ಮಹಾನಗರ: ಕೃಷಿಕರು ದೇಶದ ಬೆನ್ನೆಲುಬು. ಅವರಿಗೆ ನೆರವಾಗುವುದು ಸರಕಾರದ ಕರ್ತವ್ಯ. ಆದ್ದರಿಂದ ರೈತರು ರಾಷ್ಟ್ರೀಕೃತ ಬ್ಯಾಂಕುಗಳಿಂದ ಪಡೆದ ಸಾಲವನ್ನು ಕೇಂದ್ರ ಸರಕಾರ ಮನ್ನಾ ಮಾಡಬೇಕು ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಆಗ್ರ ಹಿಸಿದರು.
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ರೈತರ ಸಾಲವನ್ನು ಮನ್ನಾ ಮಾಡಲು ಆಗ್ರ ಹಿಸಿ ಯುವ ಕಾಂಗ್ರೆಸ್ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ ಸಮಿತಿ ವತಿಯಿಂದ ನಗರದ ಸ್ಟೇಟ್ ಬ್ಯಾಂಕ್ ಎದುರುಗಡೆ ಗುರುವಾರ ನಡೆದ ಪ್ರತಿಭಟನ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯ ಸರಕಾರ ಸಹಕಾರಿ ಸಂಸ್ಥೆಗಳ ಸಾಲವನ್ನು ಮನ್ನಾ ಮಾಡಿದರೆ ಕೇಂದ್ರ ಸರಕಾರವು ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ರೈತರು ಪಡೆದ ಸಾಲವನ್ನು ಮನ್ನಾ ಮಾಡುವುದು ಎಂದು ರಾಜ್ಯದ ಸಂಸದರು ಈ ಹಿಂದೆ ಹೇಳಿದ್ದರು. ಈಗ ರಾಜ್ಯ ಸರಕಾರವು ಸಹಕಾರಿ ಬ್ಯಾಂಕ್‌ಗಳಿಂದ ರೈತರು ಪಡೆದ 50ಸಾವಿ ರ ರೂ. ವರೆಗಿನ ಸಾಲವನ್ನು ಮನ್ನಾ ಮಾಡಿದೆ. ಆದರೆ ಕೇಂದ್ರ ಸರಕಾರ ರೈತರ ಸಾಲ ಮನ್ನಾ ಮಾಡಲು ಮುಂದಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮುಂಚೆ ರೈತರ ಪರವಾಗಿ ಅನೇಕ ಭರವಸೆಗಳನ್ನು ನೀಡಿದ್ದು, ಯಾವುದನ್ನೂ ಇದುವರೆಗೆ ಈಡೇರಿಸಿಲ್ಲ. ಬದಲಾಗಿ ಅವರು ಬಂಡವಾಳಶಾಹಿಗಳ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಕೇಂದ್ರ ಸರಕಾರವು ರೈತರ ಸಾಲ ಮನ್ನಾ ಮಾಡಲು ಮುಂದಾಗದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ರೀತಿಯ ಹೋರಾಟ ನಡೆಸಲಾಗುವುದು ಎಂದು ಕಾಂಗ್ರೆಸ್ ದಕ್ಷಿಣ ಕ್ಷೇತ್ರ ಸಮಿತಿ ಅಧ್ಯಕ್ಷ ಸಲೀಂ ಹೇಳಿದರು.
ಕಾರ್ಪೊರೇಟರ್ ಪ್ರವೀಣ್ ಚಂದ್ರ ಆಳ್ವ ಮತ್ತು ಯುವ ಕಾಂಗ್ರೆಸ್ ಮಂಗಳೂರು ದಕ್ಷಿಣ ವಿಧಾನಸಭಾ ಸಮಿತಿ ಅಧ್ಯಕ್ಷ ಮೆರಿಲ್ ರೇಗೊ ಅವರೂ ಮಾತನಾಡಿದರು.
ಕಾರ್ಪೊರೇಟರ್‌ಗಳಾದ ಲತೀಫ್ ಕಂದಕ್ ಮತ್ತು ರಾಧಾಕೃಷ್ಣ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂದಕ್, ಉಪಾಧ್ಯಕ್ಷ ರಮಾನಂದ ಪೂಜಾರಿ, ಪ್ರಧಾನ ಕಾರ್ಯದರ್ಶಿ ಸಾದ್, ಶೈಲೇಶ್ ಕೊಟ್ಟಾರಿ, ಸುನೀಲ್, ಕಾಂಗ್ರೆಸ್ ಮುಖಂಡರಾದ ಬಿಲಾಲ್ ಮೊದಿನ್, ಚೇತನ್, ಎನ್.ಎಸ್.ಯು.ಐ.ಜಿಲ್ಲಾಧ್ಯಕ್ಷ ಅಬ್ದುಲ್ಲಾ ಬಿನ್ನು ಅಮೀನ್, ಯೂಸುಫ್ ಕುದ್ರೋಳಿ, ಉತ್ತರ ವಿಧಾನ ಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಗಿರೀಶ್ ಆಳ್ವ, ಆರೀಫ್ ಬಾವಾ ಬಂದರ್, ಉಳ್ಳಾಲ ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಸಿ.ಎಂ ರವೂಫ್, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವರುಣ್ ಅಂಬಟ್, ಕಿರಣ್ ಬುಡ್ಲೆಗುತ್ತು, ಲಾರೆನ್ಸ್ ಡಿ’ಸೋಜಾ, ಸೌಹಾನ್ ಮೊದಲಾದವರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಸ್ಟೇಟ್ ಬ್ಯಾಂಕ್ ಎದುರಿನ ರಸ್ತೆಯಲ್ಲಿ ಪ್ರತಿಭಟನ ಸಭೆ ನಡೆಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು ಬಳಿಕ ಬ್ಯಾಂಕಿನ ದ್ವಾರದ ಬಳಿ ಧರಣಿ ಸತ್ಯಾಗ್ರಹ ನಡೆಸಿ ಕೇಂದ್ರ ಸರಕಾರ ಮತ್ತು ಪ್ರಧಾನಿ ಮೋದಿ ವಿರುದ್ಧ ಧಿಕ್ಕಾರ ಕೂಗಿ ತಮಗೆ ನ್ಯಾಯ ಬೇಕು ಎಂದು ಘೋಷಣೆ ಕೂಗಿದರು.