿಎಂ ಸ್ಥಾನ ಕೊಡಬೇಕೆಂಬ ಕೂಗಿತ್ತು. ಕೊಟ್ಟಿಲ್ಲ. ಇನ್ನೂ ಕಾಲ ಮಿಂಚಿಲ್ಲ. ಈಶ್ವರಪ್ಪ ಅವರೇ ಅಂತೇನಿಲ್ಲ. ಸಾಮಾಜಿಕ ನ್ಯಾಯದಡಿ ಡಿಸಿಎಂ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.
ಮಠಾಧೀಶರ ಹೋರಾಟ: ಪ್ರವಾಹದಿಂದ ಜನರು ತತ್ತರಿಸಿದ್ದಾರೆ. ಇಲ್ಲಿನ ಜನರ ಸಂಕಷ್ಟ ಅರಿಯಲು ಸ್ವತ: ಪ್ರಧಾನಿ ನರೇಂದ್ರ ಮೋದಿ ಬರಬೇಕು. ರಾಜ್ಯಕ್ಕೆ ಅತಿ ಹೆಚ್ಚು ಅನುದಾನ ಕಲ್ಪಿಸಬೇಕು. ಅನುದಾನ ನೀಡುವಲ್ಲಿ ತಾರತಮ್ಯ ಮಾಡಬಾರದು. ಕೇಂದ್ರ-ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ಸಂತ್ರಸ್ತರಿಗೆ ಕೂಡಲೇ ಸಮರ್ಪಕ ಪರಿಹಾರ ನೀಡಬೇಕು. ಇಲ್ಲದಿದ್ದರೆ ಹಿಂದುಳಿದ, ದಲಿತ ಮಠಾಧೀಶರೆಲ್ಲ ಸೇರಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಭೋವಿ ಪೀಠದ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ತುಮಕೂರಿನ ಶ್ರೀ ಮಹಾಲಿಂಗ ಸ್ವಾಮೀಜಿ, ಸಿರಗುಪ್ಪದ ಶ್ರೀ ಬಸವಭೂಷಣ ಸ್ವಾಮೀಜಿ, ಮುಧೋಳದ ಸತೀಶ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಸತೀಶ ಬಂಡಿವಡ್ಡರ ಉಪಸ್ಥಿತರಿದ್ದರು.